ಭಾನುವಾರ, ಡಿಸೆಂಬರ್ 8, 2019
20 °C
ಅಪಘಾತ ತಪ್ಪಿಸಲು ಸಂಚಾರ ನಿಯಮ ಪಾಲಿಸಿ; ಇನ್ಸ್‌ಪೆಕ್ಟರ್ ರೇವತಿ

ಆಡುಮಲ್ಲೇಶ್ವರದಲ್ಲಿ ಪರಿಸರ ಜಾಗೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಆಡುಮಲ್ಲೇಶ್ವರ ಕಿರು ಮೃಗಾಲಯದ ಸುತ್ತಮುತ್ತ ಬಿಸಾಡಲಾಗಿದ್ದ ಪ್ಲಾಸ್ಟಿಕ್ ಕವರ್‌ಗಳು, ಅನುಪಯುಕ್ತ ವಸ್ತುಗಳನ್ನು ಒಂದೆಡೆ ಶೇಖರಿಸುವ ಮೂಲಕ ಸಂಚಾರ ಪೊಲೀಸ್ ಠಾಣೆ ಸಬ್‌ ಇನ್ಸ್‌ಪೆಕ್ಟರ್ ರೇವತಿ ನೇತೃತ್ವದಲ್ಲಿ ಯುವಕರ ಪಡೆ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು.

ಇಲ್ಲಿ ಭಾನುವಾರ ಮಾರ್ಗ ನೇಚರ್ ಅಂಡ್ ಸೋಷಿಯಲ್ ಸರ್ವೀಸಸ್, ಸಂಜೀವಿನಿ ಗ್ರೂಪ್ಸ್‌ನಿಂದ ಆಯೋಜಿಸಿದ್ದ ಪರಿಸರ ಸಂರಕ್ಷಣೆ, ಧ್ಯಾನ ಹಾಗೂ ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಕ್ಕೂ ಮುನ್ನ ಸ್ವಚ್ಛತಾ ಕಾರ್ಯ ನಡೆಯಿತು.

‘ಧ್ಯಾನ ಮತ್ತು ಯೋಗ ಮನುಷ್ಯನನ್ನು ಮಾನಸಿಕ ಹಾಗೂ ದೈಹಿಕವಾಗಿ ಸದೃಢರನ್ನಾಗಿಸಲು ಸಹಕಾರಿಯಾಗಿದೆ. ಅಲ್ಲದೆ, ಸೂಪರ್ ಬ್ರೈನ್ ಯೋಗಾಭ್ಯಾಸದಿಂದ ಮನಸ್ಸಿಗೆ ಶಾಂತಿ ಹಾಗೂ ಏಕಾಗ್ರತೆ ದೊರೆಯುತ್ತದೆ’ ಎಂದು ರೇವತಿ ತಿಳಿಸಿದರು.

‘ಪ್ರಸ್ತುತ ಯುವಸಮೂಹದ ಅನೇಕರು ಸಂಚಾರ ನಿಯಮಗಳನ್ನು ಪಾಲಿಸಲು ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ ಅಪಘಾತ ಸಂಭವಿಸಿ ದೇಹದ ಅಂಗಾಂಗಗಳಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಜತೆಗೆ ಪ್ರಾಣಹಾನಿಯೂ ಸಂಭವಿಸುತ್ತದೆ. ಆದ್ದರಿಂದ ಪ್ರತಿಯೊಬ್ಬ ಚಾಲಕರು ಚಾಚೂತಪ್ಪದೇ ನಿಯಮ ಪಾಲಿಸಬೇಕು’ ಎಂದು ಸಲಹೆ ನೀಡಿದರು.

ಮಾರ್ಗ ನೇಚರ್ ಅಂಡ್ ಸೋಷಿಯಲ್ ಸರ್ವೀಸಸ್ ಅಧ್ಯಕ್ಷ ಪ್ರಶಾಂತ್, ‘ಪ್ಲಾಸ್ಟಿಕ್ ಬಳಕೆ ಮನುಷ್ಯರ ಆರೋಗ್ಯದ ಮೇಲಷ್ಟೇ ಅಲ್ಲ. ಪ್ರಾಣಿ, ಪಕ್ಷಿಗಳಿಗೂ ತೊಂದರೆ ಉಂಟು ಮಾಡುತ್ತದೆ. ಆದ್ದರಿಂದ ಯಾರೂ ಪ್ಲಾಸ್ಟಿಕ್ ಬಳಕೆಗೆ ಮುಂದಾಗಬಾರದು. ಜತೆಗೆ ಪ್ರತಿಯೊಬ್ಬರೂ ಪ್ರವಾಸಿ ತಾಣ ಸೇರಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು’ ಎಂದು ಕೋರಿದರು.

ಸಂಜೀವಿನಿ ಗ್ರೂಪ್ಸ್ ಅಧ್ಯಕ್ಷ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಸೌಮ್ಯಾ, ಉಪಾಧ್ಯಕ್ಷ ಉದಯ್, ನಿಲಯ ಪಾಲಕ ದೇವರಾಜ್, ಸಂಘಟನೆಯ ಸದಸ್ಯರಾದ ಹರೀಶ್, ವಿನಯ್‌ಚಂದ್ರ, ಮಧು, ಆಕಾಶ್, ಮೋಹನ್ ಕುಮಾರ್, ಸುರೇಶ್, ಅರ್ಪಿತಾ, ತಿಪ್ಪೇಶ್, ನಟರಾಜ ಇದ್ದರು.

ಪ್ರತಿಕ್ರಿಯಿಸಿ (+)