ಭಾನುವಾರ, ಆಗಸ್ಟ್ 25, 2019
24 °C
‘ಮತ್ತೆ ಕಲ್ಯಾಣ’ ಅಭಿಯಾನದಲ್ಲಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ದುರ್ಗುಣ ಸುಡುವ ಯಜ್ಞ ಮಾಡಿ

Published:
Updated:
Prajavani

ಚಿತ್ರದುರ್ಗ: ‘ನಮ್ಮೊಳಗಿನ ದುರ್ಗುಣಗಳನ್ನು ಸುಟ್ಟಾಗ ಮಾತ್ರ ಸಮಾಜದಲ್ಲಿ ಎಲ್ಲ ರೀತಿಯಲ್ಲೂ ಬದಲಾವಣೆ ಕಾಣಲು ಸಾಧ್ಯ’ ಎಂದು ಸಾಣೇಹಳ್ಳಿಯ ತರಳಬಾಳು ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ತರಾಸು ರಂಗಮಂದಿರದಲ್ಲಿ ಗುರುವಾರ ಸಹಮತ ವೇದಿಕೆ ಹಮ್ಮಿಕೊಂಡಿದ್ದ ‘ಮತ್ತೆ ಕಲ್ಯಾಣ’ ಸಂವಾದದಲ್ಲಿ ಅವರು ಮಾತನಾಡಿದರು.

‘ಪುರೋಹಿತರ ಮಾತು ಕೇಳಿ ಯಜ್ಞಯಾಗಾದಿ ಕೈಗೊಂಡು ತುಪ್ಪ, ವಸ್ತ್ರ, ಆಹಾರ ಧಾನ್ಯ ಸುಡುವುದರಿಂದ ಸುಸಂಸ್ಕೃತ ನಾಗರಿಕ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಅಂತರಂಗ ಶುದ್ಧಿಯೊಂದಿಗೆ ಶರಣರ ತತ್ವಗಳನ್ನು ಪಾಲಿಸುವ ಮೂಲಕ ನಮ್ಮನ್ನು ನಾವೇ ಜಾಗೃತಗೊಳಿಸಿಕೊಳ್ಳಬೇಕು. ಆ ಮೂಲಕ ಕಲ್ಯಾಣದ ಹಾದಿಯಲ್ಲಿ ಸಾಗಬೇಕು’ ಎಂದರು.

‘ಸರ್ಕಾರಗಳಿಂದ ಕೊಡುವುದಷ್ಟೇ ಮುಖ್ಯವಾಗಬಾರದು. ತನಗೆ ಬೇಕಾದ ಅಗತ್ಯ ವಸ್ತು ಕೊಳ್ಳಲು ಸಂಪಾದಿಸುವ ಮಾರ್ಗ ತೋರಿಸುವಂಥ ಕಾಯಕ ಶ್ರದ್ಧೆ ಯೋಜನೆ ಜಾರಿಗೆ ತರಬೇಕು’ ಎಂದು ಸ್ವಾಮೀಜಿ ಸರ್ಕಾರಗಳಿಗೆ ಒತ್ತಾಯಿಸಿದರು.

ಸಂವಾದದಲ್ಲಿ ಪ್ರಶ್ನೋತ್ತರ: ಸಾಹಿತಿ ಲೋಕೇಶ ಅಗಸನಕಟ್ಟೆ, ‘ಬಸವಣ್ಣ, ಗಾಂಧಿ, ಅಂಬೇಡ್ಕರ್ ಅವರ ಹೋರಾಟಕ್ಕೆ ಲಕ್ಷಾಂತರ ಮಂದಿ ಕೈಜೋಡಿಸುತ್ತಿದ್ದರು. ಅವರಲ್ಲಿ ನೈತಿಕತೆ ಇದ್ದಿದ್ದರಿಂದಲೇ ನಾಯಕತ್ವ ಮೆಚ್ಚಿಕೊಂಡಿದ್ದರು. ಆದರೆ, ಪ್ರಸ್ತುತ ದಿನಗಳಲ್ಲಿ ಯಾವ ರೀತಿಯ ಚಳವಳಿ ಮಾಡಲು ಸಾಧ್ಯವಾಗದಂಥ ಪರಿಸ್ಥಿತಿ ಇದೆ. ಉದಾರವಾದಿ ಬದಲು ಉಪಯುಕ್ತವಾದಿ ಚಳವಳಿ ಹೆಚ್ಚುತ್ತಿವೆ. ಸಿನಿಕತನ ಅಧಿಕವಾಗಿ ಚಳವಳಿ ಅವಸಾನದತ್ತ ಸಾಗಿದೆ’ ಎಂದು ‘12ನೇ ಶತಮಾನದಲ್ಲಿ ಇದ್ದಂತ ಚಳವಳಿ ಈಗೇಕಿಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದರು.

ಪ್ರಾಧ್ಯಾಪಕ ಡಾ.ಜೆ. ಕರಿಯಪ್ಪ ಮಾಳಿಗೆ, ‘ಮೂಲಭೂತವಾದದಲ್ಲಿ ಬದಲಾವಣೆ ಎಂದಿಗೂ ಸಾಧ್ಯವಿಲ್ಲ. ಅದು ನಿಂತ ನೀರು. ಎಲ್ಲರೂ ನೈತಿಕತೆಯ ಬಗ್ಗೆ ಮಾತನಾಡುತ್ತೇವೆ. ಆದರೆ, ದೇಶದಲ್ಲಿ ಅನೈತಿಕತೆ ವಿಜೃಂಭಿಸುತ್ತಿದೆ. ಇದಕ್ಕೆ ನಾವೆಲ್ಲರೂ ಕಾರಣ. ಇದರಿಂದಾಗಿ ಎಲ್ಲ ಕ್ಷೇತ್ರಗಳಲ್ಲೂ ವಿಫಲರಾಗುತ್ತಿದ್ದೇವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಜಾತ್ಯತೀತ ಎಂದು ಹೇಳುತ್ತಲೇ ಜಾತಿವಾದಿ ಆಗುತ್ತಿದ್ದೇವೆ. ಹೀಗಿದ್ದಾಗ ಬದಲಾವಣೆ ಎಂಬುದು ಭ್ರಮೆಯಾಗಿಯೇ ಉಳಿಯುತ್ತದೆ. ಈ ಬಗ್ಗೆ ನಮ್ಮಲ್ಲೇ ಅರಿವು ಮೂಡಬೇಕು. ಮಾತು ಮತ್ತು ಮನಸ್ಸು ಶುದ್ಧವಾದರೆ ಖಂಡಿತ ಎಲ್ಲವೂ ಬದಲಾಗಲು ಸಾಧ್ಯವಿದೆ. ಜಾತಿ ಭೇದವಿಲ್ಲದ ಬಸವಣ್ಣನ ತತ್ವ, ವಚನ ಸಾಹಿತ್ಯದಲ್ಲಿನ ಅಂಶ ಜೀವನದಲ್ಲಿ ಅಳವಡಿಸಿಕೊಂಡರೆ ಸುಂದರ ಸಮಾಜ ನಿರ್ಮಾಣ ಅಸಾಧ್ಯವಲ್ಲ’ ಎಂದು ತತ್ವಕ್ಕೂ ಮೂಲಭೂತವಾದಕ್ಕೂ ಇರುವ ವ್ಯತ್ಯಾಸ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಸಂಸದ ಎ.ನಾರಾಯಣಸ್ವಾಮಿ, ‘12ನೇ ಶತಮಾನದ ಬಸವಣ್ಣನ ಕಾಲದಲ್ಲಿ ನಿಸ್ವಾರ್ಥ ಜೀವಸಂಕುಲವಿತ್ತು. ಆದರೆ, ನಾವು ಪ್ರಸ್ತುತ ದಿನಗಳಲ್ಲಿ ಸ್ವಾರ್ಥ ಸಂಕುಲದ ಮಧ್ಯೆ ಜೀವಿಸುತ್ತಿದ್ದೇವೆ. ಎಲ್ಲಿಯವರೆಗೂ ದೇಶದ ಪ್ರತಿಯೊಬ್ಬ ಮತದಾರ ಜಾತಿ ಮೀರಿ ಮತ ಚಲಾಯಿಸುವುದಿಲ್ಲವೋ ಅಲ್ಲಿಯವರೆಗೂ ಜನಪ್ರತಿನಿಧಿಗಳು ಜಾತಿಯ ಸಂಕೋಲೆಯಿಂದ ದೂರ ಉಳಿಯಲು ಸಾಧ್ಯವಿಲ್ಲ’ ಎಂದು ಜನಪ್ರತಿನಿಧಿಗಳೇ ಜಾತಿ-ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸಿ, ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ್ದು, ಹೀಗೆ.

ಸರ್ದಾರ್ ಸೇವಾಲಾಲ್ ಸ್ವಾಮೀಜಿ ಅವರೂ ಇದ್ದರು.

Post Comments (+)