ಅಂತರ್ಜಲ ವೃದ್ಧಿಗಾಗಿ ಜಲಶಕ್ತಿ ಯೋಜನೆ: ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ

ಸೋಮವಾರ, ಜೂಲೈ 22, 2019
27 °C
ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಅಭಿಯಾನ

ಅಂತರ್ಜಲ ವೃದ್ಧಿಗಾಗಿ ಜಲಶಕ್ತಿ ಯೋಜನೆ: ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ

Published:
Updated:
Prajavani

ಚಿತ್ರದುರ್ಗ: ‘ಜಿಲ್ಲೆಯಲ್ಲಿ ಸರಿಯಾದ ಸಮಯಕ್ಕೆ ಮಳೆಯಾಗದೆ, ನೀರಾವರಿ ವ್ಯವಸ್ಥೆ ಇಲ್ಲದೆ, ಸತತ ಬರದಿಂದ ನಲುಗಿರುವ ಕಾರಣ ಕೇಂದ್ರ ಸರ್ಕಾರ ಜಲಶಕ್ತಿ ಯೋಜನೆಗೆ ಚಿತ್ರದುರ್ಗವನ್ನು ಆಯ್ಕೆ ಮಾಡಿದೆ’ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ತಿಳಿಸಿದರು.

‘ಸಕಲ ಜೀವರಾಶಿಗಳಿಗೂ ಅತ್ಯಮೂಲ್ಯವಾದ ನೀರನ್ನು ಸಂರಕ್ಷಿಸಿ, ಸದ್ಬಳಕೆ ಮಾಡಿಕೊಳ್ಳುವುದಕ್ಕೆ ಯೋಜನೆಯಡಿ ಒತ್ತು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

‘ಜಲಶಕ್ತಿ ಅಭಿಯಾನವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲೆಯಲ್ಲಿನ ನೀರಿನ ಮೂಲಗಳನ್ನು ಪ್ರತ್ಯೇಕಿಸಿ, ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪ್ರತಿ ಗ್ರಾಮವಾರು ಸಮಿತಿ ರಚಿಸಿ ಅವರಿಗೆ ನೀರಿನ ನಿರ್ವಹಣೆ ಸೇರಿ ಜಲ ಸಂರಕ್ಷಿಸುವ ಕುರಿತು ಎಲ್ಲ ರೀತಿಯ ಜವಾಬ್ದಾರಿ ನೀಡಲಾಗುವುದು’ ಎಂದು ತಿಳಿಸಿದರು.

‘ರಾಜ್ಯ ಸರ್ಕಾರದ ಸಹಯೋಗದಲ್ಲಿ ಮೊದಲ ಹಂತವಾಗಿ ಸೆಪ್ಟೆಂಬರ್ 15ರವರೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಜಲದ ಮೂಲ, ಜಲ ಪುನರ್ ಬಳಕೆ, ಜಲ ಸಂರಕ್ಷಣೆ, ಮಳೆ ನೀರಿನ ಕೊಯ್ಲು, ಕೆರೆ-ಕಟ್ಟೆಗಳ ಪುನಶ್ಚೇತನ, ಕೊಳವೆಬಾವಿಗಳ ಜಲ ಮರುಪೂರಣ, ಇಂಗುಗುಂಡಿಗಳ ತಯಾರಿಕೆ, ಜಲಾನಯನ ಅಭಿವೃದ್ಧಿ, ತ್ಯಾಜ್ಯ ನೀರಿನ ಪುನರ್‌ಬಳಕೆ ಹಾಗೂ ಹಸಿರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದರು.

‘ಜಿಲ್ಲೆಯಲ್ಲಿನ ನೀರಿನ ಸಮಸ್ಯೆ, ಅಂತರ್ಜಲ ಕುಸಿತ, ಕುಡಿಯುವ ನೀರಿನ ಅಭಾವ ನಿವಾರಿಸುವ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಈ ಅಭಿಯಾನ ಆರಂಭಿಸಲಾಗಿದೆ. ಕೇಂದ್ರ ಸರ್ಕಾರವೇ 5 ತಂಡಗಳನ್ನು ರಚಿಸಿ, ರಾಜ್ಯಕ್ಕೆ ಕಳಿಸಿಕೊಟ್ಟಿದೆ’ ಎಂದು ತಿಳಿಸಿದರು.

ವಾರ್ತಾಧಿಕಾರಿ ಧನಂಜಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !