ದೇಶದಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠವಾಗಲಿದೆ

ಮಂಗಳವಾರ, ಜೂಲೈ 23, 2019
20 °C
ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಮೊಳಕಾಲ್ಮುರು ಶಾಸಕ ಬಿ.ಶ್ರೀರಾಮುಲು

ದೇಶದಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠವಾಗಲಿದೆ

Published:
Updated:
Prajavani

ಚಿತ್ರದುರ್ಗ: ‘ದೇಶದಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಬಲವರ್ಧನೆ ಆಗುತ್ತಿದ್ದು, ಅದಕ್ಕೆ ಈಚೆಗೆ ನಡೆದ ಲೋಕಸಭಾ ಚುನಾವಣೆಯೇ ಸಾಕ್ಷಿ. ಮತ್ತಷ್ಟು ಬಲಿಷ್ಠಗೊಳಿಸಲು ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಲಾಗಿದೆ’ ಎಂದು ಮೊಳಕಾಲ್ಮುರು ಶಾಸಕ ಬಿ.ಶ್ರೀರಾಮುಲು ಹೇಳಿದರು.

ನೀಲಕಂಠೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಸಂಘಟನಾ ಪರ್ವ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶದ ಪ್ರತಿ ಜಿಲ್ಲೆಯಲ್ಲೂ ಬಿಜೆಪಿ ಸದಸ್ಯತ್ವ ಸಂಖ್ಯೆ ಈಗಿರುವುದಕ್ಕಿಂತಲೂ 1ಲಕ್ಷದಿಂದ 2ಲಕ್ಷದವರೆಗೂ ಸದಸ್ಯರ ಸಂಖ್ಯೆ ಹೆಚ್ಚಿಸುವ ದೃಷ್ಟಿಯಿಂದ ಸದಸ್ಯತ್ವ ಅಭಿಯಾನಕ್ಕೆ ವಾರಣಾಸಿಯಲ್ಲಿ ಪ್ರಧಾನಿ ಮೋದಿ ಅವರು ಚಾಲನೆ ನೀಡಿದ್ದಾರೆ. ಇದರಿಂದ ಬಿಜೆಪಿ ಮತ್ತಷ್ಟು ಶಕ್ತಿಯುತ ಪಕ್ಷವಾಗಿ ಹೊರಹೊಮ್ಮಲಿದೆ’ ಎಂದರು.

‘ನಮ್ಮ ಜಿಲ್ಲೆಯಲ್ಲಿ ಈ ಬಾರಿ ಅಭಿಯಾನದ ಮೂಲಕ 1 ಲಕ್ಷ ಸದಸ್ಯತ್ವ ನೋಂದಣಿ ಗುರಿ ಹೊಂದಲಾಗಿದೆ. ಅದರಲ್ಲಿ 35 ಸಾವಿರದಿಂದ 40 ಸಾವಿರ ಮಹಿಳಾ ಸದಸ್ಯರನ್ನು ನೋಂದಾಯಿಸಲು ಜಿಲ್ಲೆಯ ಬಿಜೆಪಿ ಮುಖಂಡರು, ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಿ’ ಎಂದು ಸಲಹೆ ನೀಡಿದರು.

‘ಐದು ಜಿಲ್ಲೆಗೆ ಸೀಮಿತವಾಗಿದ್ದ ಮೈತ್ರಿ ಸರ್ಕಾರದ ದುರಾಡಳಿತಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡೂ ಪಕ್ಷಗಳ ಅನೇಕ ಶಾಸಕರು ಅತೃಪ್ತರಾಗಿದ್ದು, ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ಅರಿತು ರಾಜೀನಾಮೆಗೆ ಮುಂದಾಗಿದ್ದಾರೆ. ಈ ಮೂಲಕ ಕೌಂಟ್ ಡೌನ್ ಶುರುವಾಗಿದ್ದು, ರಾಜ್ಯದಲ್ಲಿ ಅತಿ ಶೀಘ್ರದಲ್ಲೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ರೈತರು, ಬಡವರು, ಸೌಕರ್ಯಗಳಿಂದ ವಂಚಿತರಾದವರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಸದ ಎ.ನಾರಾಯಣಸ್ವಾಮಿ, ‘ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯತ್ವ ಹೊಂದಿರುವ ಏಕೈಕ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಹಿಂದಿನ ನೋಂದಣಿ ಅಭಿಯಾನದ ಸಂದರ್ಭದಲ್ಲಿ ಜಿಲ್ಲೆಯಲ್ಲಿ 2 ಲಕ್ಷದವರೆಗೂ ಸದಸ್ಯತ್ವ ಹೊಂದಿದ್ದಾರೆ. ಹಿಂದಿನದು ಸೇರಿ ಈ ಬಾರಿ 3 ಲಕ್ಷ ಗುರಿ ಹೊಂದಲಾಗಿದ್ದು, ಖಂಡಿತವಾಗಿಯೂ ಆಗುತ್ತದೆ’ ಎಂದರು.

‘ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದು, ಮಹಿಳೆಯರಿಗೂ ಆದ್ಯತೆ ನೀಡಿದ್ದಾರೆ. ನಿಮ್ಮ ಪರವಾಗಿ ಕೆಲಸ ಮಾಡುವ ಪಕ್ಷಕ್ಕೆ ನಿಮ್ಮಿಂದ ಉತ್ತಮ ಸಹಕಾರ ದೊರೆಯಲಿದೆ ಎಂಬ ವಿಶ್ವಾಸವೂ ಇದೆ’ ಎಂದು ಹೇಳಿದರು.

‘ಉಜ್ವಲ್ ಸೇರಿ ವಿವಿಧ ಯೋಜನೆಯಡಿ ಪ್ರತಿ ಅರ್ಹ ಫಲಾನುಭವಿಗೆ ಮನೆ, ಉಚಿತ ವಿದ್ಯುತ್, ಉಚಿತ ಅಡುಗೆ ಅನಿಲ ಸೇರಿ ಬಡತನ ನಿರ್ಮೂಲನೆಗೆ ಕೇಂದ್ರ ಸರ್ಕಾರ ಒತ್ತು ನೀಡಿದೆ. ಮುಂದಿನ 5 ವರ್ಷದೊಳಗೆ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಸೇರಿ ಕೇಂದ್ರದಿಂದ ಜಾರಿಗೊಳಿಸುವ ಎಲ್ಲಾ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ತರಲಿದೆ. ಈ ವಿಚಾರದಲ್ಲಿ ದೇಶದ ಪ್ರಜೆಗಳು, ಮತದಾರರು ಅನುಮಾನ ಪಡುವ ಅಗತ್ಯವಿಲ್ಲ’ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ನವೀನ್, ಮುಖಂಡರಾದ ಜಿ.ಎಂ.ಸುರೇಶ್, ಸಿದ್ದೇಶ್‌ಯಾದವ್, ಮಲ್ಲಿಕಾರ್ಜುನ್, ಮುರಳಿ, ರತ್ನಮ್ಮ, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ಸುರೇಶ್‌ ಸಿದ್ದಾಪುರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !