ಬುಧವಾರ, ಆಗಸ್ಟ್ 4, 2021
20 °C
ಗ್ರಾಮ ಪಂಚಾಯಿತಿಗಳಲ್ಲಿ ಕರ ವಸೂಲಿ ಕೇವಲ ಶೇ 5ರ ಸಾಧನೆ * ಬಾಕಿ ವಸೂಲಾತಿಯೂ ನಿಧಾನ

ಮಂದಗತಿಯಲ್ಲಿ ಸಾಗಿದ ತೆರಿಗೆ ಸಂಗ್ರಹ

ಕೆ.ಎಸ್. ಪ್ರಣವಕುಮಾರ್ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಜಿಲ್ಲೆಯಾದ್ಯಂತ 2020-21ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿಗಳ ತೆರಿಗೆ ಸಂಗ್ರಹ ಕಾರ್ಯ ಮಂದಗತಿಯಲ್ಲಿ ಸಾಗಿದೆ. ಕೆಲ ವರ್ಷಗಳಿಂದ ಬಾಕಿ ಉಳಿದ ತೆರಿಗೆ ವಸೂಲಿ ಕಾರ್ಯವೂ ನಿಧಾನವಾಗಿದ್ದು, ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ.

ಆಸ್ತಿ ತೆರಿಗೆ ಸಂಬಂಧ ಪ್ರತಿ ವರ್ಷದಂತೆ ಈ ಬಾರಿಯೂ 11 ಕೋಟಿಗೂ ಅಧಿಕ ಮೊತ್ತದ ಗುರಿ ನಿಗದಿಪಡಿಸಲಾಗಿದೆ. ಆದರೆ, ಮಾರ್ಚ್‌ ತಿಂಗಳಿನಿಂದ ಮೇ ವರೆಗಿನ ಲಾಕ್‌ಡೌನ್‌ ವೇಳೆ ಜಿಲ್ಲೆಯಲ್ಲಿ ಸಂಗ್ರಹವಾಗಿದ್ದು, ಕೇವಲ ₹ 10 ಲಕ್ಷ ಮಾತ್ರ.

ಜೂನ್‌ ತಿಂಗಳ ನಂತರ ಮನೆ ಮನೆಗೆ ತೆರಳಿ ತೆರಿಗೆ ಸಂಗ್ರಹಿಸಲು ಮುಂದಾಗಿರುವ ಕಾರಣ ಈ ಕಾರ್ಯ ಸ್ವಲ್ಪ ಚುರುಕು ಪಡೆದಿದ್ದು, ಈವರೆಗೆ ₹ 50ಲಕ್ಷ ದಾಟಿದೆ. ಸ್ವಯಂಪ್ರೇರಿತರಾಗಿ ಬಂದು ಕರ ಪಾವತಿಸುವವರ ಸಂಖ್ಯೆ ಹೆಚ್ಚಿಲ್ಲ. ಹೀಗಾಗಿ ಪ್ರಗತಿ ಸಾಧಿಸುವಲ್ಲಿಯೂ ಹಿನ್ನಡೆ ಉಂಟಾಗಿದೆ.

ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಖಾಸಗಿ ಕಟ್ಟಡ, ಖಾಸಗಿ ನಿವೇಶನ, ಮನೆಗಳಿಗೆ ವರ್ಷವೂ ಕರ ಪಾವತಿ ಮಾಡಬೇಕು. ಆದರೆ, ಧಾರ್ಮಿಕ ತಾಣ, ಸರ್ಕಾರಿ ಕಟ್ಟಡಗಳನ್ನು ಇದರಿಂದ ಹೊರಗಿಡಲಾಗಿದೆ.

ಆಸ್ತಿ ತೆರಿಗೆಯ ಜತೆಗೆ ನೀರಿನ ತೆರಿಗೆ, ವಿಶೇಷ ನೀರಿನ ತೆರಿಗೆ, ಜಾಹೀರಾತು ಫಲಕ, ಮನೋರಂಜನಾ ಕೇಂದ್ರಗಳು ಸೇರಿ ವಿವಿಧ ಸಂಪನ್ಮೂಲಗಳಿಂದ ಕ್ರೋಡೀಕರಣವಾಗುವ ಹಣ ಪಂಚಾಯಿತಿಗಳಿಗೆ ಬಹಳ ಮುಖ್ಯವಾಗಿದೆ. ಇದರಿಂದಲೇ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಒಂದಿಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು, ಗ್ರಾಮಗಳ ಸ್ವಚ್ಛತೆ ಹಾಗೂ ಇತರೆ ನಿರ್ವಹಣೆಗೆ ಸಹಕಾರಿಯಾಗಿದೆ. ಆದರೆ, 2019-20ನೇ ಸಾಲಿನಲ್ಲಿ ನಿಗದಿಯಾಗಿದ್ದ ₹ 14.3 ಕೋಟಿಯಲ್ಲಿ ಸಂಗ್ರಹವಾಗಿದ್ದು, ₹ 8.3 ಕೋಟಿ. ಉಳಿದ ಮೊತ್ತ ₹ 6 ಕೋಟಿ. ಆ ವರ್ಷವೂ ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿನ ಪಂಚಾಯಿತಿಗಳ ಪೈಕಿ 40 ಪಂಚಾಯಿತಿ ಹೊರತುಪಡಿಸಿ ಈವರೆಗೆ ನಿಗದಿಯಾಗಿರುವ ತೆರಿಗೆ ಮೊತ್ತ ₹ 11.24 ಕೋಟಿ ಮಾತ್ರ. ಉಳಿದವು ಸೇರಿಕೊಂಡರೆ ₹ 14 ಕೋಟಿಗೂ ಅಧಿಕ ಗುರಿ ನಿಗದಿಯಾಗಲಿದೆ. ವಿವಿಧ ರೀತಿಯ ತೆರಿಗೆಗೆ ಸಂಬಂಧಿಸಿದಂತೆ ಹಿಂದಿನ ವರ್ಷಗಳ ಹಳೆಯ ಬಾಕಿಯೂ ಸೇರಿದರೆ ₹ 55.28 ಕೋಟಿ ವಸೂಲಿ ಆಗಬೇಕಿದೆ.

ಕೆಲ ವರ್ಷಗಳ ತೆರಿಗೆ ವಸೂಲಿಯನ್ನು ಗಮನಿಸಿದರೆ, ಪ್ರತಿ ವರ್ಷ ಶೇ 60ರಷ್ಟು ಕರ ಸಂಗ್ರಹಣೆಯ ಗುರಿಯನ್ನು ತಲುಪಲೂ ಪಂಚಾಯಿತಿಗಳಿಗೆ ಕಷ್ಟವಾಗುತ್ತಿದೆ. ಈ ಬಾರಿ ಪ್ರಸಕ್ತ ವರ್ಷದ ಗುರಿಯನ್ನಾದರೂ ತಲುಪಬೇಕು ಎಂದು ಜಿಲ್ಲಾ ಪಂಚಾಯಿತಿಯಿಂದ ಸ್ಪಷ್ಟ ಸೂಚನೆ ರವಾನೆಯಾಗಿದೆ.

‘ತೆರಿಗೆ ಪಾವತಿಯೊಂದಿಗೆ ಸಹಕರಿಸಿ’

‘ನಾನೂ ಇಲ್ಲಿ ಅಧಿಕಾರವಹಿಸಿಕೊಂಡು ಕೇವಲ ಒಂದು ತಿಂಗಳಾಗಿದೆ. ಜಿಲ್ಲೆಯಲ್ಲಿ ಎಷ್ಟು ತೆರಿಗೆ ಪಾವತಿಯಾಗಿದೆ ಎಂಬ ಮಾಹಿತಿ ಪಡೆದ ನಂತರ ಕರ ವಸೂಲಿಗೆ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಸೂಚನೆ ನೀಡಿದ್ದೆ. ಇದಾದ ಬಳಿಕ ₹ 40ಲಕ್ಷ ಸಂಗ್ರಹವಾಗಿದೆ. ನಿಗದಿತ ಗುರಿ ತಲುಪುವ ವಿಶ್ವಾಸವಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಶ್‌ ತಿಳಿಸಿದ್ದಾರೆ.

‘ಸಾರ್ವಜನಿಕರು ನಿಯಮ ಪ್ರಕಾರ ಭರಿಸಬೇಕಾದ ತೆರಿಗೆಯನ್ನು ಗ್ರಾಮ ಪಂಚಾಯಿತಿಗಳಿಗೆ ಪಾವತಿಸಬೇಕು. ಗ್ರಾಮ ಪಂಚಾಯಿತಿ ಅಧಿಕಾರಿಗಳೂ ಈ ವಿಚಾರದಲ್ಲಿ ನಿರ್ಲಕ್ಷೆ ತೋರದೆ ಎಚ್ಚರವಹಿಸಬೇಕು. ಇದೇ ಮೊತ್ತದಿಂದಲೇ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಿವಿಧ ಕಾರ್ಯಗಳ, ಕಾಮಗಾರಿಗಳ ನಿರ್ವಹಣೆ ಆಗಬೇಕಿದೆ. ಆದ್ದರಿಂದ ವಸೂಲಿಗೆ ಆದ್ಯತೆ ನೀಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು