ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: 16 ಸಾವಿರ ಶಾಲೆಗಳು ಆರಂಭ

6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ: ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್
Last Updated 30 ಡಿಸೆಂಬರ್ 2020, 11:49 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋವಿಡ್‌ ಕಾರಣಕ್ಕೆ ರಾಜ್ಯದಲ್ಲಿ ಮುಚ್ಚಿದ್ದ ಶಾಲೆಗಳ ಪೈಕಿ 16 ಸಾವಿರ ಶಾಲೆಗಳು ಜ.1ರಿಂದ ಆರಂಭವಾಗಲಿವೆ. 89 ಸಾವಿರ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್ ತಿಳಿಸಿದರು.

ಇಲ್ಲಿನ ಡಿಡಿಪಿಐ ಕಚೇರಿಯ ಎಸ್‌ಎಸ್‌ಕೆ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರತಿ ಶಿಕ್ಷಕರೂ ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದಾರೆ. ನೆಗೆಟಿವ್ ವರದಿ ಇದ್ದವರು ಮಾತ್ರ ಕರ್ತವ್ಯ ನಿರ್ವಹಿಸಲಿದ್ದಾರೆ’ ಎಂದರು.

‘ಸರ್ಕಾರಿ, ಅನುದಾನಿತ, ಅನುದಾನ ರಹಿತ, ಖಾಸಗಿ ಪ್ರೌಢ ಶಾಲೆಗಳನ್ನು ಮಾತ್ರ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಪ್ರತಿ ತರಗತಿಯನ್ನು ಕೇವಲ 15 ರಿಂದ 20 ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಲಾಗಿದೆ. ಅರ್ಧ ದಿನದ ತರಗತಿಗಳು ಮಾತ್ರ ನಡೆಯಲಿವೆ’ ಎಂದು ಮಾಹಿತಿ ನೀಡಿದರು.

‘ಪರೀಕ್ಷಾ ಮಂಡಳಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿರುವ ಕಾರಣ ತರಗತಿ ಆರಂಭ ಅನಿವಾರ್ಯವಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ, ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಸಭೆ ನಡೆಸಿಯೇ ಈ ತೀರ್ಮಾನಕ್ಕೆ ಬರಲಾಗಿದೆ. ಮಕ್ಕಳ ಕಲಿಕೆಗೂ ಅನುಕೂಲವಾಗಲಿದೆ’ ಎಂದು ಹೇಳಿದರು.

‘ಆರಂಭವಾಗಲಿರುವ ಶಾಲೆಗಳನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಸ್ವಚ್ಛತೆ ಕಾಪಾಡಲಾಗುವುದು. ಪೋಷಕರು ಆತಂಕಪಡುವ ಅಗತ್ಯವಿಲ್ಲ. ಬಿಸಿಯೂಟ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಮನೆಯಿಂದಲೇ ತಯಾರಿಸಿದ ಆಹಾರವನ್ನು ಮಾತ್ರ ವಿದ್ಯಾರ್ಥಿಗಳು ತರಬೇಕು. ಶಾಲೆಗೆ ಬರುವ ಮುನ್ನ ಹಾಗೂ ಇಲ್ಲಿಂದ ಮನೆಗೆ ಮರಳುವಾಗ ಕಡ್ಡಾಯವಾಗಿ ಕೈಗಳನ್ನು ಶುಚಿಗೊಳಿಸಿಕೊಳ್ಳಲು ಸೂಚನೆ ನೀಡಲಾಗಿದೆ’ ಎಂದರು.

‘ಆರನೇ ತರಗತಿಯಿಂದ ಒಂಬತ್ತನೇ ತರಗತಿವರೆಗೂ ವಿದ್ಯಾಗಮ ಆರಂಭಿಸಲಾಗುತ್ತಿದೆ. ನಿತ್ಯ ತರಗತಿ ಇರುವುದಿಲ್ಲ. ದಿನ ಬಿಟ್ಟು ದಿನ ತರಗತಿಗಳು ಮಾತ್ರ ನಡೆಯಲಿವೆ. ಮಕ್ಕಳ ಕಲಿಕೆಗೆ ಹಿನ್ನಡೆ ಉಂಟಾಗಬಾರದು ಎಂಬ ಕಾರಣಕ್ಕಾಗಿ ಶಿಕ್ಷಣ ತಜ್ಞರ ಸಲಹೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

‘ರೋಗಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಹರಡಬಾರದು. ಅದೇ ರೀತಿ ಮಕ್ಕಳಿಂದ ಮಕ್ಕಳಿಗೆ ಕೊರೊನಾ ಸೋಂಕು ಹರಡಬಾರದು. ಶಿಕ್ಷಕರ ಹಾಗೂ ಮಕ್ಕಳ ರಕ್ಷಣೆ ಮುಖ್ಯವಾಗಿದೆ. ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಸೇರಿ ಸೋಂಕಿನ ಲಕ್ಷಣ ಕಂಡುಬಂದರೆ ಶಾಲೆಯಲ್ಲಿ ಐಸೋಲೇಷನ್ ಮಾಡಿ ಪೋಷಕರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ದಾಖಲು ಮಾಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ, ‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಶಾಲೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿದ್ಯಾಗಮದಡಿ ಶಾಲಾ ಆವರಣಕ್ಕೆ ಹಾಜರಾಗಲು 30,123 ವಿದ್ಯಾರ್ಥಿಗಳ ಪೋಷಕರು ಒಪ್ಪಿಗೆ ನೀಡಿದ್ದಾರೆ. ಆನ್‌ಲೈನ್‌ ಸೇರಿ ಇತರೆ ಚಟುವಟಿಕೆಗಳ ಮೂಲಕ 16,881 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ’ ಎಂದರು.

‘2018–19 ಮತ್ತು 2019–20ನೇ ಸಾಲಿನ ಡಿಎಂಎಫ್‌ ಅನುದಾನದಡಿಯಲ್ಲಿ ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕೈಗೊಳ್ಳಲಾಗಿದೆ. ಶಿಥಿಲಗೊಂಡ ಸರ್ಕಾರಿ ಶಾಲಾ ಕೊಠಡಿಗಳ ದುರಸ್ತಿಗಾಗಿ ಮೊದಲ ಹಂತದಲ್ಲಿ ₹ 5.56 ಕೋಟಿ ಬಿಡುಗಡೆಯಾಗಿದ್ದು, ಪ್ರಗತಿ ಕುರಿತು ರಾಜ್ಯ ಕಚೇರಿಗೆ ಮಾಹಿತಿ ಸಲ್ಲಿಸಲಾಗಿದೆ. ನರೇಗಾ ಯೋಜನೆಯಡಿ ₹1.5 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಡಯಟ್‌ ಪ್ರಾಂಶುಪಾಲ ಎಸ್‌.ಕೆ.ಬಿ.ಪ್ರಸಾದ್, ಡಿವೈಪಿಸಿ ನಾಗಭೂಷಣ್ ಇದ್ದರು.

ಜಿಲ್ಲೆಯಲ್ಲಿ 486 ಶಾಲೆ ಆರಂಭ

ಜಿಲ್ಲೆಯಲ್ಲಿ 2,512 ಶಾಲೆಗಳಿವೆ. ಅದರಲ್ಲಿ ಚಿತ್ರದುರ್ಗ ತಾಲ್ಲೂಕಿನ 133, ಚಳ್ಳಕೆರೆಯ 100, ಹಿರಿಯೂರಿನ 82, ಹೊಸದುರ್ಗದ 74, ಹೊಳಲ್ಕೆರೆಯ 64, ಮೊಳಕಾಲ್ಮುರು ತಾಲ್ಲೂಕಿನ 33 ಸೇರಿ ಒಟ್ಟು 486 ಪ್ರೌಢಶಾಲೆಗಳನ್ನು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಮಾತ್ರ ತೆರೆಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT