ಗುರುವಾರ , ಅಕ್ಟೋಬರ್ 22, 2020
25 °C
ನ್ಯಾಯಾಂಗ ಇಲಾಖೆಯಲ್ಲಿ ಮೂಡಿದ ಸಂತಸ

ಲೋಕ ಅದಾಲತ್; 3,671 ಪ್ರಕರಣ ಇತ್ಯರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳ ನ್ಯಾಯಾಲಯಗಳಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಮ್ಮಿಕೊಂಡಿದ್ದ ‘ಮೆಗಾ ಇ –ಲೋಕ ಅದಾಲತ್‌’ನಲ್ಲಿ ಒಟ್ಟು 3,671 ಪ್ರಕರಣ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು.

ಜಿಲ್ಲೆಯ ನ್ಯಾಯಾಲಯಗಳಲ್ಲಿ ಒಂದೇ ದಿನ ಇಷ್ಟೊಂದು ಪ್ರಕರಣಗಳು ರಾಜಿಯಲ್ಲಿ ಇತ್ಯರ್ಥವಾಗಿದ್ದು, ಅದಾಲತ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿರುವುದು ನ್ಯಾಯಾಂಗ ಇಲಾಖೆಯಲ್ಲಿ ಸಂತಸ ಮೂಡಿಸಿದೆ.

ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಮನಗೊಳಿ ಪ್ರೇಮಾವತಿ ಅವರ ನೇತೃತ್ವದಲ್ಲಿ ಅದಾಲತ್ ನಡೆಯಿತು. ಜಿಲ್ಲೆಯ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ 31,564 ಪ್ರಕರಣಗಳ ಪೈಕಿ 6,173 ಪ್ರಕರಣ ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ 3,671 ಪ್ರಕರಣ ರಾಜಿ ಮೂಲಕ ಇತ್ಯರ್ಥಗೊಳಿಸಿ, ₹ 5.79 ಕೋಟಿ ಹಣವನ್ನು ಸಂಬಂಧಿಸಿದವರಿಗೆ ಕೊಡಿಸಲಾಯಿತು.

21 ವ್ಯಾಜ್ಯ ಪೂರ್ವ ಪ್ರಕರಣ ಕೈಗೆತ್ತಿಕೊಳ್ಳಲಾಗಿದ್ದು, ಅದರಲ್ಲಿ 1 ಪ್ರಕರಣಗಳೊಂದಿಗೆ ₹ 5.3 ಲಕ್ಷ ಹಣವನ್ನು ಇತ್ಯರ್ಥಗೊಳಿಸಲಾಯಿತು. ಅದಾಲತ್‌ನಲ್ಲಿ ಚೆಕ್‌ ಬೌನ್ಸ್‌, ಬ್ಯಾಂಕ್ ವಸೂಲಾತಿ, ಕಾರ್ಮಿಕರ ವಿವಾದ, ವಿದ್ಯುತ್ ಮತ್ತು ನೀರಿನ ಶುಲ್ಕ ಪ್ರಕರಣ ಸೇರಿ ಇತರೆ ವ್ಯಾಜ್ಯ ಪೂರ್ವ ಪ್ರಕರಣಗಳು ಅದಾಲತ್‌ಗೆ ಆಯ್ಕೆಯಾಗಿದ್ದವು.

ಮೋಟಾರು ವಾಹನ ಅಪಘಾತ ಪರಿಹಾರ, ಭೂಸ್ವಾಧೀನ ಪ್ರಕರಣ, ಕಂದಾಯ ಪ್ರಕರಣ, ಕೌಟುಂಬಿಕ ಕಲಹ, ಬಾಡಿಗೆ ಅನುಭೋಗದ ಹಕ್ಕು ಸೇರಿ ಹಲವು ಪ್ರಕರಣ ರಾಜಿ ಮೂಲಕ ಇತ್ಯರ್ಥಪಡಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಅನೇಕ ಪ್ರಕರಣ ಇತ್ಯರ್ಥಗೊಂಡವು.

ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿದಾರರ ಸಂಪರ್ಕದೊಂದಿಗೆ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿದರು. ನ್ಯಾಯಾಧೀಶರಾದ ಆರ್.ಬನ್ನಿಕಟ್ಟಿ ಹನುಮಂತಪ್ಪ, ಟಿ.ಶಿವಣ್ಣ, ಬಿ.ಕೆ.ಗಿರೀಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.