ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ಸಾವಿರ ವಿದ್ಯುತ್ ಚಾಲಿತ ಬಸ್ ಗಳನ್ನಾಗಿ ಪರಿವರ್ತನೆ: ಸಚಿವ ಶ್ರೀರಾಮುಲು

ಹಿರಿಯೂರಿನಲ್ಲಿ ಬಸ್‌ ಡಿಪೊ ಶಂಕುಸ್ಥಾಪನೆಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು
Last Updated 7 ಡಿಸೆಂಬರ್ 2022, 4:44 IST
ಅಕ್ಷರ ಗಾತ್ರ

ಹಿರಿಯೂರು: ‘ಪರಿಸರ ಮಾಲಿನ್ಯ ತಡೆಗಟ್ಟುವುದಕ್ಕಾಗಿ ಹಾಗೂ ಅಪಘಾತಗಳ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ 2030ರೊಳಗೆ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ 30,000 ಹಳೆಯ ಬಸ್‌ಗಳನ್ನು ವಿದ್ಯುತ್ ಚಾಲಿತ ಬಸ್‌ಗಳನ್ನಾಗಿ ಪರಿವರ್ತಿಸಲಾಗುವುದು’ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.

ನಗರದ ಹುಳಿಯಾರು ರಸ್ತೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ಬಸ್ ಘಟಕದ ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಜನವರಿ ಅಂತ್ಯದೊಳಗೆ 50 ವಿದ್ಯುತ್ ಚಾಲಿತ ಬಸ್ ಖರೀದಿಸಲಾಗುವುದು. 600 ಕೆಂಪು ಬಸ್ ಖರೀದಿಗೆ ಟೆಂಡರ್ ಕರೆಯಲಾಗಿದೆ. 60 ವೊಲ್ವೊ ಬಸ್ ಖರೀದಿಗೂ ಚಿಂತನೆ ನಡೆಸಿದ್ದೇವೆ. ರಸ್ತೆ ಅವ್ಯವಸ್ಥೆ ಕಾರಣಕ್ಕೆ ಅಪಘಾತ ಸಂಭವಿಸಿದಾಗ ಉಂಟಾಗುವ ಸಾವು–ನೋವು ತಪ್ಪಿಸಲು ಅಪಘಾತ ಸ್ಥಳಗಳನ್ನು ಬ್ಲಾಕ್ ಸ್ಪಾಟ್ ಎಂದು ಗುರುತಿಸ ಲಾಗುವುದು’ಎಂದುಹೇಳಿದರು.

‘ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಯ ವೇತನ 2017ರಿಂದ ಪರಿಷ್ಕರಣೆ ಆಗಿಲ್ಲ. ಸಿಎಂ ಜೊತೆ ಮಾತನಾಡಿ ವೇತನ ಪರಿಷ್ಕರಣೆ ಮಾಡಲಾಗುವುದು’ ಎಂದು ಸಚಿವರು ತಿಳಿಸಿದರು.

‘ಭಾರತ್ ಜೋಡೋ ಯಾತ್ರೆಯಿಂದ ಗೆಲುವಿನ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಭಾರತ್ ಜೋಡೋ ಬದಲು ಸಿದ್ದರಾಮಯ್ಯ–ಡಿ.ಕೆ. ಶಿವಕುಮಾರ್ ಅವರನ್ನು ಒಂದುಗೂಡಿಸಲಿ’ ಎಂದು ಹೇಳಿದರು.

‘ಹಿರಿಯೂರು ತಾಲ್ಲೂಕಿಗೆ ಪ್ರಸ್ತುತ 11 ವಾಲ್ಮೀಕಿ ಭವನ ಮಂಜೂರು ಮಾಡಿದ್ದು, 30 ಭವನ ಬೇಕೆಂದು ಪೂರ್ಣಿಮಾ ಅವರು ಕೇಳಿದ್ದಾರೆ. ಭರವಸೆ ಈಡೇರಿಸುತ್ತೇನೆ’ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ‘2018ರ ಚುನಾವಣೆಗೆ ಹೋಗುವ ಮುಂಚೆ ನೀಡಿದ್ದ ಬಹುತೇಕ ಭರವಸೆಗಳನ್ನು ನಮ್ಮ ಸರ್ಕಾರ ಈಡೇರಿಸಿದೆ. 2010ರಲ್ಲೇ ಡಿಪೋಗೆ ಜಾಗ ಗುರುತು ಮಾಡಲಾಗಿತ್ತು ಎಂದು ಕೆಲವರು ವಾಟ್ಸ್‌ಆ್ಯಪ್‌ನಲ್ಲಿ ಹೇಳಿಕೊಂಡಿದ್ದಾರೆ. ಸರ್ಕಾರಿ ಜಾಗವನ್ನು ಗುರುತು ಮಾಡಿ ವಶಕ್ಕೆ ಪಡೆಯುವುದು ಕಷ್ಟದ ಕೆಲಸವೇ? ಡಿಪೊ ನಿರ್ಮಾಣಕ್ಕೆ ಅನುದಾನ ತರಬೇಕಿತ್ತಲ್ಲವೇ? ಧರ್ಮಪುರ ಕೆರೆಗೆ ನೀರು ಹರಿಸುವ ವಿಚಾರದಲ್ಲೂ ಜನರಿಗೆ ಸುಳ್ಳು ಭರವಸೆ ನೀಡಲಾಗಿತ್ತು. ನಮ್ಮ ಸರ್ಕಾರ ಅಧಿಕೃತವಾಗಿ ನೀರು ಹರಿಸುವ ಕಾಮಗಾರಿ ಆರಂಭಿಸಿದೆ. ಡಿಪೊ ಆರಂಭದಿಂದ ಸಾರಿಗೆ ಸಮಸ್ಯೆ ನಿವಾರಣೆ ಆಗಲಿದೆ’ ಎಂದರು.

ಸಾರಿಗೆ ನಿಗಮದ ನಿರ್ದೇಶಕರಾದ ಪಿ. ರುದ್ರೇಶ್, ಆರುಂಡಿ ನಾಗರಾಜ್, ರಾಜುವಿಠಲಸ ಜರತಾರಘರ, ಮಾರುತಿ ಪ್ರಸಾದ್, ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಕೃಷಿಕ ಸಮಾಜದ ಅಧ್ಯಕ್ಷ ತಿಮ್ಮಯ್ಯ, ನಗರಸಭೆ ಸದಸ್ಯರಾದ ಶಿವರಂಜನಿ, ಎಂ.ಡಿ. ಸಣ್ಣಪ್ಪ, ಪಲ್ಲವ, ಅಂಬಿಕಾ, ಮಂಜುಳಾ, ಎ.ರಾಘವೇಂದ್ರ, ಕೇಶವಮೂರ್ತಿ, ಎಂ.ವಿ. ಹರ್ಷ, ಮಲ್ಲೇಶ್, ದೇವೀರಮ್ಮ, ಮುಖಂಡರಾದ ವಿ. ವಿಶ್ವನಾಥ್, ದ್ಯಾಮಣ್ಣ, ರಾಜೇಶ್ವರಿ
ಇದ್ದರು.

ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರದ ಆದೇಶ ಪತ್ರವನ್ನು ಶ್ರೀರಾಮುಲು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT