ಗುರುವಾರ , ನವೆಂಬರ್ 21, 2019
23 °C
ಗ್ರಾಮಾಭಿವೃದ್ಧಿ ಆಸ್ತಿ ನೋಂದಣಿ ಕುರಿತ ಸಭೆ

ಸರ್ಕಾರಿ ಯೋಜನೆ; ಪ್ರತಿ ಗ್ರಾಮಕ್ಕೂ ತಲುಪಿಸಿ: ಜಿಲ್ಲಾಧಿಕಾರಿ ವಿನೋತ್ ಪ್ರಿಯಾ

Published:
Updated:
Prajavani

ಚಿತ್ರದುರ್ಗ: ‘ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಈ ಹಿನ್ನಲೆಯಲ್ಲಿ ಜಿಲ್ಲೆಯ ಪ್ರತಿ ಹಳ್ಳಿಗಳು ಸರ್ಕಾರದ ಸೌಲಭ್ಯ ಪಡೆದು ಅಭಿವೃದ್ಧಿಯಾದರೆ, ಗ್ರಾಮಾಭಿವೃದ್ಧಿಯಲ್ಲಿ ಚಿತ್ರದುರ್ಗ ಮಾದರಿಯಾಗಲಿದೆ’ ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಹೇಳಿದರು.

ಗ್ರಾಮಾಭಿವೃದ್ಧಿ ಆಸ್ತಿ ನೋಂದಣಿ ರೂಪುರೇಷೆ ಅಂಗವಾಗಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಹಳ್ಳಿಗಳಲ್ಲಿರುವ ಮಾನವ ಸಂಪನ್ಮೂಲ ಹಾಗೂ ಅದರ ಸ್ಥಿತಿಗತಿಗಳ ಕುರಿತು ಒಂದು ನೀಲನಕ್ಷೆ ರಚಿಸಬೇಕು. ಆಗ ಮಾತ್ರ ಈಗಾಗಲೇ ಹಳ್ಳಿ ಪಡೆದಿರುವ ಸೌಲಭ್ಯ ಮತ್ತು ಪಡೆಯದೇ ಇರುವ ಸೌಲಭ್ಯಗಳ ಕುರಿತ ಒಂದು ಸಂಪೂರ್ಣ ಮಾಹಿತಿ ದೊರೆಯುತ್ತದೆ’ ಎಂದು ಅಧಿಕಾರಿಗಳಿಗೆ ಹೇಳಿದರು.

‘ಸರ್ಕಾರದ ಯೋಜನೆಗಳು ಪ್ರತಿಯೊಂದು ಗ್ರಾಮಕ್ಕೂ ತಲುಪಬೇಕು. ಎಲ್ಲಾ ಜನರು ಇದರ ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿಯತ್ತ ಸಾಗಬೇಕು ಎಂಬ ಉದ್ದೇಶದಿಂದ ಗ್ರಾಮಾಭಿವೃದ್ದಿ ಆಸ್ತಿ ರಿಜಿಸ್ಟಾರ್‌ನಲ್ಲಿ ಎಲ್ಲಾ ವಿವರ ದಾಖಲಿಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

‘ಆಡಳಿತದಲ್ಲಿ ಪಾರದರ್ಶಕಕತೆಯನ್ನು ಜಾರಿಗೆ ತರುವ ಉದ್ದೇಶದಿಂದ ಜಿಲ್ಲೆಯಲ್ಲಿರುವ ಎಲ್ಲಾ ಹಳ್ಳಿಗಳ ಹೆಸರು, ಜನಸಂಖ್ಯೆ, ಅಂಗವಿಕಲರು, ಲಿಂಗತ್ವ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ದತ್ತಾಂಶ, ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿರುವ ಇಲಾಖಾವಾರು ಯೋಜನೆಗಳು ಮತ್ತು ಫಲಾನುಭವಿಗಳು, ಭೌತಿಕ ಲಕ್ಷಣಗಳು (ಕಾಮಗಾರಿ ನಡೆಯುವ, ನಡೆಯುತ್ತಿರುವುದರ ಬಗ್ಗೆ) ಒಂದು ಗ್ರಾಮದ ಸಂಪೂರ್ಣ ಚಿತ್ರಣವನ್ನು ಬಿಂಬಿಸುವಂತಹ ಎಲ್ಲಾ ಮಾಹಿತಿಗಳನ್ನೊಳಗೊಂಡ ಗ್ರಾಮಾಭಿವೃದ್ಧಿ ಆಸ್ತಿ ನೋಂದಣಿಗೆ ಸಂಬಂಧಪಟ್ಟ ತಂತ್ರಾಂಶ (ಸಾಫ್ಟ್‌ವೇರ್) ಅನ್ನು ಸಿದ್ಧಪಡಿಸಿ’ ಎಂದು ಎನ್ಐಸಿ ಅಧಿಕಾರಿಗಳಿಗೆ ಸೂಚಿಸಿದರು.

‘ಸರ್ಕಾರ ವಿವಿಧ ಇಲಾಖೆಯಲ್ಲಿ ಜಾರಿಗೆ ತಂದಿರುವ ಎಲ್ಲಾ ಯೋಜನೆಗಳ ಮಾಹಿತಿಯನ್ನು ಸಿಪಿಓ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಬೇಕು. ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು. ಸೌಲಭ್ಯ ಪಡೆದ ಫಲಾನುಭವಿಗಳ ಹೆಸರು ಮತ್ತು ಪಡೆದ ಯೋಜನೆಗಳ ವಿವರವನ್ನು ದಾಖಲಿಸಬೇಕು. ಇದರಿಂದ ಯೋಜನೆಯಡಿ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬಹುದು. ಯೋಜನೆಗಳು ಸಾರ್ವಜನಿಕರಿಗೆ ತಲುಪಿಸುವಲ್ಲಿ ಪಿಡಿಒಗಳ ಪಾತ್ರ ಬಹುಮುಖ್ಯವಾದುದು’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿ. ಸತ್ಯಭಾಮ, ‘ಈಗಾಗಲೇ ಯಾವ ಫಲಾನುಭವಿಗಳು ಸೌಲಭ್ಯ ಪಡೆದಿದ್ದಾರೆ ಎಂಬ ವಿವರ ದಾಖಲಿಸುವುದರಿಂದ ಇತರೆ ಫಲಾನುಭವಿಗಳ ಆಯ್ಕೆ ಸುಲಭವಾಗಲಿದೆ. ಈ ಹಿನ್ನೆಲೆಯಲ್ಲಿ ಒಂದು ಸಮಗ್ರವಾದ ಅಂಕಿ-ಅಂಶ ಪಡೆಯುವುದರಿಂದ ಮೂಲಸೌಕರ್ಯ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಹಕಾರಿಯಾಗಲಿದೆ’ ಎಂದರು.

ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ರಾಜಶೇಖರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್, ಜೆಎಂಐಟಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಸಿ. ಶಾಂತಪ್ಪ, ನಗರಸಭೆ ಪೌರಾಯುಕ್ತ ಜೆ.ಟಿ. ಹನುಮಂತರಾಜ್, ಬೆಳಗೆರೆ ಗ್ರಾಮ ಪಂಚಾಯಿತಿ ಪಿಡಿಒ ಬೆಳಗೆರೆ ಗುಂಡಪ್ಪ ಇದ್ದರು.

ಪ್ರತಿಕ್ರಿಯಿಸಿ (+)