ಶನಿವಾರ, ಜನವರಿ 18, 2020
21 °C
ಕಾರ್ಯಗಾರದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ನಾರಾಯಣಸ್ವಾಮಿ

ಸರಕು ವಿವರ; ಮಾಸಿಕ 10ರೊಳಗೆ ನಮೂದಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಸರಕು ಪೂರೈಕೆದಾರರು ಸರಕು ಮತ್ತು ಸೇವೆ ಪೂರೈಕೆ ಅಂಶಗಳನ್ನು ಅನುಬಂಧ - 1ರ ಮೂಲಕ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪ್ರತಿ ತಿಂಗಳ 10ನೇ ತಾರೀಖಿನೊಳಗೆ ದಾಖಲಿಸಬೇಕು’ ಎಂದು ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ನಾರಾಯಣಸ್ವಾಮಿ ಹೇಳಿದರು.

ವಾಸವಿ ಮಹಲ್‌ನಲ್ಲಿ ಶುಕ್ರವಾರ ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಚೇರಿಯಿಂದ ಆಯೋಜಿಸಿದ್ದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆಯಡಿ ಏಪ್ರಿಲ್ 2020ರಿಂದ ಜಾರಿಗೆ ಬರಲಿರುವ ನೂತನ ಮಾಸಿಕ ನಮೂನೆಗಳ ಕುರಿತ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

‘ಪ್ರತಿ ತಿಂಗಳ 10ನೇ ತಾರೀಖಿನ ಹೊರತಾಗಿ ಸರಕುಗಳ ದಾಖಲೆ ತಿರಸ್ಕರಿಸಬಹುದು, ಪುರಸ್ಕರಿಸಬಹುದು ಅಥವಾ ಹಾಗೆಯೇ ತಮ್ಮ ಬಳಿ ಕಾಯ್ದಿರಿಸಿಕೊಳ್ಳಬಹುದು. ಆದ್ದರಿಂದ ಖರೀದಿದಾರರು ಅನುಬಂಧ - 2ರಲ್ಲಿ ದಾಖಲಿಸಬೇಕು. ನಿಗದಿತ ಸಮಯದಲ್ಲಿ ಅನುಬಂಧ - 1 ಮತ್ತು 2ರಲ್ಲಿ ದಾಖಲು ಮಾಡದಿದ್ದರೆ, ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಜಿಎಸ್‌ಟಿ ಕಾಯ್ದೆ 2017ರ ಮಾಸಿಕ ನಮೂನೆಗಳು 2019ರ ಮಾರ್ಚ್‌ನಲ್ಲಿ ಅಂತ್ಯಗೊಂಡು, ನೂತನ ಮಾಸಿಕ ನಮೂನೆಗಳು 2020ರ ಏಪ್ರಿಲ್‌ನಲ್ಲಿ ಹಲವಾರು ಬದಲಾವಣೆಗಳೊಂದಿಗೆ ಜಾರಿಯಾಗಲಿದ್ದು, ಸರಳ ಹಾಗೂ ಅನುಕೂಲಕರವಾಗಿದೆ’ ಎಂದರು.

ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಆರ್. ನಾಗರಾಜ್, ‘ಜಿಎಸ್‌ಟಿಯ ಇನ್‌ಪುಟ್ ತೆರಿಗೆಯಲ್ಲಿ ಕೋಟಿಗಟ್ಟಲೇ ಹಣ ದುರುಪಯೋಗ ಆಗುವುದನ್ನು ಮನಗಂಡು ಜಿಎಸ್‌ಟಿ ಕಾಯ್ದೆಯ ನೂತನ ಮಾಸಿಕ ನಮೂನೆಗಳಲ್ಲಿ ವರ್ತಕರಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಲಾಗಿದೆ’ ಎಂದು ಹೇಳಿದರು.

‘ಸಮಯಕ್ಕೆ ಅನುಗುಣವಾಗಿ ಪರಿಷ್ಕೃತ ಸರಕು ಮತ್ತು ಸೇವೆಗಳ ಲಭ್ಯತೆ, ಪೂರೈಕೆದಾರರಿಂದ ಹಣ ಹಿಂತಿರುಗಿಸುವ ಸೌಲಭ್ಯ, ಆಫ್‌ಲೈನ್‌ನಲ್ಲಿ ಪರಿಷ್ಕೃತ ಸರಕು-ಸೇವೆಗಳನ್ನು ಹಾಕುವ ಎಲ್ಲ ಅಂಶಗಳನ್ನು ಕಂಪ್ಯೂಟರ್‌ನಲ್ಲಿ ಅಳವಡಿಸುವ ಸೌಲಭ್ಯ ಕಲ್ಪಿಸುವುದರ ಮೂಲಕ ವರ್ತಕರಲ್ಲಿದ್ದ ಗೊಂದಲ ದೂರಮಾಡಲಾಗಿದೆ. ಈ ಸೌಲಭ್ಯಗಳು ನಿರಂತರವಾಗಿ ಡೇಟಾ ನಮೂದು ಮಾಡುವವರಿಗೆ ಮಾತ್ರ ಅನ್ವಯಿಸುತ್ತದೆ’ ಎಂದರು.

‘ಜಿಎಸ್‌ಟಿ ಮಂಡಳಿ ಶುರುವಾದ ಸಂದರ್ಭದಲ್ಲಿ ಬಹಳ ತೊಂದರೆ ಎದುರಿಸುವಂತಾಗಿತ್ತು. ಪ್ರಸ್ತುತ ದಿನಗಳಲ್ಲಿ ಅದರಲ್ಲಿನ ಅನೇಕ ಅಂಶಗಳನ್ನು ತಿದ್ದುಪಡಿ ಮಾಡುವುದರ ಮೂಲಕ ದೊಡ್ಡ ಸವಾಲಿನಿಂದ ಹೊರಬಂದು, ಜನಸ್ನೇಹಿಯಾಗಿದೆ’ ಎಂದು ತಿಳಿಸಿದರು.

‘ಜಿಎಸ್‌ಟಿಯ ರಿಟರ್ನ್ಸ್ 1 (ಆರ್1) ನಲ್ಲಿ ವ್ಯಾಪಾರಸ್ಥರು ತಮ್ಮ ಸರಕುಗಳನ್ನು ನಮೂದು ಮಾಡಬೇಕು. 3ಬಿ ಯಲ್ಲಿ ಹಣ ಪಡೆಯಲು ನಮೂದಿಸಬೇಕು. ಪ್ರಸ್ತುತ ದಿನಗಳಲ್ಲಿ ಜಿಲ್ಲೆಯಲ್ಲಿ ಪ್ರತಿ ತಿಂಗಳಿಗೆ ಆರ್1 ಶೇ 40, 3ಬಿ ಶೇ 80 ರಷ್ಟಿದ್ದು, ಆರ್೧ ಕಾರ್ಯವೈಖರಿ ಕ್ಷೀಣಿಸುತ್ತಿದೆ, 3ಬಿ ಹೆಚ್ಚಾಗುತ್ತಿದೆ. ವರ್ತಕರು ಹೆಚ್ಚಾಗಿ ಆರ್1 ಕಡೆ ಗಮನಹರಿಸುವುದರಿಂದ ಮುಂದಾಗುವ ಅನಾನುಕೂಲ ತಪ್ಪಿಸಬಹುದು. ಇಲ್ಲವಾದಲ್ಲಿ ಕಾನೂನು ರೀತಿಯ ಕ್ರಮ ಅನಿವಾರ್ಯ’ ಎಂದು ಎಚ್ಚರಿಸಿದರು.

ವಾಣಿಜ್ಯ ತೆರಿಗೆ ಅಧಿಕಾರಿಗಳಾದ ಎಚ್. ಜಯಶೀಲಾ, ಎ. ಆನಂದಗೌಡ, ಮಾನಸ, ದ್ವಿತೀಯ ದರ್ಜೆ ಸಹಾಯಕ ಆರ್. ರಾಘವೇಂದ್ರ ಅವರೂ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು