ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ನಿಯಂತ್ರಣಕ್ಕೆ 21 ದಿನ ನಂದಾದೀವಿಗೆ

ನೀಲಕಂಠೇಶ್ವರಸ್ವಾಮಿ ದೇಗುಲದಲ್ಲಿ ಗ್ರಾಮಸ್ಥರಿಂದ ಆಚರಣೆ
Last Updated 30 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಕಸಬಾ ಹೋಬಳಿಯ ಐಲಾಪುರ ಗ್ರಾಮದ ನೀಲಕಂಠೇಶ್ವರಸ್ವಾಮಿ ದೇಗುಲದಲ್ಲಿ 21 ದಿನ ನಂದಾದೀಪ ಹಾಗೂ ಭಜನೆ ಕಾರ್ಯಕ್ರಮ ಆಚರಣೆಯ ಮೂಲಕ ಗ್ರಾಮಸ್ಥರು ಕೊರೊನಾ ನಿಯಂತ್ರಣಕ್ಕೆ ಪ್ರಾರ್ಥಿಸುತ್ತಿದ್ದಾರೆ.

ಬಾಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮದಲ್ಲಿ ಸುಮಾರು 80 ಮನೆ ಹಾಗೂ 400 ಜನರು ವಾಸಿಸುತ್ತಿದ್ದಾರೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಆತಂಕಗೊಂಡ ಗ್ರಾಮದ ಹಿರಿಯರು ದೇಗುಲದಲ್ಲಿ ಸಭೆ ಸೇರಿದ್ದರು. ಲೋಕಕಲ್ಯಾಣಕ್ಕೆ ಪ್ರಾರ್ಥಿಸಲು ದೇಗುಲದಲ್ಲಿ ವಿಶೇಷ ಪೂಜೆ ನಡೆಸಲು ತೀರ್ಮಾನಿಸಿ ಆಚರಿಸಲಾಗುತ್ತಿದೆ.

ಹಚ್ಚಿರುವ ನಂದಾದೀಪ 21 ದಿನಗಳ ಕಾಲ ನಂದಿ ಹೋಗದಂತೆ ದೇಗುಲದ ಪೂಜಾರಿ ಉಸ್ತುವಾರಿ ವಹಿಸಿದ್ದಾರೆ. ಪ್ರತಿದಿನ ಸಂಜೆಯಿಂದ ತಡರಾತ್ರಿ ವರೆಗೂ ಸಾಮಾಜಿಕ ಅಂತರ ಕಾಪಾಡುವುದರೊಂದಿಗೆ ಏಳೆಂಟು ಮಂದಿ ದೇಗುಲದೊಳಗೆ ಕುಳಿತು ಭಜನೆ ಮಾಡುತ್ತಾರೆ. ನಂದಾದೀಪ ಆಚರಣೆಯ ಈ 21 ದಿನಗಳು ಗ್ರಾಮದ ಯಾವುದೇ ಮನೆಯಲ್ಲಿ ಯಾವುದೇ ಮಾಂಸಾಹಾರದ ಅಡುಗೆ ಮಾಡುವಂತಿಲ್ಲ. ಗ್ರಾಮದ ರೈತರು ಬೆಳೆದಿರುವ ಸೊಪ್ಪು, ತರಕಾರಿಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಬಾರದು. ಊರುಬಿಟ್ಟು ಬೇರೆ ಊರಿಗೆ ಹೋಗಿ ಮತ್ತೆ ಬರಬಾರದು. ಸಾಕಿರುವ ನಾಟಿಕೋಳಿಯನ್ನು ಗ್ರಾಮದಿಂದ ಹೊರಗೆ ಹಾಕಬೇಕು. ಗ್ರಾಮದೊಳಗೆ ಯಾರೂ ಚಪ್ಪಲಿ ಹಾಕಿಕೊಂಡು ಓಡಾಡುವಂತ್ತಿಲ್ಲ ಎಂಬ ನಿರ್ಬಂಧ ವಿಧಿಸಲಾಗಿದೆ.

ಗ್ರಾಮದ ಹಿರಿಯರ ನಿರ್ಬಂಧವನ್ನು ಎಲ್ಲರೂ ಪಾಲಿಸುತ್ತಿದ್ದಾರೆ. ನಾಟಿಕೋಳಿ
ಯನ್ನು ಸಂಬಂಧಿಕರ ಊರಿಗೆ ಕಳಿಸಿದ್ದಾರೆ. ರೈತರು ಬೆಳೆದಿರುವ ಸೊಪ್ಪು, ತರಕಾರಿಯನ್ನು ಗ್ರಾಮದವರೇ ಬಳಸುತ್ತಿದ್ದಾರೆ. ಗ್ರಾಮದಲ್ಲಿ ಸ್ವಚ್ಛತೆ ಪಾಲನೆಗೆ ಮಾಂಸಾಹಾರ ಸೇವನೆ ತ್ಯಜಿಸಿದ್ದಾರೆ. ಊರೊಳಗೆ ಓಡಾಡುವವರು ಚಪ್ಪಲಿ ಧರಿಸುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕದ ಬಳಿಯೂ ಸಾಮಾಜಿಕ ಅಂತರ ಪಾಲನೆಯೊಂದಿಗೆ ನೀರು ಹಿಡಿಯುವಂತೆ ವ್ಯವಸ್ಥೆ ಮಾಡಲಾಗಿದೆ. ಊರೊಳಗೆ ಹೊಸಬರು ಯಾರೂ ಬರದಂತೆ ಮುಖ್ಯರಸ್ತೆ ಮಾರ್ಗವಾಗಿ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಮಲ್ಲಿಕಾರ್ಜುನ್‌ ವಿವರಿಸಿದರು.

ಪ್ಲೇಗ್‌ ಬಂದಿದ್ದಾಗ ಆಚರಿಸಿದ್ದೆವು: ‘ಹಿಂದೆ ಪ್ಲೇಗ್‌ ರೋಗ ಬಂದಿದ್ದಾಗ ನಮ್ಮ ಪೂರ್ವಿಕರು ಈ ರೀತಿ ಆಚರಣೆ ಮಾಡಿದ್ದರಿಂದ ಗ್ರಾಮದ ಜನರಿಗೆ ಆ ಸೋಂಕು ಹರಡಿರಲಿಲ್ಲ. ಈಗಲೂ ನಂದಾದೀಪ ಹಾಗೂ ಭಜನೆ ಮಾಡುವು
ದರಿಂದ ಕೊರೊನಾ ಸೋಂಕು ತಗುಲು
ವುದಿಲ್ಲ ಎಂಬ ನಂಬಿಕೆಯಿಂದ
ಆಚರಿಸಲಾಗುತ್ತಿದೆ ಎಂದು ಹಿರಿಯ ಮುಖಂಡ ನೀಲಕಂಠಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT