ಮಂಗಳವಾರ, ಡಿಸೆಂಬರ್ 10, 2019
20 °C
ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ

ರೈತರಿಗೆ ಉತ್ತಮ ಹಸುಗಳನ್ನು ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಅರ್ಹ ಫಲಾನುಭವಿ ರೈತರಿಗೆ ಉತ್ತಮ ಹಾಲು ನೀಡುವಂಥ ಹಸುಗಳನ್ನು ನೀಡಿ. ಇದರಿಂದ ಅವರ ಬಾಳು ಬೆಳಕಾಗಲಿದೆ’ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಸಲಹೆ ನೀಡಿದರು.

ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನಾ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಹಸು ವಿತರಿಸುವ ಯೋಜನೆ ಉತ್ತಮವಾದುದು. ಆದರೆ, ಬೆರಳೆಣಿಕೆಯಷ್ಟು ಮಂದಿಗೆ ನೀಡಲಾಗುತ್ತಿದ್ದು, ಹೆಚ್ಚಿನ ಮಂದಿಗೆ ಇದು ತಲುಪುತ್ತಿಲ್ಲ. ಈಚೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದ್ದು, 850 ಮಂದಿ ಸಲ್ಲಿಸಿದ್ದಾರೆ. ಯಾರಿಗೆ ಕೊಡುತ್ತೀರಾ’ ಎಂದು ಪ್ರಶ್ನಿಸಿದ ಅವರು, ‘ಹೆಚ್ಚು ಫಲಾನುಭವಿಗಳಿಗೆ ತಲುಪುವಂತಾಗಲು ನಿಮ್ಮ ಮೇಲಿನ ಅಧಿಕಾರಿಗಳ ಜತೆ ಚರ್ಚಿಸಿ, ನಾನೂ ಸಂಬಂಧಿಸಿದ ಸಚಿವರ ಗಮನ ಸೆಳೆಯಲು ಪ್ರಯತ್ನಿಸುತ್ತೇನೆ’ ಎಂದರು.

‘ಫಲಾನುಭವಿಗಳಿಗೆ ಹಾಲು ಕರೆಯದ, ಬಡಕಲಾದ ಹಸುಗಳನ್ನು ನೀಡಬೇಡಿ’ ಎಂದು ಸೂಚನೆ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಪಶುಸಂಗೋಪನಾ ಇಲಾಖೆ ಅಧಿಕಾರಿ, ‘ಯಾವ ಮಧ್ಯವರ್ತಿ ಇಲ್ಲದೆಯೇ ಹಸುಗಳನ್ನು ಫಲಾನುಭವಿಗಳೇ ಖರೀದಿಸಬಹುದು. ಅದನ್ನು ಇಲಾಖೆ ಅಧಿಕಾರಿಗಳಿಗೆ ತೋರಿಸಿದಲ್ಲಿ ಅವರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ’ ಎಂದು ಸಭೆ ಗಮನಕ್ಕೆ ತಂದರು.

‘ಸರ್ಕಾರ ಚಿತ್ರದುರ್ಗ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಕುರಿತು ರೈತರಿಗೆ ಮಾಹಿತಿ ನೀಡುವುದರ ಜತೆಗೆ ಸೌಲಭ್ಯ ಒದಗಿಸುವ ಜವಾಬ್ದಾರಿ ಅಧಿಕಾರಿಗಳಾದ್ದಾಗಿದೆ’ ಎಂದು ತಿಪ್ಪಾರೆಡ್ಡಿ ಹೇಳಿದರು.

‘ಫಸಲ್ ಬೀಮಾ ಯೋಜನೆಯಡಿ ಪರಿಹಾರ ನೀಡುವಾಗ ಕೆಲವೆಡೆಗಳಲ್ಲಿ ತಾರತಮ್ಯವಾಗಿದೆ ಎಂಬ ವಿಚಾರ ಗಮನಕ್ಕೆ ಬಂದಿದೆ. ಕೆಲವರಿಗೆ ₹ 8,5 ಸಾವಿರ, ಮತ್ತೆ ಕೆಲವರಿಗೆ ಕೇವಲ ₹ 1.5 ಸಾವಿರ ನೀಡಲಾಗಿದೆ. ಇದನ್ನು ಸರಿಪಡಿಸಲು ಮುಂದಾಗಿ’ ಎಂದು ಕೃಷಿ ಇಲಾಖೆ ಅಧಿಕಾರಿ ಭಾರತಿ ಅವರಿಗೆ ಸೂಚಿಸಿದರು.

ತಹಶೀಲ್ದಾರ್ ವೆಂಕಟೇಶಯ್ಯ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಾಯ್ಕ್ ಅವರೂ ಇದ್ದರು.

ಪ್ರತಿಕ್ರಿಯಿಸಿ (+)