ಶನಿವಾರ, ಅಕ್ಟೋಬರ್ 31, 2020
28 °C
ಎರಡು ದಿನ ಬಂದರೂ ಕೆಲವರಿಗೆ ಆಗಲಿಲ್ಲ ಪರೀಕ್ಷೆ

ಕೋವಿಡ್ ಪರೀಕ್ಷೆ ವಿಳಂಬಕ್ಕೆ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆಯೂ ನಿತ್ಯ ಹೆಚ್ಚುತ್ತಿದೆ. ಆದರೆ, ಪರೀಕ್ಷೆ ವಿಳಂಬ ಆಗುತ್ತಿರುವ ಕಾರಣ ಕೆಲ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.

ಇಲ್ಲಿನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿನ ಕೋವಿಡ್ ಪರೀಕ್ಷಾ ಕೇಂದ್ರದ ಮುಂಭಾಗ ಶನಿವಾರ ಹತ್ತಾರು ಜನ ಪರೀಕ್ಷೆಗಾಗಿ ಕಾಯುತ್ತ ಹೈರಾಣಾದರು. ಬೆಳಿಗ್ಗೆ 9ಕ್ಕೆ ಜನ ಬಂದರೂ 11 ಗಂಟೆಯಾದರು ಕೇಂದ್ರದ ಬಾಗಿಲು ತೆರೆದಿರಲಿಲ್ಲ. ಇದರಿಂದಾಗಿ ಅಲ್ಲಿದ್ದ ನಾಗರಿಕರು ಅಸಮಧಾನಗೊಂಡರು.

ಕೆಲ ದಿನಗಳಿಂದ ಈ ಪ್ರಕ್ರಿಯೆ ಮುಂದುವರೆದಿದೆ. ಸಮಯಕ್ಕೆ ಸರಿಯಾಗಿ ಮೂಗು ಮತ್ತು ಗಂಟಲು ದ್ರವ ಮಾದರಿ ತೆಗೆದುಕೊಳ್ಳುತ್ತಿಲ್ಲ. ನಮ್ಮನ್ನು ಅಲೆದಾಡಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಶುಕ್ರವಾರ ಬೆಳಿಗ್ಗೆ ಕೂಡ ನಾನೂ ಪರೀಕ್ಷೆಗೆ ಬಂದಿದ್ದೆ. ಆದರೆ, ಇನ್ನೂ ಮಾದರಿ ಸಂಗ್ರಹಿಸಿಲ್ಲ. ಕೋವಿಡ್‌ ಹೆಚ್ಚುತ್ತಿರುವ ಕಾರಣ ನಮಗೂ ಆತಂಕವಿದೆ. ರೋಗಲಕ್ಷಣ ಕಂಡು ಬಂದರೆ ತಪಾಸಣೆಗೆ ಒಳಪಡಿ ಎಂಬುದಾಗಿ ವೈದ್ಯರೇ ಸಲಹೆ ನೀಡುತ್ತಾರೆ. ಆದರೆ, ಇಲ್ಲಿ ಪರೀಕ್ಷೆ ಮಾಡುವವರು ಯಾವಾಗ ಬರುತ್ತಾರೋ ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಸತೀಶ್‌ ಎಂಬುವವರು ದೂರಿದರು.

‘ಕೋವಿಡ್‌ನಿಂದ ಕೆಲ ವಯೋವೃದ್ಧರು ಮೃತಪಟ್ಟಿದ್ದಾರೆ. ನಮ್ಮ ಮನೆಯಲ್ಲೂ ಮಕ್ಕಳು ಹಾಗೂ ವಯಸ್ಸಾದ ತಂದೆ-ತಾಯಿ ಇದ್ದಾರೆ. ಯಾರಿಗೂ ತೊಂದರೆ ಉಂಟಾಗಬಾರದು ಎಂಬ ಕಾರಣಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾದರೆ ವಿಳಂಬ ಮಾಡುವುದು ಎಷ್ಟು ಸರಿ. ಈ ರೀತಿ ನಿರ್ಲಕ್ಷ್ಯೆ ಮಾಡಿದರೆ ಬೇರೆಯವರಿಗೂ ಹರಡುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

'ಕೊರೊನಾ ಪರೀಕ್ಷೆ ಮಾಡಲು ವಿಳಂಬ ಮಾಡುತ್ತಿರುವುದರಿಂದ ಸೋಂಕು ಮತ್ತಷ್ಟು ಹರಡುವ ಸಾಧ್ಯತೆ ಇದೆ. ವರದಿ ತಡವಾಗಿ ಕೈಸೇರಿದರೆ ಮತ್ತು ಒಂದು ವೇಳೆ ಪಾಸಿಟಿವ್ ಎಂದು ಪತ್ತೆಯಾದರೆ, ಅಷ್ಟರಲ್ಲಿ ಸೋಂಕಿತ ವ್ಯಕ್ತಿ ಸುತ್ತಾಡಿದ ಸ್ಥಳಗಳಲ್ಲಿ ಹಾಗೂ ಅವರ ಸಂಪರ್ಕಕ್ಕೆ ಬಂದವರಿಗೂ ಕೊರೊನಾ ಹರಡಿರುತ್ತದೆ.‌ ಆದ್ದರಿಂದ ತ್ವರಿತ ಪ್ರಕ್ರಿಯೆಗೆ ಒತ್ತು ನೀಡಿ, ಜಿಲ್ಲೆಯಲ್ಲಿ ಮತ್ತಷ್ಟು ವ್ಯಾಪಿಸುವುದನ್ನು ತಪ್ಪಿಸಬೇಕು’ ಎಂದು ಸ್ಥಳೀಯ ಇನಾಯತ್‌ವುಲ್ಲಾ ಒತ್ತಾಯಿಸಿದರು.

ಕೊನೆ ಹಂತಕ್ಕೆ ತಲುಪಿದ ನಂತರ ಬಂದರೆ ಪ್ರಯೋಜನವಿಲ್ಲ ಎಂಬುದಾಗಿ ಅಧಿಕಾರಿಗಳು ಹಾಗೂ ವೈದ್ಯರು ಮೊದಲಿನಿಂದಲು ಹೇಳುತ್ತಲೇ ಇದ್ದಾರೆ. ಆದ್ದರಿಂದ ತಪಾಸಣೆಗಾಗಿ ಯಾರೇ ಬಂದರೂ ಅವರ ಗಂಟಲು ಹಾಗೂ ಮೂಗು ದ್ರವ ತಕ್ಷಣ ಸಂಗ್ರಹಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು