ಕಳಸದಲ್ಲಿ ಗಮನ ಸೆಳೆದ ಯುವ ಸಂಸತ್

7

ಕಳಸದಲ್ಲಿ ಗಮನ ಸೆಳೆದ ಯುವ ಸಂಸತ್

Published:
Updated:
Deccan Herald

ಕಳಸ: ಹೋಬಳಿಯ ರಸ್ತೆ ದುರವಸ್ಥೆ, ಮಲೆನಾಡಿನ ಕಾಫಿ ಬೆಳೆಗಾರರ ಸಮಸ್ಯೆ, ಪಾಳು ಬಿದ್ದ ಕುದುರೆಮುಖದ ಭವಿಷ್ಯ, ಆರೋಗ್ಯ ಇಲಾಖೆಯಲ್ಲಿ ವೈದ್ಯ ಸಿಬ್ಬಂದಿ ಕೊರತೆ ಹೀಗೆ ಎಲ್ಲ ಸಮಸ್ಯೆಗಳ ಚರ್ಚೆಯೂ ಬುಧವಾರ ಬಿಸಿಬಿಸಿಯಾಗಿ ನಡೆಯಿತು.

ವಿಶೇಷ ಎಂದರೆ ಪಟ್ಟಣದ ಕ್ರಿಯೇಟಿವ್ ಮೈಂಡ್ಸ್ ಸಂಸ್ಥೆಯು ರೋಟರಿ ಬಾಲಭವನದಲ್ಲಿ ಆಯೋಜಿಸಿದ್ದ ಯುವ ಸಂಸತ್ ಸ್ಪರ್ಧೆಯಲ್ಲಿ ಈ ಎಲ್ಲ ಸಮಸ್ಯೆಗಳ ಬಗ್ಗೆ ಸ್ಥಳೀಯ ವಿದ್ಯಾರ್ಥಿಗಳು ಅಣಕು ಸಂಸತ್ತಿನಲ್ಲಿ ಕುತೂಹಲಕರ ಚರ್ಚೆ ನಡೆಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪದವಿಪೂರ್ವ ಕಾಲೇಜು, ಸರ್ಕಾರಿ ಪ್ರೌಢಶಾಲೆ, ಪ್ರಬೋಧಿನಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಈ ಅಣಕು ಸಂಸತ್‍ನಲ್ಲಿ ಭಾಗವಹಿಸಿ ತಮ್ಮ ವಾಕ್ಚಾತುರ್ಯ ಮತ್ತು ಸಂಸದೀಯ ಜ್ಞಾನ ತೋರಿದರು.

ಸಾಲಮನ್ನಾದಲ್ಲಿ ಆಗುತ್ತಿರುವ ವಿಳಂಬದ ಬಗ್ಗೆಯೂ ಚರ್ಚಿಸಿದ ವಿದ್ಯಾರ್ಥಿಗಳು, ಬಸ್ ಪಾಸ್‍ಗೆ ಹಣ ಒದಗಿಸದ ಸರ್ಕಾರದ ಬಗ್ಗೆಯೂ ಕಿಡಿ ಕಾರಿದರು. ಈ ಸಾಲಿನ ಬಜೆಟ್‌ನಲ್ಲಿ ಕರಾವಳಿ ಮತ್ತು ಉತ್ತರ ಕರ್ನಾಟಕಕ್ಕೆ ಅನುದಾನ ನೀಡಿಕೆಯಲ್ಲಿ ಆಗಿರುವ ತಾರತಮ್ಯದ ಬಗ್ಗೆಯೂ ವಿದ್ಯಾರ್ಥಿಗಳು ಗಮನ ಸೆಳೆದರು.

ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಶಾಸಕರು ಮತ್ತು ಸಂಸದರು ಹೇಗೆ ಕೆಲಸ ಮಾಡುತ್ತಾರೆ ಎಂಬ ಚಿತ್ರಣವನ್ನು ಈ ಸಂಸತ್ ಕಲಾಪ ತೋರಿಸಿತು. ಬುಧವಾರದ ಕಾರ್ಯಕ್ರಮದಲ್ಲಿ ಉತ್ತಮ ಸಂಸದೀಯ ಪಟುಗಳಿಗೆ ಬಹುಮಾನ ವಿತರಿಸಲಾಯಿತು. ಕ್ರಿಯೇಟಿವ್ ಮೈಂಡ್ಸ್ ಅಧ್ಯಕ್ಷ ಪ್ರತಾಪ್, ಸ್ಥಾಪಕ ಅಧ್ಯಕ್ಷ ಮಣಿಕಂಠ, ಸರ್ಕಲ್ ಇನ್‌ಸ್ಪೆಕ್ಟರ್ ರಾಮಚಂದ್ರ, ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಕಿರಣ್, ಪತ್ರಕರ್ತ ಪ್ರಸನ್ನ ಗೌಡಹಳ್ಳಿ, ಅಂಬಿನಕುಡಿಗೆ ಸತೀಶ್‍ಚಂದ್ರ, ಉಪನ್ಯಾಸಕರಾದ ವಿಶು ಕುಮಾರ್, ಸುಧೀರ್ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !