ಸೋಮವಾರ, ಆಗಸ್ಟ್ 26, 2019
28 °C

ಸಾಮರಸ್ಯ ನಡಿಗೆಗೆ ವಿದ್ಯಾರ್ಥಿಗಳ ಸಾಥ್

Published:
Updated:
Prajavani

ಚಿತ್ರದುರ್ಗ: ಹೊಳಲ್ಕೆರೆ ರಸ್ತೆಯ ಸಂಪಿಗೆ ಸಿದ್ಧೇಶ್ವರ ಪ್ರೌಢಶಾಲೆ ಆವರಣದಲ್ಲಿ ಗುರುವಾರ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಧ್ವಜಾರೋಹಣ ನಡೆಯಿತು. ನಂತರ ಅಲ್ಲಿಂದ ‘ಸಾಮರಸ್ಯ ನಡಿಗೆ’ಗೆ ಚಾಲನೆ ದೊರೆಯಿತು.

ಹೊಸದುರ್ಗ ತರಳಬಾಳು ಶಾಖಾಮಠದ ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಅನುಭವ ಮಂಟಪದ ಮಾದರಿಯಲ್ಲಿ ನಿರ್ಮಿಸಲಾಗಿದ್ದ ರಥವನ್ನೊಮ್ಮೆ ನೋಡಿದರೆ ಬಸವಣ್ಣ ಅವರೇ ನೇತೃತ್ವ ವಹಿಸಿದ್ದರು ಎಂಬಂತೆ ಭಾಸವಾಗುತ್ತಿತ್ತು. ಮಂಟಪದಲ್ಲಿ ಅಲ್ಲಮ್ಮಪ್ರಭು, ಅಕ್ಕಮಹಾದೇವಿ, ನುಲಿಯ ಚಂದಯ್ಯ, ಅಂಬಿಗರ ಚೌಡಯ್ಯ, ಸಿದ್ಧರಾಮ ಹೀಗೆ ಮಹಾ ಶರಣರ ಕಾಯಕ ತತ್ವವೂ ಅದರಲ್ಲಿ ಗೋಚರಿಸುತ್ತಿತ್ತು.

ನಮ್ಮೆಲ್ಲರ ನಡಿಗೆ ಕಲ್ಯಾಣದೆಡೆಗೆ ಹೆಸರಿನೊಂದಿಗೆ ಹೊರಟ ರಥದಲ್ಲಿ 12ನೇ ಶತಮಾನದ ವಚನ ಚಳವಳಿಯ ಚಿಂತನೆಗಳನ್ನು ಎಲ್ಲೆಡೆ ಪಸರಿಸಿ, ಅದನ್ನು ಮುನ್ನಲೆಗೆ ತರುವುದೇ ‘ಮತ್ತೆ ಕಲ್ಯಾಣ’ದ ಆಶಯ ಎಂಬ ಬರಹ ಕಣ್ಣಿಗೆ ರಾಚುತ್ತಿತ್ತು.

ಹೊಳಲ್ಕೆರೆ ರಸ್ತೆಯ ಸಂಗೊಳ್ಳಿರಾಯಣ್ಣ ವೃತ್ತದಿಂದ ಪ್ರಾರಂಭವಾದ ನಡಿಗೆ ಗಾಂಧಿ ವೃತ್ತ, ಎಸ್‌ಬಿಐ ವೃತ್ತ, ಮಹಾವೀರ ವೃತ್ತ, ಜಿಲ್ಲಾಧಿಕಾರಿ ವೃತ್ತ, ಅಂಬೇಡ್ಕರ್ ವೃತ್ತ, ಮದಕರಿನಾಯಕ ವೃತ್ತ ಮಾರ್ಗವಾಗಿ ಸಂಚರಿಸಿ ಸಭಾ ಕಾರ್ಯಕ್ರಮ ನಡೆಯುವ ಸ್ಥಳವಾದ ತರಾಸು ರಂಗಮಂದಿರ ತಲುಪಿತು.

ಶಾರದಾ ಬ್ಯಾಂಡ್‌ಸೆಟ್, ಡೋಲು, ತಮಟೆ ಸೇರಿ ಜನಪದ ಕಲಾತಂಡಗಳು ಮೆರುಗು ನೀಡಿದವು. ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಶಾಲಾ ಧಿರಿಸಿನೊಂದಿಗೆ ಭಾಗವಹಿಸಿ ಸಾಥ್ ನೀಡಿದರು.

ಅಂಬೇಡ್ಕರ್ ವೃತ್ತದ ಬಳಿ ಸ್ವಾಮೀಜಿಗಳು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಪ್ರಭುಸ್ವಾಮಿ, ದ್ಯಾಮಣ್ಣ, ಎನ್‌.ಡಿ. ಕುಮಾರ್, ಅನಿಲ್, ಜಿ.ಎಸ್. ಮಂಜುನಾಥ್, ವೀರೇಶ್, ಸೈಯದ್ ಇಸಾಕ್, ಷಣ್ಮುಖಪ್ಪ ಅವರೂ ಇದ್ದರು. 

Post Comments (+)