ಗುರುವಾರ , ನವೆಂಬರ್ 14, 2019
18 °C
ಹರ್ಷೋದ್ಗಾರದಿಂದ ಆರಂಭಗೊಂಡು ನೆರೆದಿದ್ದ ಕೆಲವರ ಕಣ್ಣಾಲಿ ಒದ್ದೆಯಾಗಿಸಿದ ನೃತ್ಯರೂಪಕ

ಶಾಲಾ ಮಕ್ಕಳಿಂದ ಉಕ್ಕಿದ ನಾಡಭಕ್ತಿ

Published:
Updated:
Prajavani

ಚಿತ್ರದುರ್ಗ: ಕನ್ನಡನಾಡಿನ ಕುರಿತ ಚಿತ್ರಗೀತೆಗಳಿಗೆ ನೃತ್ಯ ಆರಂಭವಾದಾಗ ಪ್ರೇಕ್ಷಕರು ಹೆಜ್ಜೆ ಹೆಜ್ಜೆಗೂ ಚಪ್ಪಾಳೆ ತಟ್ಟಿದರು. ಅಲ್ಲಿ ಸೇರಿದ್ದ ಸಭಿಕರಿಂದ ಹರ್ಷೋದ್ಗಾರ ಮೊಳಗಿದವು. ನೃತ್ಯದ ಕೊನೆಯಲ್ಲಿ ಉತ್ತರ ಕರ್ನಾಟಕದಲ್ಲಿ ನೆರೆ ಉಂಟಾಗಿ ಜನ ಕಣ್ಣೀರಲ್ಲಿ ಕೈತೊಳೆದ ಪರಿಸ್ಥಿತಿಯ ಚಿತ್ರಣವನ್ನು ಪ್ರದರ್ಶಿಸಿದ ಎರಡ್ಮೂರು ಸನ್ನಿವೇಶ ನೆರೆದಿದ್ದ ಕೆಲವರ ಕಣ್ಣಾಲಿಗಳನ್ನು ಒದ್ದೆಯಾಗಿಸಿತು.

ಪೊಲೀಸ್ ಕವಾಯತು ಮೈದಾನದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆ ಕೋಟೆ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ನೂರಾರು ವಿದ್ಯಾರ್ಥಿಗಳು ಜಂಟಿಯಾಗಿ ನೃತ್ಯದ ಮೂಲಕ ಪ್ರೇಕ್ಷಕರ ಮೈಮನಗಳಲ್ಲಿ ನಾಡಿನ ನೆಲ, ಜಲ, ಭಾಷೆಯ ಕುರಿತು ಗೌರವ ಭಾವನೆ ಮೂಡುವಂತೆ ಸಂಚಲನ ಮೂಡಿಸಿದರು.

ಕನ್ನಡದ ನನ್ನ ಮಣ್ಣಿದು... ನನ್ನ ಮಣ್ಣಿದು ಕನ್ನಡ ಮಣ್ಣು ನನ್ನುಸಿರಲ್ಲಿ ಕಂಪಿಸೊ ಮಣ್ಣು, ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ ಹಾಡುಗಳಿಗೆ ನೂರಾರು ಮಕ್ಕಳು ಹೆಜ್ಜೆ ಹಾಕಿದಾಗ ಪ್ರೇಕ್ಷಕರು ಕೇಕೆ, ಶಿಳ್ಳೆ ಹಾಕಿದರು.

ಹಾಡಿನ ಕೊನೆಯಲ್ಲಿ ಎರಡು ತಿಂಗಳ ಹಿಂದೆ ಭೀಕರ ಪ್ರವಾಹಕ್ಕೆ ಸಿಲುಕಿ ನಲುಗಿದ ಉತ್ತರ ಕರ್ನಾಟಕ ಜನತೆಯ ಪರಿಸ್ಥಿತಿ ಹಾಗೂ ಸೈನಿಕರು, ಅಗ್ನಿಶಾಮಕ ಸಿಬ್ಬಂದಿ ನೆರೆ ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿ ತೊಡಗಿ ಕಾಪಾಡುವಂಥ ಸನ್ನಿವೇಶಗಳನ್ನು ಮನಕಲಕುವಂತೆ ಪ್ರದರ್ಶಿಸಿದರು.

ಪ್ರತಿ ಬಾರಿಯೂ ಕವಾಯಿತು ಮೂಲಕವೇ ಒಂದಿಲ್ಲೊಂದು ಸಾಹಸ ಪ್ರದರ್ಶಿಸುವ ಸರ್ಕಾರಿ ಕೋಟೆ ಪ್ರೌಢಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಬಾರಿಯೂ ಶಕ್ತಿ, ಯುಕ್ತಿಗಳ ಕೌಶಲದಿಂದ ಕನ್ನಡಿಗರ ಹಿರಿಮೆ-ಗರಿಮೆ ಕುರಿತು ತಮ್ಮ ಸಾಮರ್ಥ್ಯ ಪ್ರದರ್ಶಿಸಿ ರೋಮಾಂಚನ ಮೂಡಿಸಿದರು. ಒಟ್ಟು 15 ನಿಮಿಷಕ್ಕೂ ಹೆಚ್ಚು ಕಾಲ ಪ್ರಸ್ತುತ ಪಡಿಸಿದ ರೂಪಕಕ್ಕೆ ಮೈದಾನದಲ್ಲಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಶ್ಲಾಘಿಸಿದರು.

ಡೋಲು, ಯಕ್ಷಗಾನ, ಬಯಲಾಟಗಳ ಮೂಲಕ ಕನ್ನಡನಾಡಿನ ಕಲೆ, ಸಂಸ್ಕೃತಿಯನ್ನು ಮೇಳೈಸುವುದರೊಂದಿಗೆ ಮೈದಾನಕ್ಕೆ ಇಳಿದ ಗಾರ್ಡಿಯನ್ ಏಂಜಲ್ ಶಾಲಾ ಮಕ್ಕಳ ಕೈಯಲ್ಲೂ ಕನ್ನಡ ಭಾವುಟಗಳು ರಾರಾಜಿಸಿದವು. ರಾಷ್ಟ್ರಕವಿ ಕುವೆಂಪು ರಚಿತ ಬಾರಿಸು ಕನ್ನಡ ಡಿಂಡಿಮವಾ ಹಾಡಿಗೆ ನೃತ್ಯ ಪ್ರದರ್ಶಿಸುವ ಮೂಲಕ ಸಭಿಕರ ಗಮನ ಸೆಳೆದು ಚಪ್ಪಾಳೆ ಗಿಟ್ಟಿಸಿಕೊಂಡರು.

ತೊರೆಗಳಂತೆ ಹರಿದು ಬಂದ ಬೃಹನ್ಮಠ ಪ್ರೌಢಶಾಲಾ ಮಕ್ಕಳು, ಕೃಷ್ಣ ರುಕ್ಮಿಣಿ ಚಿತ್ರದ ಕರ್ನಾಟಕದ ಇತಿಹಾಸದಲ್ಲಿ ಹಾಡಿಗೆ ಹೆಜ್ಜೆ ಹಾಕಿದರು. ಐತಿಹಾಸಿಕ ಹಂಪೆ, ವಿಜಯನಗರ ಸಾಮ್ರಾಜ್ಯ, ಕೃಷ್ಣದೇವರಾಯನ ಗತವೈಭವವನ್ನು ನೆನಪಿಸುವ ಮೂಲಕ ನಾಡಭಕ್ತಿ ಉಕ್ಕಿಸಿದರು. ನೆರೆದಿದ್ದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ತಬ್ಧ ಚಿತ್ರ; ಕೆಎಸ್‌ಆರ್‌ಟಿಸಿ ಪ್ರಥಮ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರೂಪಿಸಿದ್ದ ಭದ್ರಾ ಮೇಲ್ದಂಡೆ ಯೋಜನೆ ಕುರಿತ ಸ್ತಬ್ಧ ಚಿತ್ರ ವಿಶೇಷವಾಗಿದ್ದು, ಪ್ರಥಮ ಬಹುಮಾನ ಮುಡಿಗೇರಿಸಿಕೊಂಡಿತು. ಶಿಕ್ಷಣ ಇಲಾಖೆ ನಿರ್ಮಿಸಿದ ಜಲಾಮೃತ, ಜಲ ಸಂರಕ್ಷಣೆ ಮತ್ತು ನಿರ್ವಹಣೆ ಕುರಿತ ಸ್ತಬ್ಧಚಿತ್ರ ದ್ವಿತೀಯ, ಅರಣ್ಯ ಇಲಾಖೆಯ ಜೋಗಿಮಟ್ಟಿ ವನ್ಯಧಾಮ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಮಿಸಿದ ಬಾಲ್ಯ ವಿವಾಹ ನಿಷೇಧ, ಪ್ರಧಾನಮಂತ್ರಿಗಳ ಮಾತೃವಂದನೆ ಯೋಜನೆ ಕುರಿತ ಸ್ತಬ್ಧ ಚಿತ್ರಗಳು ತೃತೀಯ ಬಹುಮಾನವನ್ನು ಸಮನಾಗಿ ಹಂಚಿಕೊಂಡವು. ಉಳಿದಂತೆ ನಗರಸಭೆ, ಆರೋಗ್ಯ, ಅಬಕಾರಿ, ಕೃಷಿ, ರೇಷ್ಮೆ, ವಯಸ್ಕರ ಶಿಕ್ಷಣ, ತೋಟಗಾರಿಕೆ ಹಾಗೂ ಕೈಗಾರಿಕೆ ಇಲಾಖೆಗಳು ನಿರ್ಮಿಸಿದ ಸ್ತಬ್ಧಚಿತ್ರಗಳು ಆಕರ್ಷಕವಾಗಿದ್ದವು.

ಸಾಧಕರಿಗೆ ಸನ್ಮಾನ: ಮೊಳಕಾಲ್ಮುರಿನ ರೇಷ್ಮೆ ಸೀರೆ ನೇಕಾರ ಎಸ್.ಎಲ್. ಮಲ್ಲಿಕಾರ್ಜುನ, ಹೊಳಲ್ಕೆರೆಯ ಡಾ.ಎನ್.ಬಿ. ಸಜ್ಜನ್, ಚಳ್ಳಕೆರೆ ತಾಲ್ಲೂಕು ದೇವರಹಳ್ಳಿಯ ದೊಡ್ಡಯಲ್ಲಪ್ಪ, ಹಿರಿಯೂರಿನ ಮಲ್ಲಪ್ಪನಹಳ್ಳಿ ಮಹಾಲಿಂಗಯ್ಯ, ಮೊಳಕಾಲ್ಮುರು ತಾಲ್ಲೂಕು ಬಿ.ಜಿ. ಕೆರೆಯ ವೀರಭದ್ರಪ್ಪ, ಚಿತ್ರದುರ್ಗದ ಕುಸ್ತಿಪಟು ಸದ್ದಾಂ ಹುಸೇನ್, ತಾಲ್ಲೂಕಿನ ಕುಂಚಿಗನಾಳ್‌ನ ಕರಿಯಮ್ಮ, ಹೊಸದುರ್ಗ ತಾಲ್ಲೂಕು ಕಲ್ಕೆರೆಯ ಎ.ಕೆ. ಹನುಮಂತಪ್ಪ, ಚಳ್ಳಕೆರೆ ತಾಲ್ಲೂಕು ಗೊರ್ಲತ್ತಿನ ಗಂಗಮ್ಮ ಅವರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ವಿಧಾನಪರಿಷತ್ ಸದಸ್ಯೆ ಜಯಮ್ಮ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿ. ಸತ್ಯಭಾಮ, ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ಅರುಣ್, ಉಪವಿಭಾಗಾದಿಕಾರಿ ವಿ. ಪ್ರಸನ್ನ, ತಹಶೀಲ್ದಾರ್ ವೆಂಕಟೇಶಯ್ಯ ಅವರೂ ಇದ್ದರು.

ಪ್ರತಿಕ್ರಿಯಿಸಿ (+)