ಭಾನುವಾರ, ಅಕ್ಟೋಬರ್ 25, 2020
27 °C
ಭೂಮಿ ಹಕ್ಕು ವಸತಿ ವಂಚಿತರ ಹೋರಾಟ ಸಮಿತಿ ಒತ್ತಾಯ

ನಮ್ಮ ಭೂಮಿ ನಮಗೆ ನೀಡಿ: ಭೂಮಿ ಹಕ್ಕು ವಸತಿ ವಂಚಿತರ ಹೋರಾಟ ಸಮಿತಿ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ರಾಜ್ಯದಲ್ಲಿನ ಬಡಜನರ ‘ಭೂಮಿ-ವಸತಿ’ ಸಮಸ್ಯೆಯನ್ನು ಮುಂಬರುವ ಅಧಿವೇಶನದಲ್ಲಿ ಬಗೆಹರಿಸಬೇಕು ಎಂದು ಭೂಮಿ ಹಕ್ಕು ವಸತಿ ವಂಚಿತರ ಹೋರಾಟ ಸಮಿತಿ ಮುಖಂಡರು ಶನಿವಾರ ಆಗ್ರಹಿಸಿದರು.

ಸಮಸ್ಯೆ ಪರಿಹರಿಸುವ ಸಂಬಂಧ ಉತ್ತಮ ತೀರ್ಮಾನ ತೆಗೆದುಕೊಳ್ಳಬೇಕು ಎಂದು ರಾಜ್ಯದಾದ್ಯಂತ ನಡೆಯುತ್ತಿರುವ ಜನಜಾಗೃತಿ ಜಾಥಾ ಜಿಲ್ಲೆಗೆ ತಲುಪಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೃತ್ತದ ಬಳಿ ಸರಳವಾಗಿ ಪ್ರಚಾರಾಂದೋಲನ ಸಭೆ ನಡೆಸುವ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಮುಖಂಡ ಮುನಿಯಪ್ಪ, ‘ಕೋವಿಡ್ ನೆಪವೊಡ್ಡಿ ಭೂಮಿ ಮಾರಾಟ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಬೊಕ್ಕಸದಲ್ಲಿ ಹಣವಿಲ್ಲವೆಂದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕೆ ಹೊರತು ಭೂಮಿ ಮಾರಾಟಕ್ಕೆ ಮುಂದಾಗಬಾರದು. ಬಡಜನರಿಗೆ ಪರ್ಯಾಯ ವ್ಯವಸ್ಥೆ ಮಾಡದೇ ಅವರನ್ನು ಭೂಮಿಯಿಂದಾಗಲೀ, ಮನೆಯಿಂದಾಗಲೀ ಒಕ್ಕಲೆಬ್ಬಿಸಬಾರದು’ ಎಂದು ಆಗ್ರಹಿಸಿದರು.

‘ಬಗರ್‌ಹುಕುಂ ಹಾಗೂ ಅರಣ್ಯ ಹಕ್ಕು ಅರ್ಜಿಗಳನ್ನು ನವೆಂಬರ್ ಅಧಿವೇಶನದ ಒಳಗಾಗಿ ಇತ್ಯರ್ಥಗೊಳಿಸಿ ಬಡಜನರಿಗೆ ಹಕ್ಕುಪತ್ರ ನೀಡಬೇಕು. ಸರ್ಕಾರಿ ಭೂಮಿಯ ಆಡಿಟಿಂಗ್ ನಡೆಸಬೇಕು. ಈಗಿರುವ ಭೂಮಿಯನ್ನು ಉಳುಮೆಗೆ ಮತ್ತು ನಿವೇಶನಕ್ಕಾಗಿ ಕೂಡಲೇ ವಿತರಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ರೈತ ಮುಖಂಡ ನುಲೇನೂರು ಶಂಕರಪ್ಪ, ‘ಉಳುವವನೇ ಭೂಮಿಯ ಒಡೆಯ ಎಂಬ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಆಶಯಕ್ಕೆ ಈಗಿನ ಸರ್ಕಾರ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಇದು ಎಷ್ಟು ಸರಿ’ ಎಂದು ಪ್ರಶ್ನಿಸಿದ ಅವರು, ‘ಯಾವ ಕಾರಣಕ್ಕೂ ರೈತರನ್ನಾಗಲಿ, ಭೂ ವಂಚಿತರನ್ನಾಗಲಿ ಒಕ್ಕಲೆಬ್ಬಿಸಬಾರದು’ ಎಂದು ಆಗ್ರಹಿಸಿದರು.

‘ಕೋವಿಡ್ ನೆಪವೊಡ್ಡಿ ಪ್ರತಿಭಟನಕಾರರನ್ನು ಹತ್ತಿಕ್ಕಲು ಸರ್ಕಾರ ಮುಂದಾಗಿದೆ. ಪ್ರತಿಭಟಿಸುವ ಹಕ್ಕನ್ನೇ ಕಿತ್ತುಕೊಳ್ಳಲು ಹೊರಟಿದೆ. ಜಾರಿಗೊಳಿಸಲು ಮುಂದಾಗಿರುವ ಸುಗ್ರೀವಾಜ್ಞೆಯಿಂದ ಜನತೆಗೆ ಅನುಕೂಲ ಆಗುವಂತಿದ್ದರೆ ಅದನ್ನು ಅಧಿವೇಶನದಲ್ಲಿ ಚರ್ಚಿಸಿದ ಬಳಿಕ ಅನುಷ್ಠಾನಕ್ಕೆ ತರಬಹುದಿತ್ತು. ಆತುರದಲ್ಲಿ ಜಾರಿಗೆ ತರುವುದನ್ನು ಗಮನಿಸಿದರೆ. ಕಾರ್ಪೊರೇಟ್ ಸಂಸ್ಥೆಗಳಿಗೆ ಮಣೆ ಹಾಕಲು ಉತ್ಸಾಹ ತೋರಿದಂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಪರ, ರೈತಪರ ಹಾಗೂ ಕಾರ್ಮಿಕಪರ ಕಾಳಜಿ ಇದ್ದರೆ ಕೂಡಲೇ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳನ್ನು ರದ್ದುಗೊಳಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೋರಿದರು.

ಸಮಿತಿಯ ಟಿ.ಶಫೀವುಲ್ಲಾ, ರಾಜಶೇಖರ್, ಚನ್ನಮ್ಮ ಇದ್ದರು.

ಸುಗ್ರೀವಾಜ್ಞೆ ರದ್ದುಗೊಳಿಸಲು ಆಗ್ರಹ

ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳನ್ನು ರದ್ದುಗೊಳಿಸಬೇಕು ಎಂದು ಭಾರತ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಸಮಿತಿ ಕಾರ್ಯಕರ್ತರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ ಅವರ ಮೂಲಕ ಶನಿವಾರ ಮನವಿ ರವಾನಿಸಿದರು.

ಕೋವಿಡ್‌ನಿಂದ ದೇಶದ ಜನತೆ ತತ್ತರಿಸಿರುವ ಇಂತಹ ಸಂದರ್ಭದಲ್ಲಿ ಸುಗ್ರೀವಾಜ್ಞೆ ಹೇರುವ ಮೂಲಕ ಮತ್ತಷ್ಟು ಸಂಕಷ್ಟಕ್ಕೆ ನೂಕಲು ಸರ್ಕಾರ ಮುಂದಾಗಿದೆ. ಇವು ರೈತ, ಕಾರ್ಮಿಕ ವಿರೋಧಿ ನೀತಿಗಳಾಗಿದ್ದು, ರದ್ದುಗೊಳಿಸಬೇಕು ಎಂದು ಕೋರಿದರು.

ಪದಾಧಿಕಾರಿಗಳಾದ ಜಿ.ಸಿ.ಸುರೇಶ್‌ಬಾಬು, ಸಿ.ವೈ. ಶಿವರುದ್ರಪ್ಪ, ಬಿ.ಬಸವರಾಜ್, ಟಿ.ಆರ್.ಉಮಾಪತಿ, ದೊಡ್ಡಉಳ್ಳಾರ್ತಿ ಕರಿಯಪ್ಪ, ಜಾಫರ್‌ಷರೀಫ್, ಸತ್ಯಕೀರ್ತಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.