ಸೋಮವಾರ, ಸೆಪ್ಟೆಂಬರ್ 20, 2021
22 °C
ಕೋವಿಡ್ ಕಾರಣಕ್ಕೆ ಮನೆ ಬಾಗಿಲಿಗೆ ತೆರಳಿ ಹೋರಾಟಗಾರರನ್ನು ಗೌರವಿಸಿದ ಜಿಲ್ಲಾಡಳಿತ

ಐವರು ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸ್ವಾತಂತ್ರ್ಯೋತ್ಸವದಂದು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರನ್ನು ಆಯ್ಕೆ ಮಾಡಿ ಈ ಮುಂಚೆ ಸನ್ಮಾನಿಸಲಾಗುತ್ತಿತ್ತು. ಕೋವಿಡ್‌ ನಂತರ ಎರಡನೇ ವರ್ಷವೂ ಮನೆ ಬಾಗಿಲಿಗೆ ತೆರಳಿ ಐವರು ಹೋರಾಟಗಾರರಿಗೆ ಶನಿವಾರ ಜಿಲ್ಲಾಡಳಿತ ಗೌರವಿಸಿದೆ.

ಕೋವಿಡ್ ಮೂರನೇ ಅಲೆಯ ನಿರೀಕ್ಷೆ ಹಾಗೂ ಪ್ರಕರಣಗಳ ಸಂಖ್ಯೆ ಏರಿಳಿತ ಕಾಣುತ್ತಿರುವ ಕಾರಣ ಸ್ವಾತಂತ್ರ್ಯ ಹೋರಾಟಗಾರರಿಗೆ ಯಾವ ತೊಂದರೆಯೂ ಆಗಬಾರದು ಎಂಬ ಉದ್ದೇಶಕ್ಕೆ ಜಿಲ್ಲಾಡಳಿತ ಒಂದು ದಿನ ಮುಂಚಿತವಾಗಿಯೇ ಆತ್ಮೀಯವಾಗಿ ಸನ್ಮಾನಿಸಿದೆ.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ‘ಕೋವಿಡ್ ಕಾರಣಕ್ಕೆ ಈ ಬಾರಿಯೂ ಸರಳ ಮತ್ತು ಅರ್ಥಪೂರ್ಣವಾಗಿ ಸ್ವಾತಂತ್ರ ದಿನ ಆಚರಿಸಲಾಗುತ್ತಿದೆ. ಅಮೃತ ಮಹೋತ್ಸವದೊಂದಿಗೆ 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಸವಿನೆನಪಾಗಿಯೂ ಆಚರಿಸಲಾಗುವುದು. ಸ್ವಾತಂತ್ರ್ಯ ಹೋರಾಟಗಾರರನ್ನು ಭೇಟಿಯಾದ ವೇಳೆ ಹೋರಾಟದ ದಿನಗಳ ತಮ್ಮ ಅನುಭವಗಳನ್ನು ಜಿಲ್ಲಾಡಳಿತದೊಂದಿಗೆ ಹಂಚಿಕೊಂಡಿದ್ದಾರೆ’ ಎಂದರು.

ಸ್ವಾತಂತ್ರ್ಯ ಹೋರಾಟಗಾರರಾದ ಚಿತ್ರದುರ್ಗ ತಾಲ್ಲೂಕಿನ ಕೂನಬೇವು ಗ್ರಾಮದ ಎ. ಭೀಮಪ್ಪ, ನರೇನಾಳ್ ಗ್ರಾಮದ ತಿಮ್ಮಾರೆಡ್ಡಿ, ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿ ಗ್ರಾಮದ ಹನುಮಂತಪ್ಪ (ಮಡಿವಾಳರ), ಭೀಮಪ್ಪ, ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಕೋವೇರಹಟ್ಟಿಯ ಎ. ಗೋವಿಂದಪ್ಪ ಅವರನ್ನು ಸನ್ಮಾನಿಸಲಾಯಿತು.

ಉಪವಿಭಾಗಾಧಿಕಾರಿ ಆರ್. ಚಂದ್ರಯ್ಯ, ತಹಶೀಲ್ದಾರ್‌ಗಳಾದ ಸತ್ಯನಾರಾಯಣ, ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ಧನಂಜಯ ಇದ್ದರು.

ಹೋರಾಟಗಾರರೇ ಗಡಿಪಾರಾಗಿದ್ದರು

ರಾಷ್ಟ್ರನಾಯಕ ಎಸ್. ನಿಜಲಿಂಗಪ್ಪ ಅವರ ಅನುಯಾಯಿಗಳಾಗಿ ಜಿಲ್ಲೆಯ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಕೆಲಸ ಮಾಡಿದ್ದಾರೆ. ಈಚಲು ಮರದ ಸತ್ಯಾಗ್ರಹದಲ್ಲಿ ಭಾಗಹಿಸಿ, ಮದ್ಯದ ಅಂಗಡಿಗಳನ್ನು ನಾಶಪಡಿಸಿದ್ದಾರೆ. ಇದಕ್ಕಾಗಿ ಕೆಲ ದಿನಗಳವರೆಗೆ ಬಂಧನದಲ್ಲಿದ್ದರು. ಕೆಲವರು ಗಡಿಪಾರು ಕೂಡ ಆಗಿದ್ದರು.

‘ಸ್ನೇಹಿತರ ಜೊತೆಗೆ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರಿಂದ 1 ವರ್ಷ ವಿದ್ಯಾಭ್ಯಾಸ ಸ್ಥಗಿತವಾಯಿತು. ಆದರೂ ದೇಶ ಸ್ವಾತಂತ್ರ್ಯ ಪಡೆಯಬೇಕು ಎಂಬ ಕಾರಣಕ್ಕೆ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಕೈಜೋಡಿಸಿದೆವು. ಕೊನೆಗೂ ಸ್ವಾತಂತ್ರ್ಯ ಲಭಿಸಿತು’ ಎಂದು ಹೋರಾಟದ ನೆನಪುಗಳನ್ನು ಹಂಚಿಕೊಂಡ ಹೋರಾಟಗಾರ ಎ. ಭೀಮಪ್ಪ ಭಾವುಕರಾದರು.

‘ಯುವಸಮೂಹ ಕ್ರೀಡೆಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳಬೇಕು. ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಹೆಚ್ಚು ಯುವಕ–ಯುವತಿಯರು ಪಾಲ್ಗೊಂಡು ದೇಶಕ್ಕೆ ಪದಕಗಳನ್ನು ಕೊಡುಗೆಯಾಗಿ ನೀಡಬೇಕು’ ಎಂದು ಮನವಿ ಮಾಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.