ಮಂಗಳವಾರ, ಡಿಸೆಂಬರ್ 10, 2019
20 °C
ವಾಲ್ಮೀಕಿ ನಾಯಕ ಸಮುದಾಯದ ಮುಖಂಡ ಜಯಪಾಲಯ್ಯ

ತಿಪ್ಪೇಸ್ವಾಮಿ ವಿರುದ್ಧ ಗೆಲ್ಲಲು ನಾನೇ ಸಾಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರದಿಂದ ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಸ್ಪರ್ಧಿಸಿದರೆ, ಆತನ ವಿರುದ್ಧ ಗೆಲ್ಲಲು ನನ್ನಂತ ಬಿಜೆಪಿ ಕಾರ್ಯಕರ್ತ ಸಾಕು’ ಎಂದು ವಾಲ್ಮೀಕಿ ನಾಯಕ ಸಮುದಾಯದ ಮುಖಂಡ ಜಯಪಾಲಯ್ಯ ಹೇಳಿದರು.

‘ಪಕ್ಷ ಟಿಕೆಟ್ ನೀಡಿದಲ್ಲಿ ಕ್ಷೇತ್ರದ ಬಿಜೆಪಿ ಸಾಮಾನ್ಯ ಕಾರ್ಯಕರ್ತ ಸಾಕು. ರಾಜ್ಯ ನಾಯಕರಾದ ರಾಮುಲು ಬೇಕಿಲ್ಲ’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿರುದ್ಧ ಸವಾಲು ಹಾಕಿದ್ದ ತಿಪ್ಪೇಸ್ವಾಮಿ ಅವರಿಗೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮರು ಸವಾಲು ಹಾಕಿದರು.

‘ಶ್ರೀರಾಮುಲು ವಾಲ್ಮೀಕಿ ನಾಯಕ ಸಮುದಾಯದ ರಾಜ್ಯ ಮುಖಂಡ ಎಂಬುದನ್ನು ಸಮುದಾಯವೇ ಒಪ್ಪಿಕೊಂಡಿದೆ. ಅವರು ಸಮುದಾಯಕ್ಕೆ ಮೇರು ಪರ್ವತವಿದ್ದಂತೆ. ಸಿದ್ದರಾಮಯ್ಯ ಕೂಡ ಕಾಂಗ್ರೆಸ್‌ನ ರಾಜ್ಯ ಮುಖಂಡರು. ಅವರಿಬ್ಬರು ಎಲ್ಲಿ ಬೇಕಾದರೂ ಚುನಾವಣೆಯಲ್ಲಿ ಎದುರಾಳಿಗಳಾಗಿ ಸ್ಪರ್ಧಿಸಲಿ. ಆ ಕುರಿತು ತಿಪ್ಪೇಸ್ವಾಮಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ’ ಎಂದರು.

‘ಆಂಧ್ರದ ಬೋಯಾ ಕರ್ನಾಟಕದ ವಾಲ್ಮೀಕಿ ನಾಯಕ ಸಮುದಾಯ ಎರಡೂ ಒಂದೇ ಆಗಿದ್ದು, ಬೇರೆ ಬೇರೆ ಅಲ್ಲ. ಸಮುದಾಯದವರಲ್ಲಿ ಗೊಂದಲ ಸೃಷ್ಟಿಸಿ, ರಾಮುಲು ವಿರುದ್ಧ ಮಾತನಾಡಿ, ದೊಡ್ಡ ವ್ಯಕ್ತಿಯಾಗಲು ಹೊರಟಿದ್ದಾರೆ. ಇದು ಖಂಡಿತ ಸಾಧ್ಯವಿಲ್ಲ. ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ತಮ್ಮನನ್ನೇ ಗೆಲ್ಲಿಸಿಕೊಳ್ಳಲು ಸಾಧ್ಯವಾಗದ ತಿಪ್ಪೇಸ್ವಾಮಿ ಅವರು ಮತ್ತೊಮ್ಮೆ ಶಾಸಕರಾಗಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಮೊಳಕಾಲ್ಮುರಿನಲ್ಲಿ ಈ ಹಿಂದೆ ಯಾವ ಪಕ್ಷದಿಂದ ಸ್ಪರ್ಧಿಸಿ ತಿಪ್ಪೇಸ್ವಾಮಿ ಶಾಸಕರಾದರು. ಯಾರ ಭಾವಚಿತ್ರದೊಂದಿಗೆ ಪ್ರಚಾರ ಕೈಗೊಂಡು ಗೆದ್ದರು ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ. ಅದನ್ನು ಅವರು ಮರೆತಂತಿದೆ. ಸೋತ ನಂತರ ಸುಳ್ಳು ಹೇಳಿಕೊಂಡು ಸಮುದಾಯದ ಮುಖಂಡನ ವಿರುದ್ಧ ಅಪಪ್ರಚಾರಕ್ಕೆ ಮುಂದಾಗಿರುವುದು ಅವರ ಘನತೆಗೆ ಶೋಭೆ ತರುವಂತದಲ್ಲ’ ಎಂದರು.

‘ಸೋಲಿನ ಭೀತಿಯಿಂದಾಗಿ ಬಳ್ಳಾರಿ ಬಿಟ್ಟು ಮೊಳಕಾಲ್ಮುರಿಗೆ ಶ್ರೀರಾಮುಲು ಬಂದಿಲ್ಲ. ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಅಲ್ಲಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೇ ಸಚಿವರಾಗಿದ್ದಾರೆ. ಮೊಳಕಾಲ್ಮುರು ಕ್ಷೇತ್ರದ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರುಣಿಸಲು ₹ 614 ಕೋಟಿ, ರಸ್ತೆಗಳ ಅಭಿವೃದ್ಧಿಗಾಗಿ ₹ 100 ಕೋಟಿ ಅನುದಾನ ತಂದಿದ್ದಾರೆ. ಇಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ಶುಶ್ರೂಷಕಿಯರು ಇದ್ದಾರೆ. ಇವೆಲ್ಲಾ ಅಭಿವೃದ್ಧಿ ಕಾರ್ಯಗಳಲ್ಲವೇ’ ಎಂದು ಪ್ರಶ್ನಿಸಿದರು.

ಸಮುದಾಯದ ಮುಖಂಡರಾದ ಮಹಂತೇಶ್, ಮಹೇಶ್, ಮೋಹನ್, ಪ್ರಕಾಶ್, ಶಿವಣ್ಣ, ಓಬಳೇಶ, ಅಶ್ವಥ ನಾಯಕ, ಪಾಲಯ್ಯ, ಚಂದ್ರಣ್ಣ, ಹೊನ್ನೂರ್‌ ಸ್ವಾಮಿ, ದಾಸರೆಡ್ಡಿ, ಪ್ರಕಾಶ್‌ರೆಡ್ಡಿ, ರಾಮರೆಡ್ಡಿ ಅವರೂ ಇದ್ದರು.

ಪ್ರತಿಕ್ರಿಯಿಸಿ (+)