ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೆಯಲ್ಲಿ ಶಿಕ್ಷಕರಿಗೆ ತರಬೇತಿ: ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ನಿರ್ಣಯ

Last Updated 21 ಸೆಪ್ಟೆಂಬರ್ 2019, 13:59 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ರಜಾ ದಿನಗಳಲ್ಲಿ ಮಾತ್ರ ಶಿಕ್ಷಕರಿಗೆ ತರಬೇತಿ ಆಯೋಜಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ಶಾಲಾ ಹಂತದ ಕ್ರೀಡಾಕೂಟಗಳು ಈಗ ನಡೆಯುತ್ತಿವೆ. ನಂತರ ಪ್ರತಿಭಾ ಕಾರಂಜಿ ಸ್ಪರ್ಧೆ ಆರಂಭವಾಗಲಿವೆ. ಈ ನಡುವೆ ಶಿಕ್ಷಕರು 21 ದಿನ ತರಬೇತಿಗೆ ತೆರಳಿದರೆ, ವಾರ್ಷಿಕ ಪರೀಕ್ಷೆ ವೇಳೆಗೆ ಪಠ್ಯಕ್ರಮ ಬೋಧನೆ ಮುಗಿಸಲು ಸಾಧ್ಯವಾಗಲ್ಲ. ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆಂದು ಬಣಕಲ್‌ ಶಾಮಣ್ಣ, ರಾಮಸ್ವಾಮಿ ಶೆಟ್ಟಿಗದ್ದೆ ಸಹಿತ ಕೆಲ ಸದಸ್ಯರು ಸಭೆಯ ಗಮನಕ್ಕೆ ತಂದರು.

ಶಿಕ್ಷಕರಿಗೆ ರಜೆಯಲ್ಲಿ ತರಬೇತಿ ಆಯೋಜಿಸುವುದು ಒಳಿತು ಎಂದು ಅಧ್ಯಕ್ಷೆ ಸುಜಾತ ನಿರ್ಣಯ ಮಾಡಿದರು. ಸದ್ಯಸರು ಸಮ್ಮತಿಸಿದರು.

‘ನೆರೆಯಿಂದಾಗಿ ಕಾಫಿ ತೋಟ, ಗದ್ದೆಗಳಲ್ಲಿ ಐದಾರು ಅಡಿ ಎತ್ತರಕ್ಕೆ ಹೂಳು ಶೇಖರಣೆಯಾಗಿದೆ. ಜೆಸಿಬಿಗಳು ಅಲ್ಲಿಗೆ ತೆರಳಲು ಸಾಧ್ಯವಾಗದ ಸ್ಥಿತಿ ಇದೆ. ಒಂದು ಎಕರೆಯಲ್ಲಿ ಹೂಳು ತೆಗೆಯಲು ಕನಿಷ್ಠ ಎರಡು ಸಾವಿರ ಕಾರ್ಮಿಕರು ಬೇಕಾಗುತ್ತದೆ. ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ನೀಡುತ್ತಿರುವ ಪರಿಹಾರಧನ ಹೂಳು ತೆಗೆಯಲು ಸಾಕಾಗಲ್ಲ. ಇನ್ನು ಬದುಕು ಹೇಗೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ? ಹೆಚ್ಚು ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಜಿಲ್ಲಾಡಳಿತಕ್ಕೆ ಮನವಿ ಮಾಡಬೇಕು’ ಎಂದು ಸದಸ್ಯ ಕೆ.ಆರ್.ಪ್ರಭಾಕರ್ ಕೋರಿದರು.

‘ಕಂದಾಯ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಅತಿವೃಷ್ಟಿ ಪ್ರದೇಶಗಳ ಸಮೀಕ್ಷೆ ಮಾಡಲಾಗಿದೆ. ಜಿಲ್ಲೆಯಲ್ಲಿ 2,654 ಹೆಕ್ಟೇರ್ ಕೃಷಿ ಜಮೀನು ಹಾನಿಯಾಗಿದೆ. ಈ ಪೈಕಿ ತಾಲ್ಲೂಕುವಾರು ಮೂಡಿಗೆರೆ 1984, ನರಸಿಂಹರಾಜಪುರ250, ಕೊಪ್ಪ 185, ಶೃಂಗೇರಿ 132, ಚಿಕ್ಕಮಗಳೂರಿನಲ್ಲಿ 101 ಹೆಕ್ಟೇರ್ ಹಾನಿಯಾಗಿದೆ. 800 ಹೆಕ್ಟೇರ್ ಪ್ರದೇಶಕ್ಕೆ ಪರಿಹಾರ ವಿತರಿಸಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿನಿರ್ದೇಶಕ ಸೋಮಸುಂದರ್ ತಿಳಿಸಿದರು.

ಜಿಲ್ಲೆಯಲ್ಲಿ ₹ 19 ಕೋಟಿ ಕೃಷಿ ಬೆಳೆ ನಷ್ಟ ಉಂಟಾಗಿದೆ. ಎನ್‌ಡಿಆರ್‌ಎಫ್ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಎರಡು ಕೋಟಿ ರೂಪಾಯಿ ಪರಿಹಾರ ಲಭ್ಯವಾಗುತ್ತದೆ. ಜಮೀನಿನಲ್ಲಿ ಶೇಖರಣೆಯಾಗಿರುವ ಹೂಳು ತೆಗೆಯಲು ಒಂದು ಹೆಕ್ಟೇರ್‌ಗೆ ತಲಾ ₹ 11 ಸಾವಿರ, ಬೆಳೆಹಾನಿಗೆ ₹ 6,800 ಪರಿಹಾರ ನೀಡಲಾಗುವುದು. ರೈತರ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಸಂಗ್ರಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ವಿಧಾನಪರಿಷತ್ತಿನ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ, ಸಂತ್ರಸ್ತರ ಪುನರ್ವಸತಿಗೆ ಜಿಲ್ಲಾಡಳಿತವು ಮೂಡಿಗೆರೆ ತಾಲ್ಲೂಕಿನಲ್ಲಿ 374 ಎಕರೆ ಜಾಗ ಗುರುತಿಸಿದೆ. ನಿವೇಶನ ಹಂಚಿಕೆಯಾದ ನಂತರ ವಸತಿ ನಿರ್ಮಿಸಕೊಳ್ಳಲು ಪರಿಹಾರಧನ ₹ 5 ಲಕ್ಷ ನೀಡಲಾಗುವುದು. ಜಮೀನಿನಲ್ಲಿ ಹೂಳು ತೆಗೆಯಲು ಹೆಚ್ಚು ಅನುದಾನ ಬಿಡುಗಡೆ ಸಂಬಂಧ ಸಚಿವ ಸಂಪುಟದಲ್ಲಿ ಪ್ರಸ್ತಾಪಿಸುವುದಾಗಿ ಕಂದಾಯ ಸಚಿವರು ಭರವಸೆ ನೀಡಿದ್ದಾರೆ. ಪರಿಹಾರದ ಪಟ್ಟಿಯಿಂದ ಹೆಸರು ಬಿಟ್ಟುಹೋಗಿದ್ದಲ್ಲಿ ಅಂತ ಸಂತ್ರಸ್ತರ ಹೆಸರು ಸೇರಿಸಲು ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.

ಸದಸ್ಯ ರವೀಂದ್ರ ಬೆಳವಾಡಿ ಮಾತನಾಡಿ, ಜಿಲ್ಲೆಯ ಬಯಲುಸೀಮೆ ಭಾಗಕ್ಕೆ ಪ್ರತಿದಿನ 100 ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಈ ಭಾಗಕ್ಕೆ ಶಾಶ್ವತ ಪರಿಹಾರ ರೂಪಿಸುವ ಅಗತ್ಯ ಇದೆ ಎಂದರು.

ಸದಸ್ಯ ಬಿ.ಶಿವಶಂಕರ್ ಮಾತನಾಡಿ, 2018–19ನೇ ಸಾಲಿನಲ್ಲಿ ಶೃಂಗೇರಿ ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿಯ ರೈತರಿಗೆ ಕೃಷಿ ಇಲಾಖೆಯಿಂದ ನೀಡುವ ಟಾರ್ಪಲ್‌ಗಳು ಉಳಿದಿವೆ. ಅವುಗಳನ್ನು ಪರಿಶಿಷ್ಟ ಪಂಗಡದವರಿಗೆ ವಿತರಿಸಲು ಕ್ರಮ ವಹಿಸಬೇಕು ಎಂದು ಕೋರಿದರು.

ಜಿಲ್ಲಾ ಪಂಚಾಯಿತಿ ಆರೋಗ್ಯ–ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಿಂತಾಅನಿಲ್‌ಕುಮಾರ್, ಸಾಮಾಜಿಕನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹಿರಿಗಯ್ಯ, ಸದಸ್ಯರಾದ ಶಾಮಣ್ಣ ಬಣಕಲ್, ಮಹೇಶ್ ಒಡೆಯರ್ ಇದ್ದರು.

ವ್ಯಕ್ತವಾದ ವಿಷಯಗಳು

*ಅತಿವೃಷ್ಟಿ–ವಿಶೇಷ ಪ್ಯಾಕೇಜ್‌ ಘೋಷಿಸುವಂತೆ ಬಿಜೆಪಿ ಒತ್ತಾಯ ಹೇರಬೇಕು
* ಅತಿವೃಷ್ಟಿ ಹಾನಿ:ಕಾಫಿ ಮಂಡಳಿಯಿಂದ ಸಮೀಕ್ಷೆ ಒತ್ತಾಯ
* ನೆರೆ ಪರಿಹಾರ ಪಕ್ಷಾತೀತ ಹೋರಾಟ ಅಗತ್ಯ
* ಕೊಳೆ ರೋಗಕ್ಕೆ ತುತ್ತಾದ ಬೆಳೆಗೆ ಪರಿಹಾರ– ವಿಳಂಬ; ಆರೋಪ
* ಭದ್ರಾ ನದಿಯಿಂದ ಬೆಳವಾಡಿ, ಲಕ್ಯಾ ಭಾಗಕ್ಕೆ ನೀರು ಹರಿಸಬೇಕು
* ಕಳಸ ಆಸ್ಪತ್ರೆಗೆ ಎಂಬಿಬಿಎಸ್ ವೈದ್ಯರನ್ನು ನಿಯೋಜಿಸಬೇಕು
* ಕ್ರೀಡಾ ಸಾಮಗ್ರಿ ವಿತರಣೆ ಅವ್ಯವಹಾರ– ಆರೋಪ; ಟೆಂಡರ್‌ಗೆ ಒತ್ತಾಯ
* ಶೃಂಗೇರಿ ಭಾಗದಲ್ಲಿ ಎಸ್‌ಸಿ,ಎಸ್‌ಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ವಿಳಂಬ:ಆರೋಪ
* ಪಿಆರ್‌ಇ ವಿಭಾಗ ಹೊರಗುತ್ತಿಗೆ ನೌಕರರಿಗೆ ಒಂದೂವರೆ ವರ್ಷದಿಂದ ಪಗಾರ ಬಾಕಿ
* ಮಾಚೇನಹಳ್ಳಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಪುನರಾರಂಭಿಸಬೇಕು
* ಕೃಷಿ ಇಲಾಖೆಯಿಂದ ಟ್ರಾಕ್ಟರ್ ವಿತರಣೆ; ವಿಳಂಬನೀತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT