ಸಂಸ್ಕೃತಿಯ ಬೇರು ಇರದ ಮಕ್ಕಳು ಅಪ್ರಸ್ತುತ

7
ಕರ್ನಾಟಕ ಸಂಘದ ಪುಸ್ತಕ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಕವಿ ಡಾ.ಸಿದ್ದಲಿಂಗಯ್ಯ ಆತಂಕ

ಸಂಸ್ಕೃತಿಯ ಬೇರು ಇರದ ಮಕ್ಕಳು ಅಪ್ರಸ್ತುತ

Published:
Updated:
ಶಿವಮೊಗ್ಗ ಕರ್ನಾಟಕ ಸಂಘದ ಸಭಾಂಗಣದಲ್ಲಿ ಶನಿವರ ನಡೆದ ಕಾರ್ಯಕ್ರಮದಲ್ಲಿ ಲೇಖಕರಿಗೆ ಪುಸ್ತಕ ಬಹುಮಾನ ವಿತರಿಸಲಾಯಿತು. (ಎಡದಿಂದ) ಶ್ರೀಧರ್ ಬನವಾಸಿ, ಡಾ.ಪ್ರಸಾದಸ್ವಾಮಿ, ಡಾ.ಗಿರಿಜಮ್ಮ, ಮಂಡಗದ್ದೆ ನಟರಾಜ್, ಕನಕರಾಜ್ ಆರನಕಟ್ಟೆ, ಅಮೃತಾ ರಕ್ಷಿದಿ ಅವರ ತಾಯಿ ರಾಧೆ ರಕ್ಷಿದಿ, ಪೂರ್ಣಿಮಾ ಸುರೇಶ್, ಸರೋಜಾ ಪ್ರಕಾಶ್, ಡಾ.ಸಿ.ಎಂ. ಗೋವಿಂದ ರೆಡ್ಡಿ, , ಸಿದ್ದು ಸತ್ಯಣ್ಣನವರ ಉಪಸ್ಥಿತರಿದ್ದಾರೆ.

ಶಿವಮೊಗ್ಗ: ಕಾನ್ವೆಂಟ್‌ಗಳಲ್ಲಿ ಓದುವ ಮಕ್ಕಳು ನೆಲದ ಸಂಸ್ಕೃತಿಯ ಬೇರು ಇಲ್ಲದೇ ತ್ರಿಶಂಕು ಸ್ಥಿತಿ ತಲುಪುತ್ತಿದ್ದಾರೆ. ಇಂಥವರು ಭವಿಷ್ಯದ ಸಮಾಜದಲ್ಲಿ ಅಪ್ರಸ್ತುತವಾಗಿ ಬಿಡುತ್ತಿದ್ದಾರೆ ಎಂದು ಕವಿ ಡಾ.ಸಿದ್ದಲಿಂಗಯ್ಯ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ಸಂಘದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪುಸ್ತಕ ಬಹುಮಾನ ವಿತರಣೆ ಹಾಗೂ ನೂತನ ಗ್ರಂಥ ಭಂಡಾರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂಗ್ಲಿಷ್‌ ಶಾಲೆಗಳಲ್ಲಿ ಮಕ್ಕಳು ನೆಲದ ಸಂಸ್ಕೃತಿಗೆ ವಿಭಿನ್ನವಾಗಿ ಕಲಿಯುತ್ತಿದ್ದಾರೆ. ಇಲ್ಲಿನ ಮಳೆ, ಬೆಳೆ, ಆಚಾರ, ವಿಚಾರಗಳ ಅರಿವು ದೊರಕುತ್ತಿಲ್ಲ. ಪೋಷಕರೂ ಇಂತಹ ಸೂಕ್ಷ್ಮ ವಿಷಯಗಳ ಕುರಿತು ಗಮನ ಹರಿಸುತ್ತಿಲ್ಲ ಎಂದು ವಿಷಾದಿಸಿದರು.

ಕನ್ನಡದ ಸಾಹಿತ್ಯಕ್ಕೆ ವಿಶ್ವ ಮಾನ್ಯತೆ ಇದೆ. ಕನ್ನಡ ಭಾಷೆಯಲ್ಲಿ ರಚಿತವಾದ ಲಘು ಸಾಹಿತ್ಯವೂ ಶ್ರೇಷ್ಠ ಕವಿತಾ ಶಕ್ತಿ ಕಟ್ಟಿಕೊಟ್ಟಿದೆ. ಕುಡಿತ, ಕಳವು, ದೇವರ ವಿಚಾರಗಳಲ್ಲೂ ಸೃಜನಶೀಲತೆ ಕಾಣಬಹುದು. ಲಘು ಸಾಹಿತ್ಯದ ಮೂಲಕವೇ ವ್ಯವಸ್ಥೆಯ ಲೋಪಗಳ ಮೇಲೆ ಗದಾ ಪ್ರಹಾರ ಮಾಡಿದ ಹಲವು ಲೇಖಕರು ಇದ್ದಾರೆ ಎಂದು ಅಂತಹ ಕವಿತೆವಾಚಿಸುವ ಮೂಲಕ ಕನ್ನಡದ ಕಂಪು ಪರಿಚಯಿಸಿದರು.

ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ದಶಕಗಳ ಹಿಂದೆಯೇ ಕುವೆಂಪು ಅವರು ಧ್ವನಿ ಎತ್ತಿದ್ದರು. ನೆಲ, ಜಲ, ಭಾಷೆ, ಸಂಸ್ಕೃತಿಯ ಜತೆಗೆ, ಕನ್ನಡಿಗರು ಆರ್ಥಿಕವಾಗಿ ಸದೃಢರಾಗದೇ ಹೋದರೆ ಬೇರು ಗಟ್ಟಿಯಾಗದು ಎಂದು ಎಚ್ಚರಿಸಿದ್ದರು. ಕರ್ನಾಟಕದಲ್ಲಿ ಕನ್ನಡಿಗರ ಬ್ಯಾಂಕ್, ಕೈಗಾರಿಕೆ, ಶಾಲೆ, ಕಾಲೇಜು, ವ್ಯಾಪಾರ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಬೆಳೆಯಬೇಕು ಎಂದು ಬಯಸಿದ್ದರು ಎಂದು ಸ್ಮರಿಸಿದರು.

ಕರ್ನಾಟಕ ಸಂಘದ ಜತೆಗಿನ ಕುವೆಂಪು ಅವರ ಒಡನಾಟ, ಭಾಗವಹಿಸಿದ್ದ ಸಮಾರಂಭಗಳಲ್ಲಿ ಅವರು ಆಡಿದ ಮಾತುಗಳನ್ನು ಮೆಲುಕು ಹಾಕಿದರು. ಸರ್ಕಾರದ ಯಾವುದೇ ನೆರವು ಪಡೆಯದೇ ಸ್ವತಂತ್ರವಾಗಿ ಅಸ್ತಿತ್ವ ಕಂಡುಕೊಂಡ ಸಂಘ ರಾಜ್ಯಕ್ಕೇ ಮಾದರಿ ಎಂದು ಬಣ್ಣಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಪುಸ್ತಕ ಬಹುಮಾನ ವಿತರಿಸಲಾಯಿತು.

ಶ್ರೀಧರ ಬನವಾಸಿ (ಫಕೀರ) ಅವರ ‘ಬೇರು’ ಕಾದಂಬರಿಗೆ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ (ಕಾದಂಬರಿ), ಎಂ.ಎಸ್. ರಘುನಾಥ್‌ ಅವರ ‘ನೆರಳಿನ ರೇಖೆಗಳು’ ಕೃತಿಗೆ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ (ಅನುವಾದಿತ ಕೃತಿ), ಅಮೃತಾ ರಕ್ಷಿದಿ ಅವರ ‘ಅಮೃತ ಯಾನ‘ ಎಂ.ಕೆ. ಇಂದಿರಾ ಪ್ರಶಸ್ತಿ (ಲೇಖಕಿಯ ವಿಭಾಗ), ಪೂರ್ಣಿಮಾ ಸುರೇಶ್‌ ಅವರ ‘ಅಕ್ಕನಂತೊಬ್ಬಳು ಅನುರಕ್ತೆ’ ಕೃತಿಗೆ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ (ಕವನ ಸಂಕಲನ), ಡಿ.ಎಸ್. ರಾಮಸ್ವಾಮಿ ಅವರ ‘ಅನುಸಂಧಾನ’ ಕೃತಿಗೆ ಡಾ.ಹಾ.ಮಾ. ನಾಯಕ ಪ್ರಶಸ್ತಿ (ಅಂಕಣ ಬರಹ), ಕನಕರಾಜ್ ಆರನಕಟ್ಟೆ ಅವರ ‘ಸಿಲೋನ್ ಸೈಕಲ್’ ಕೃತಿಗೆ ಡಾ.ಯು.ಆರ್. ಅನಂತಮೂರ್ತಿ ಪ್ರಶಸ್ತಿ (ಸಣ್ಣ ಕಥಾ ಸಂಕಲನ) ನೀಡಿ ಗೌರವಿಸಲಾಯಿತು.

ಕರ್ನಾಟಕ ಸಂಘದ ಗೌರವ ಸದಸ್ಯರ ಹೆಸರಿನಲ್ಲಿ ಪ್ರತಿವರ್ಷ ವಿವಿಧ ಸಾಹಿತ್ಯ ಪ್ರಕಾರಗಳ ಅತ್ಯುತ್ತಮ ಕೃತಿಗಳಿಗೆ ಈ ಬಹುಮಾನ ನೀಡಲಾಗುತ್ತಿದ್ದು,  ತಲಾ ₹ 10 ಸಾವಿರ ನಗದು, ಸ್ಮರಣಿಕೆ ನೀಡಲಾಯಿತು.  ಸಂಘದ ಅಧ್ಯಕ್ಷ ಪ್ರೊ.ಡಿ.ಎಸ್. ಮಂಜುನಾಥ್, ಕಾರ್ಯದರ್ಶಿ ಎಚ್‌.ಎಸ್. ನಾಗಭೂಷಣ್, ವೈದ್ಯ ಉಪಸ್ಥಿತರಿದ್ದರು. 

ಪುಸ್ತಕ ಬಹುಮಾನ ತಿರಸ್ಕರಿಸಿದ ಆರಿಫ್‌ ರಾಜಾ

ಶಿವಮೊಗ್ಗ: ಕರ್ನಾಟಕ ಸಂಘವು ಪ್ರತಿ ವರ್ಷ ಮುಸ್ಲಿಂ ಬರಹಗಾರರಿಗೆ ನೀಡುವ ಪಿ. ಲಂಕೇಶ್ ಅವರ ಹೆಸರಿನ ಪುಸ್ತಕ ಬಹುಮಾನವನ್ನು ಹೊಸ ತಲೆಮಾರಿನ ಕವಿ ಆರಿಫ್ ರಾಜಾ ತಿರಸ್ಕರಿಸಿದ್ದಾರೆ. 

‘ಮುಸ್ಲಿಂ ಎನ್ನುವ ಕಾರಣಕ್ಕೆ ಈ ಪ್ರಶಸ್ತಿ ನೀಡುತ್ತಿರುವುದು ಸಂವೇದನಾಶೀಲರಿಗೆ ಮುಜುಗರ ಉಂಟು ಮಾಡುತ್ತದೆ. ದಲಿತ ಸಂವೇದನೆ, ಸ್ತ್ರೀ ಸಂವೇದನೆ ಇವೆಲ್ಲವೂ ಆಯಾ ಕಾಲಘಟ್ಟಕ್ಕೆ ಸಾಹಿತ್ಯದ ಹೊಸತನ ಗುರುತಿಸಲು ನಾವಾಗಿಯೇ ಮಾಡಿಕೊಂಡ ಓದಿನ ಕ್ರಮಗಳು. ಅವೇ ಅಂತಿಮವಲ್ಲ. ಕುವೆಂವು ಅವರ ವಿಶ್ವಮಾನವ ಸಂದೇಶದ ಪ್ರತಿಪಾದಕನಾದ ನನಗೆ ಈ ರೀತಿಯ ಬಹುಮಾನ ನೀಡುತ್ತಿರುವುದು ಸಮಾಧಾನ ತಂದಿದೆ. ನಿಜವಾದ ಸಾಹಿತಿ, ಸಾಹಿತ್ಯ ಜಾತ್ಯತೀತ ಎಂದು ಬಲವಾಗಿ ನಂಬಿರುವ ನನಗೆ ಈ ಬಹುಮಾನ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಧಾರ್ಷ್ಟ್ಯ ಎಂದು ತಿಳಿಯದೆ ಸ್ವಾಭಿಮಾನಿ ಲೇಖಕನ ವಿನಮ್ರ ಕೋರಿಕೆ ಎಂದು ಭಾವಿಸಬೇಕು’ ಎಂದು ಆರಿಫ್‌ ರಾಜಾ ಕರ್ನಾಟಕ ಸಂಘಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಶನಿವಾರ ಸಂಜೆ ನಡೆದ ಪುಸ್ತಕ ಬಹುಮಾನ ವಿತರಣೆ ಹಾಗೂ ನೂತನ ಗ್ರಂಥ ಭಂಡಾರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಸಂಘಟಕರು ಸಭಿಕರ ಗಮನಕ್ಕೆ ತಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !