ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಟ್ಲರ್ ಆಂಜನೇಯರಿಂದ ಜಿಲ್ಲೆ, ಸಮುದಾಯಕ್ಕೆ ಅನ್ಯಾಯ: ಮಂಜುನಾಥ್ ಟೀಕೆ

ಆದಿಜಾಂಬವ ನಿಗಮ ಸ್ಥಾಪನೆ ಹಿಂದಿನ ತಂತ್ರವೇನು?
Last Updated 3 ಜನವರಿ 2019, 11:04 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಾಜಿ ಸಚಿವ ಎಚ್. ಆಂಜನೇಯ 5 ವರ್ಷ ಸಚಿವರಾಗಿದ್ದ ಸಂದರ್ಭದಲ್ಲಿ ಹಿಟ್ಲರ್ ರೀತಿ ಆಡಳಿತ ನಡೆಸಿದರೆ ಹೊರತು ಜಿಲ್ಲೆಗಾಗಲಿ, ಮಾದಿಗ ಸಮುದಾಯಕ್ಕಾಗಲಿ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಾದಿಗ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಟೀಕಿಸಿದರು.

‘ಏಕವ್ಯಕ್ತಿ ನಿರ್ಧಾರದಿಂದಾಗಿ ಅವರು ಸೇರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 25 ಸಾವಿರದಿಂದ 40 ಸಾವಿರ ಮತಗಳ ಹಂತರದಿಂದ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುವಂತಾಯಿತು. ಇದಕ್ಕೆಲ್ಲ ಹಿಟ್ಲರ್‌ನಂತೆ ವರ್ತಿಸಿದ್ದೆ ಕಾರಣ’ ಎಂದು ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಜಿಲ್ಲೆಯಲ್ಲಿನ ಆದಿಜಾಂಬವ ಮಠಕ್ಕೆ 185 ವರ್ಷಗಳ ಇತಿಹಾಸವಿದೆ. ಆದರೂ 25 ವರ್ಷಗಳ ಹಿಂದೆ ಇದೇ ಆಂಜನೇಯ ರಾಮಾಯಣದಲ್ಲಿ ಬರುವ ಜಾಂಬವ ಕರಡಿ. ನಾವೆಲ್ಲರೂ ಕರಡಿ ವಂಶಸ್ಥರೇ ಎಂದು ಹಾಸ್ಯಸ್ಪದವಾಗಿ ಟೀಕಿಸಿದ್ದರು. ನಂತರ ಚಿತ್ರದುರ್ಗದಲ್ಲಿ ಮಾದಾರ ಚನ್ನಯ್ಯ ಗುರುಪೀಠ ಸ್ಥಾಪಿಸಿದರು. ಈಗ ನೋಡಿದರೆ ಆದಿಜಾಂಬವ ಹೆಸರಿನಲ್ಲಿ ನಿಗಮ ಸ್ಥಾಪನೆಗೆ ಮುಂದಾಗಿರುವುದರ ಹಿಂದೆ ತಂತ್ರಗಾರಿಕೆ ಅಡಗಿದೆ’ ಎಂದು ತಿಳಿಸಿದರು.

‘ಆದಿಜಾಂಬವ ಎಂಬುದನ್ನು ಈ ಮೊದಲು ಒಪ್ಪಿಕೊಳ್ಳದ ಅವರು, ಮಾದಿಗ ಅಭಿವೃದ್ಧಿ ನಿಗಮ ಹೆಸರಿಡಲು ತೀರ್ಮಾನಿಸಿದ್ದರು. ಆದರೀಗ ಹೆಸರನ್ನು ಬದಲಿಸುವುದರ ಹಿಂದೆ ದುರುದ್ದೇಶವಿದೆ. ಅದನ್ನು ಅವರೇ ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.

‘ಈ ನಿಗಮ ಸ್ಥಾಪನೆಯಿಂದ ಮಾದಿಗ ಸಮುದಾಯಕ್ಕೆ ಅನುಕೂಲವಾಗಲಿದೆ. ಶೇ 6 ರಷ್ಟು ಇರುವ ಜನಸಂಖ್ಯೆಗೆ ಲಾಭವಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ. ಹಾಗಾದರೆ, ಸರ್ಕಾರದಿಂದ ನಿಗಮಕ್ಕೆ ಕನಿಷ್ಠವೆಂದರೂ ₹ 18 ಸಾವಿರಕ್ಕೂ ಹೆಚ್ಚು ಕೋಟಿ ಅನುದಾನ ಬಿಡುಗಡೆ ಆಗಬೇಕು. ಆದರೆ, ಅದು ಖಂಡಿತ ಸಾಧ್ಯವಾಗದ ಮಾತು. ₹ 500 ಕೋಟಿ ಬಿಡುಗಡೆಯಾಗಬಹುದು ಅಷ್ಟೇ. ಅಲ್ಲಿಯೂ ತಮಗೆ ಬೇಕಾದವರನ್ನೇ ನಿಗಮದ ಅಧ್ಯಕ್ಷರನ್ನಾಗಿಸಿ ಸಮುದಾಯದವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದರು ಅಚ್ಚರಿಪಡಬೇಕಿಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದರು.

‘ಒಳಮೀಸಲಾತಿ ವಿಚಾರದ ಹೋರಾಟದಲ್ಲಿ ಸಫಲರಾಗದ ಕಾರಣ ಆಂಜನೇಯ ಹೊಸ ಆಟವಾಡಲು ಪ್ರಾರಂಭಿಸಿದ್ದಾರೆ. ಈ ಮೂಲಕ ಮಾದಿಗ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದಾರೆ. ಸಚಿವರಾಗಿದ್ದಾಗಲೂ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸ್ಥಳೀಯರನ್ನು ಬಿಟ್ಟು ಚಂದ್ರಪ್ಪ ಅವರಿಗೆ ಟಿಕೆಟ್ ಕೊಡಿಸಿದರು. ಇದು ಜಿಲ್ಲೆಯ ಮಾದಿಗ ಸಮುದಾಯಕ್ಕೆ ಮಾಡಿದ ವಂಚನೆಯಲ್ಲವೇ’ ಎಂದು ಪ್ರಶ್ನಿಸಿದರು.

‘ವೈದ್ಯಕೀಯ ಕಾಲೇಜು ಅನುಷ್ಠಾನದಲ್ಲಿ ವಿಫಲರಾದರು. ಜಿಲ್ಲೆಯಲ್ಲಿ ಹೆಮ್ಮರವಾಗಿ ಬೇರೂರಿದ್ದ ಕಾಂಗ್ರೆಸ್ ಅವನತಿಗೆ ಅವರೂ ಕಾರಣೀಭೂತರಾಗಿದ್ದು, ಸರ್ವನಾಶವಾಗಿದೆ. ಈ ಬಗ್ಗೆ ಪಕ್ಷದ ಮುಖಂಡರು ಮಾತನಾಡುತ್ತಿಲ್ಲ. ಅಲ್ಲದೆ, ಜಿಲ್ಲೆಯಲ್ಲಿ ಮಾದಿಗರು ಕಳೆದು ಹೋಗಿದ್ದು, ಅವನತಿಯತ್ತ ಸಾಗಿದ್ದಾರೆ. ಜಿಲ್ಲೆಗೆ ಆಂಜನೇಯ ಕೊಡುಗೆ ಏನು ? ಎಂದ ಅವರು, ಈಗಲೂ ಅವರು ಬದಲಾಗದಿದ್ದರೆ, ಜಿಲ್ಲೆಯಲ್ಲಿ ಮಾದಿಗ ಸಮುದಾಯವೇ ಇಲ್ಲದಂತಾಗುತ್ತದೆ’ ಎಂದರು.

‘ಆಂಜನೇಯ ಮಾದಿಗ ಸಮುದಾಯದ ಮೀಸಲಾತಿಯಿಂದ ಗೆದ್ದು, ಜನತೆಯ ಆಶೀರ್ವಾದದಿಂದ ಜೀವನದಲ್ಲೇ ಉತ್ತುಂಗವಾದ ಅಧಿಕಾರ ಪಡೆದರು. ಆ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಶ್ರಮಿಸಿದ್ದಾರೆ. ಅಧಿಕಾರದಲ್ಲಿದ್ದಾಗ ಯಾರ ಮಾತು ಕೇಳದೆ ನಿರ್ಧಾರ ಕೈಗೊಳ್ಳುತ್ತಿದ್ದರು. ಈಗ ನಿಗಮ ಸ್ಥಾಪನೆಯಲ್ಲೂ ಅದೇ ಮಾದರಿ ಅನುಸರಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ’ ಎಂದು ಮಂಜುನಾಥ್ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT