ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು, ಮೇವಿಲ್ಲದೆ ಜನ– ಜಾನುವಾರು ಕಂಗಾಲು

ಬಿ.ದುರ್ಗ ಹೋಬಳಿಯಲ್ಲಿ ವಿದ್ಯುತ್ ಸಮಸ್ಯೆಯಿಂದ ತೊಂದರೆ
Last Updated 24 ಮೇ 2014, 5:40 IST
ಅಕ್ಷರ ಗಾತ್ರ

ಚಿಕ್ಕಜಾಜೂರು:  ಬಿ. ದುರ್ಗ ಹೋಬಳಿಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಜನರು ಪರಿತಪಿಸುವಂತಾಗಿದೆ. ಮತ್ತೊಂದೆಡೆ, ಹಸಿವಿನಿಂದ ಕಂಗೆಟ್ಟ ಜಾನುವಾರು ಹಸಿವನ್ನು ನೀಗಿಸಲು ಹಿಡಿ ಮೇವಿಗಾಗಿ ಅಲೆದಾಡುವಂತಾಗಿದೆ.

ಕೆಲವು ಗ್ರಾಮಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ಇದ್ದರೂ, ವಿದ್ಯುತ್‌ ಸಮಸ್ಯೆಯಿಂದಾಗಿ ನೀರಿಗಾಗಿ ಜನರು ಪರದಾಡುವಂತಾಗಿದೆ. ಸಮೀಪದ ಹುಲೇಮಳಲಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಮಹಿಳೆಯರು ಗಂಟೆಗಟ್ಟಲೆ ಕಾಯುವಂತಾಗಿದೆ. ಮುಂಜಾನೆ 6ಕ್ಕೆ ಕರೆಂಟ್ ಕೊಟ್ಟು 9ಕ್ಕೆ ತೆಗೆಯುತ್ತಾರೆ. ಮನೆಕೆಲಸಗಳನ್ನು ಮಾಡಿಕೊಂಡು ನೀರಿಗೆ ಬರುವ ವೇಳೆಗೆ ಕರೆಂಟ್‌ ಹೋಗುತ್ತದೆ. ಸಿಕ್ಕ ಅಲ್ಪ ಸ್ವಲ್ಪ ನೀರಿನಲ್ಲೇ ಅಡಿಗೆ, ಪಾತ್ರೆಗಳನ್ನು ತೊಳೆಯುತ್ತೇವೆ. ಬಟ್ಟೆ ತೊಳೆಯಲು ಮತ್ತೆ ಮರುದಿನದವರೆಗೆ ಕಾಯುವಂತಾಗಿದೆ ಎನ್ನುತ್ತಾರೆ ಪ್ರೇಮಾ, ಕರಿಯಮ್ಮ, ಚಂದ್ರಕಲಾ, ಗೀತಮ್ಮ, ಲಕ್ಕಮ್ಮ, ಗಂಗಮ್ಮ ಮೊದಲಾದವರು.

ಫ್ಲೋರೈಡ್‌ ಯುಕ್ತ ನೀರು
ಗ್ರಾಮದ ಒಂದು ಕೊಳವೆ ಬಾವಿಯಲ್ಲಿ ಸಿಹಿ ನೀರು ಇದೆ. ಅದರಲ್ಲಿ ನೀರು ಕಡಿಮೆಯಾಗಿದ್ದರಿಂದ, ಮತ್ತೊಂದು ಕೊಳವೆ ಬಾವಿಯನ್ನು ಕೊರೆಸಲಾಗಿದೆ. ಆದರೆ, ಇದರಲ್ಲಿ ಫ್ಲೋರೈಡ್‌ ಅಂಶವಿರುವುದರಿಂದ ನೀರು ಕುಡಿಯಲು ಅಷ್ಟೊಂದು ಯೋಗ್ಯವಾಗಿಲ್ಲ. ಆದರೂ, ಅನಿವಾರ್ಯವಾಗಿ ಆ ನೀರನ್ನು ಬಳಸುತ್ತಿದ್ದೇವೆ. ಫ್ಲೋರೈಡ್‌ ಅಂಶದಿಂದ ಹಲವು ರೋಗಗಳು ಬರುತ್ತವೆ ಎಂಬುದು ಗೊತ್ತಿದ್ದರೂ, ಅನ್ಯ ಮಾರ್ಗವಿಲ್ಲದೆ ನೀರನ್ನು ಬಳಸುವುದು ಅನಿವಾರ್ಯವಾಗಿದೆ ಎಂದು ಬಸವರಾಜ್‌, ರವೀಂದ್ರ, ಶಂಕರಪ್ಪ, ನಾಗಪ್ಪ ಹೇಳುತ್ತಾರೆ.

ಶಿವಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ವಿದ್ಯುತ್‌ ಸಮಸ್ಯೆ ಹಾಗೂ ಅಂತರ್ಜಲ ಕುಸಿತದಿಂದಾಗಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನೀರಿನ ಸಮಸ್ಯೆಯನ್ನು ನಿವಾರಿಸಲು ಪಂಚಾಯ್ತಿ ವತಿಯಿಂದ ಕೊಳವೆ ಬಾವಿ ಕೊರೆಸಲಾಗುತ್ತಿದೆ. ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳು ವಿಫಲವಾಗುತ್ತಿರುವುದು ಮತ್ತು ವಿದ್ಯುತ್‌ ಸಮಸ್ಯೆ ಗ್ರಾಮ ಪಂಚಾಯ್ತಿಗೆ ತಲೆ ನೋವಾಗಿದೆ ಎನ್ನುತ್ತಾರೆ ಪಿಡಿಒ ರಾಜಪ್ಪ.

ಜಾನುವಾರಿಗೆ ಮೇವಿಲ್ಲ
ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಮೇವಿನ ಸಮಸ್ಯೆ ಎದುರಾಗಿದೆ. ಕಳೆದ ವರ್ಷ ಅತಿಯಾದ ಮಳೆಯಾಗಿದ್ದರಿಂದ ಮೆಕ್ಕೆಜೋಳದ ಸಿಪ್ಪೆಯನ್ನು ಕೊಯಿಲು ಮಾಡಲಾಗಲಿಲ್ಲ. ಅಲ್ಲದೆ, ರಾಗಿ ಬಿತ್ತನೆಗೂ ಮಳೆ ಅವಕಾಶ ನೀಡಲಿಲ್ಲ. ಇದರಿಂದಾಗಿ, ಈ ಬಾರಿ ದನಗಳಿಗೆ ಮೇವು ಒದಗಿಸುವುದು ದುಸ್ತರವಾಗಿದೆ. ಕಳೆದ ಹದಿನೈದು ದಿನಗಳಿಂದ ಮಳೆಯಾಗುತ್ತಿದ್ದು, ಮೇವಿನ ಸಮಸ್ಯೆ ನಿವಾರಣೆಯಾಗಿಲ್ಲ. ಜಾನುವಾರುಗಳಿಗೆ ಮೀಸಲಾಗಿದ್ದ ಗೋಮಾಳವನ್ನು ಕೆಲವರು ಒತ್ತುವರಿ ಮಾಡಿರುವುದರಿಂದ ಜಾನುವಾರಿಗೆ ಮೇವಿನ ಮೂಲವೇ ಇಲ್ಲದಂತಾಗಿದೆ. ಇದರಿಂದಾಗಿ, ಕೆರೆ ಅಂಗಳದಲ್ಲಿ ಬೆಳೆದಿರುವ ಸೀಮೆಜಾಲಿಕಾಯಿ, ಅಲ್ಪ ಸ್ವಲ್ಪ ಹಸಿರಿನ ಕಾಂಗ್ರೆಸ್‌ ಗಿಡಗಳನ್ನು ತಿಂದು ದನಗಳು ಜೀವ ಹಿಡಿಯುವಂತಾಗಿದೆ. ಕೆಲವು ರೈತರು ದನಗಳಿಗೆ ಮೇವನ್ನು ಒದಗಿಸಲಾರದೆ, ಸಂತೆಗಳಲ್ಲಿ
ಕಡಿಮೆ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ ಎನ್ನುತ್ತಾರೆ ಶಿವಪುರ ಗ್ರಾಮದ ದನಗಾಹಿಗಳಾದ ತಿಪ್ಪಾನಾಯ್ಕ ಹಾಗೂ ಕುಮಾರನಾಯ್ಕ.
ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆಗಳು ಕಾಡುತ್ತಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿ ತಕ್ಷಣವೇ ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಜನತೆಗೆ ಎದುರಾಗಿರುವ ಸಮಸ್ಯೆಗಳನ್ನು ನಿವಾರಿಸಬೇಕು ಎಂಬುದು ಹೋಬಳಿಯ ಜನರ ಒಕ್ಕೂರಲಿನ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT