ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ತೆಪ್ಪೋತ್ಸವಕ್ಕೆ ಬಂದವರು ಅಪಘಾತಕ್ಕೆ ಬಲಿ

Last Updated 3 ಡಿಸೆಂಬರ್ 2022, 6:46 IST
ಅಕ್ಷರ ಗಾತ್ರ

ಚಳ್ಳಕೆರೆ: ಗುರುವಾರ ನಾಯಕನಹಟ್ಟಿಯ ಹಿರೇಕೆರೆಯಲ್ಲಿ ತೇಲಿ ಬಿಡುವ ತಿಪ್ಪೇರುದ್ರಸ್ವಾಮಿ ತೆಪ್ಪೋತ್ಸವವನ್ನು ಕಣ್ತುಂಬಿಕೊಳ್ಳಲು ಹೊರಟ ಬೋರಪ್ಪನಹಟ್ಟಿಯ ಸಹೋದರರಿಬ್ಬರ ಬದುಕು ಅಪಘಾತದಲ್ಲಿ ಅಂತ್ಯಗೊಂಡಿದೆ.

ಜೋಡೆತ್ತು ಗಾಡಿ, ಟ್ರ್ಯಾಕ್ಟರ್, ಆಟೊ, ಟೆಂಪೊ, ಮುಂತಾದ ವಾಹನಗಳಲ್ಲಿ ಸುತ್ತ ಮುತ್ತಲಿನ ಗ್ರಾಮದ ಜನರು ತೆಪ್ಪೋತ್ಸವವನ್ನು ನೋಡಲು ಸಂಭ್ರಮದಿಂದ ಹೋಗುತ್ತಿರುವುದನ್ನು ಕಂಡು ತಾವೂ ನೋಡಲು ಹೊರಟ ಸಹೋದರರಿಬ್ಬರ ಪ್ರಾಣ ಒಮ್ಮೆಲೆ ಮಾರ್ಗ ಮಧ್ಯದಲ್ಲಿಯೇ ಅಂತ್ಯಗೊಂಡಿದೆ.

ಅಪಘಾತದಲ್ಲಿ ಮೃತಪಟ್ಟ ತಾಲ್ಲೂಕಿನ ಬುಡ್ನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರಪ್ಪನಹಟ್ಟಿ ಗ್ರಾಮದ ಪ್ರಕಾಶ್ (20), ಅಶೋಕ್ (19) ಅವರ ಅಂತ್ಯಕ್ರಿಯೆ ಶುಕ್ರವಾರ ಬೋರಪ್ಪನಹಟ್ಟಿ ಸ್ವಗ್ರಾಮದ ತೋಟದ ಮನೆಯಲ್ಲಿ ನೆರವೇರಿತು.

‘ಹೆತ್ತ ಹೊಟ್ಟೆ, ಒಬ್ರಲ್ಲ ಇಬ್ರು ಗಂಡು ಮಕ್ಳು. ಇಬ್ಬರೂ ಹಿಂದೆ ಮುಂದೆ ಬೆಳೆದಿದ್ರು. ಅವರು ಚೆನ್ನಾಗಿ ಓದಿ ಸರ್ಕಾರಿ ನೌಕ್ರಿ ಸೇರ್ಲಿ, ನಮ್ ಕಷ್ಟ ಅವ್ರು ಪಡದು ಬೇಡ. ಕೂಲಿ-ನಾಲಿ ಮಾಡಿ ನಾವ್ ಬದುಕುತ್ತಿದ್ವಿ. ಇನ್ನೇನ್ ಮಕ್ಳು ಕೈಗ್‌ ಬಂದ್ರು, ಹೆಂಗೊ ನಮ್ ಭಾರ ಕಮ್ಮಿ ಆತು ಅನ್ನೊ ಅಷ್ಟೋತ್ತಿಗೆ ಎಲ್ಡು ಮಕ್ಳು ನಮ್ ಕಣ್ಮುಂದೆ ಹೆಣವಾಗಿ ಬಿದ್ವಲ್ಲಪ್ಪ. ಆಳ್ಮಾನೆ ದೇವ್ರು ನನ್ನ ಮಕ್ಳು ಕಾಯ್ಲಿಲ್ಲಪ್ಪ. ಮಕ್ಕಳನ್ನು ಕೊಟ್ಟು ಕಿತ್ಗಂಡ. ಇನ್ನೆಂಗೆ ಬದುಕಲಪ್ಪಾ ಅಯ್ಯೋ ದೇವ್ರೆ...’ ಎಂದು ತಾಯಿ ಬೋರಮ್ಮ ಎದೆ ಬಡಿದುಕೊಂಡು ಗೋಳಾಡುತ್ತಿದ್ದ ದೃಶ್ಯ ಕಂಡು ಎಂಥವರಿಗೂ ಕಣ್ಣಲ್ಲಿ ನೀರು ಉಕ್ಕಿ ಬಂತು.

‘ನನಗೆ ಮಣ್ಣು ಹಾಕಬೇಕಾದ ಮಕ್ಕಳಿಗೆ ನಾನೇ ಮಣ್ಣು ಹಾಕಿದಿನಲ್ಲಪ್ಪ? ಬದುಕಿಲ್ಲ, ಬಾಳಲಿಲ್ಲ. ಎಲ್ಲಿಗೋದ್ರೂ ಸಂಜೆ ಮನೆಗೆ ಬರುತಿದ್ರು. ಇನ್ನು ಯಾವ ಮುಖ ಇಟ್ಕೊಂಡು ಮನೆ ಕಡೆಗೆ ಹೋಗ್ಲಿ’ ಎಂದು ತಂದೆ ಚಿನ್ನಯ್ಯ ದುಃಖಿಸಿದರು.

ಮಕ್ಕಳಿಬ್ಬರ ಆಕಸ್ಮಿಕ ಸಾವಿನಿಂದಾಗಿ ಗ್ರಾಮದಲ್ಲಿ ಯಾರ ಮನೆಯಲ್ಲೂ ಒಲೆ ಹಚ್ಚಿ ಅಡುಗೆ ಮಾಡಿರಲಿಲ್ಲ. ಇಡೀ ಗ್ರಾಮವೇ ದುಃಖದಲ್ಲಿ ಮುಳುಗಿತ್ತು.

ತಹಶೀಲ್ದಾರ್ ಎನ್. ರಘುಮೂರ್ತಿ, ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಟಿ. ತಿಪ್ಪೇಸ್ವಾಮಿ, ಜೆಡಿಎಸ್ ಮುಖಂಡ ಪಿ. ತಿಪ್ಪೇಸ್ವಾಮಿ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT