ಖಾಸಗಿ ಶಾಲೆಯತ್ತ ಸುಳಿಯದ ಬುದ್ನಿ ಮಕ್ಕಳು..!

7
ಶಿಕ್ಷಕ ಸಮೂಹದ ಪರಿಶ್ರಮಕ್ಕೆ ಸಂದ ಮನ್ನಣೆ; ಕುಗ್ರಾಮದಲ್ಲೊಂದು ಮಾದರಿ ಸರ್ಕಾರಿ ಶಾಲೆ

ಖಾಸಗಿ ಶಾಲೆಯತ್ತ ಸುಳಿಯದ ಬುದ್ನಿ ಮಕ್ಕಳು..!

Published:
Updated:
Deccan Herald

ನಿಡಗುಂದಿ:  ಮುಖ್ಯ ರಸ್ತೆಯಿಂದ ಮೂರು ಕಿ.ಮೀ. ಒಳಗಿರುವ 1000 ಜನಸಂಖ್ಯೆಯಿರುವ ಚಿಕ್ಕಹಳ್ಳಿಯಿದು. ನಿಡಗುಂದಿ ತಾಲ್ಲೂಕಿನ ಒಂದು ಕುಗ್ರಾಮ.. ಇದರ ಹೆಸರು ಬುದ್ನಿ.

ಇಲ್ಲೊಂದು ಸರ್ಕಾರಿ ಶಾಲೆಯಿದೆ. ಈ ಗ್ರಾಮದ ಯಾವೊಬ್ಬ ವಿದ್ಯಾರ್ಥಿಯೂ ಮನೆ ಬಾಗಿಲಿಗೆ ಖಾಸಗಿ ಶಾಲೆಗಳ ಬಸ್‌ ಬಂದರೂ ಹತ್ತುವುದಿಲ್ಲ. ತಮ್ಮೂರಿನ ಸರ್ಕಾರಿ ಶಾಲೆಗೆ ಹೋಗುತ್ತಾರೆ. ಇದು ಇಲ್ಲಿನ ವೈಶಿಷ್ಟ್ಯ.

60 ಮಕ್ಕಳಿದ್ದ ಶಾಲೆಯಲ್ಲೀಗ 130 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಶಾಲೆಯೊಳಗೆ ಬೆಳಿಗ್ಗೆ 9.30ಕ್ಕೆ ಕಾಲಿಟ್ಟರೇ ಹೊರಗೆ ಬರುವುದು ಸಂಜೆ 5ರ ನಂತರವೇ. ಇದು ಇಲ್ಲಿನ ಶಿಸ್ತು. ಐದು ಕೊಠಡಿಗಳಲ್ಲಿ ಏಳನೇ ತರಗತಿಯವರೆಗೂ ಶಾಲೆ ನಡೆಯಲಿದೆ.

ಶಾಲೆಯ ಎಲ್ಲಾ ಶಿಕ್ಷಕರ ಊಟ, ಪಾಠ, ಆಟ ಮಕ್ಕಳ ಜತೆಯಲ್ಲೇ. 4ರಿಂದ 7ನೇ ವರ್ಗದ ಪ್ರತಿ ಮಗುವಿಗೂ ಓದಲು, ಬರೆಯಲು, ಜತೆಗೆ ಸರಳ ಲೆಕ್ಕಾಚಾರವೂ ಬರುತ್ತದೆ, ಆಂಗ್ಲಭಾಷೆಯೂ ಇಲ್ಲಿನ ಮಕ್ಕಳಿಗೆ ಸುಲಭ. ದಾಖಲಾತಿಯಷ್ಟೇ ಹಾಜರಾತಿ ಈ ಶಾಲೆಯ ವೈಶಿಷ್ಟ್ಯ.

ಪ್ರಭಾರಿ ಮುಖ್ಯ ಶಿಕ್ಷಕರಾಗಿದ್ದ ಆರ್‌.ಬಿ.ಬ್ಯಾಕೋಡ ಶ್ರಮದಿಂದ ಈ ಶಾಲೆ ಸುಧಾರಣೆ ಕಂಡಿದೆ. ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳೇ ಚಿಕ್ಕ ಉದ್ಯಾನ ನಿರ್ಮಿಸಿದ್ದಾರೆ, ಕೂಲಿಕಾರರಂತೆ ಕಾರ್ಯ ನಿರ್ವಹಿಸುವ ಶಿಕ್ಷಕರು ಇಲ್ಲಿದ್ದಾರೆ.

ಸರ್ಕಾರಿ ಶಾಲೆ ಎಂದರೇ ಮೂಗು ಮುರಿಯುವ ಇಂದಿನ ಕಾಲದಲ್ಲಿ; ಗೊಳಸಂಗಿಯಲ್ಲಿ ಆರೇಳು ಖಾಸಗಿ ಶಾಲೆಗಳಿದ್ದು, ನಿತ್ಯವೂ ಗ್ರಾಮಕ್ಕೆ ಖಾಸಗಿ ಶಾಲೆಗಳ ವಾಹನ ಬಂದರೂ, ಈ ಗ್ರಾಮದಿಂದ ಒಬ್ಬ ವಿದ್ಯಾರ್ಥಿಯೂ ಖಾಸಗಿ ಶಾಲೆಗೆ ಹೋಗುತ್ತಿಲ್ಲ ಎಂಬುದೇ ಇಲ್ಲಿನ ಶಾಲೆಯ ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕನ್ನಡಿ.

ಗ್ರಾಮಸ್ಥರ ಮನವೊಲಿಸಿ, ದಾನ ಪಡೆದ ಜಾಗದಲ್ಲಿ ಆಟದ ಮೈದಾನ ನಿರ್ಮಾಣ, ಶೌಚಾಲಯ ಬಳಕೆ ಕಡ್ಡಾಯಗೊಳಿಸಲಾಗಿದೆ ಇಲ್ಲಿ, ಪ್ರತಿ ವಿದ್ಯಾರ್ಥಿಯೂ ಬಿಸಿಯೂಟ ಮಾಡುವಂತೆ ಪ್ರೇರೇಪಿಸಿ, ಎಲ್ಲಾ ಶಿಕ್ಷಕರು ಬಿಸಿಯೂಟವನ್ನೇ ಸೇವಿಸಿ, ಸರ್ಕಾರದ ಯಾವುದೇ ಸೌಲಭ್ಯಗಳು ಬರಲಿ, ಅದನ್ನು ಸಾಕಾರಗೊಳಿಸುವಲ್ಲಿ ಈ ಶಾಲೆ ಮುಂಚೂಣಿಯಲ್ಲಿದೆ.

ಅಂದ–ಚೆಂದದ ಜತೆಗೆ ಕಲಿಕಾ ಗುಣಮಟ್ಟವೂ ಶ್ರೇಷ್ಠವಾಗಿರುವ ಶಾಲೆ ಬುದ್ನಿ ಗ್ರಾಮದ್ದಾಗಿದೆ. ವಿಜ್ಞಾನ ಕಲಿಕೋಪಕರಣ ಪ್ರದರ್ಶನ, ನಾಟಕ, ಪ್ರತಿಭಾ ಕಾರಂಜಿ, ರಸಪ್ರಶ್ನೆ, ಕ್ರೀಡೆಯಲ್ಲಿ ಈ ಶಾಲೆ ಸದಾ ಮುಂದೆ. ಶಿಕ್ಷಕರು ರಜೆಯಿದ್ದರೇ, ಮಕ್ಕಳೇ ಪಾಠ ಮಾಡುತ್ತಾರೆ. ಸರಳ ಲೆಕ್ಕಾಚಾರ, ಓದು, ಬರಹವನ್ನು ಆಯಾ ವರ್ಗದ ಜಾಣ ಮಗು ನಡೆಸುವುದು ವಿಶೇಷ. ಈ ರೀತಿ ಶಾಲೆಯನ್ನು ಸಜ್ಜುಗೊಳಿಸಿದ್ದು, ಈ ಹಿಂದಿನ ಪ್ರಭಾರ ಮುಖ್ಯೋಪಾಧ್ಯಾಯರಾಗಿದ್ದ ಆರ್‌.ಬಿ.ಬ್ಯಾಕೋಡ ಹಾಗೂ ವಿ.ಎಸ್‌.ಬಾಗೇವಾಡಿ, ಶೈಲಾ ಹೂಗಾರ, ಬಿ.ಆರ್‌.ಚಂದ್ರವಂಶಿ ಮತ್ತು ಈಗಿನ ಮುಖ್ಯೋಪಾಧ್ಯಾಯ ಎಸ್‌.ಡಿ.ಹಡಪದ ಇನ್ನಿತರರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !