ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ ಜಿಲ್ಲೆ: 33,713 ಯುವ ಮತದಾರರ ಸೇರ್ಪಡೆ

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ತೃಪ್ತಿಕರ; ಮಹೇಶ್ವರ ರಾವ್ ಮೆಚ್ಚುಗೆ
Last Updated 3 ಮೇ 2019, 17:09 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ಈ ಬಾರಿ ಕೈಗೊಂಡ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ತೃಪ್ತಿಕರವಾಗಿದೆ ಎಂದು ಮತದಾರರ ಪಟ್ಟಿ ವೀಕ್ಷಕ ಮಹೇಶ್ವರ ರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.

ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮತದಾರರ ಪಟ್ಟಿ ಪರಿಷ್ಕರಣೆ ಅಂಗವಾಗಿ ತಹಶೀಲ್ದಾರರು, ಅಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯ ಮೊಳಕಾಲ್ಮುರು ಕ್ಷೇತ್ರದಲ್ಲಿ 5,458, ಚಳ್ಳಕೆರೆ 5,264, ಚಿತ್ರದುರ್ಗ 6,781, ಹಿರಿಯೂರು 5,290, ಹೊಸದುರ್ಗ 4,766, ಹೊಳಲ್ಕೆರೆ ಕ್ಷೇತ್ರದಲ್ಲಿ 6,154 ಯುವ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ’ ಎಂದರು.

‘ಜಿಲ್ಲೆಯಲ್ಲಿ ಒಟ್ಟಾರೆ ಈವರೆಗೂ 33,713 ಯುವ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಮತದಾರರ ಪಟ್ಟಿ ಅಂತಿಮಗೊಳಿಸುವ ಮುನ್ನ ಆಯಾ ತಹಶೀಲ್ದಾರರು ಪರಿಶೀಲಿಸಿ, ಕಡ್ಡಾಯವಾಗಿ ದೃಢೀಕರಿಸಬೇಕು’ ಎಂದು ಸೂಚನೆ ನೀಡಿದರು.

‘ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು, ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಕೈಗೊಳ್ಳಲಾಯಿತು. ಅದು ತೃಪ್ತಿಕರವಾಗಿದೆ’ ಎಂದು ಪುನರುಚ್ಚರಿಸಿದರು.

‘ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮಾರ್ಚ್ 26ರವರೆಗೂ ಅವಕಾಶ ನೀಡಲಾಗಿತ್ತು’ ಎಂದ ಅವರು, ‘ಹೆಸರು ಸೇರ್ಪಡೆಗೆ ಅಂಗೀಕೃತವಾಗುವ ಅರ್ಜಿಗಳಿಗೆ ಸಂಬಂಧಿಸಿದಂತೆ, ಶೀಘ್ರದಲ್ಲೇ ಮತದಾರರ ಗುರುತಿನ ಚೀಟಿ ವಿತರಿಸಬೇಕು’ ಎಂದರು.

‘ಜನವರಿ ತಿಂಗಳಲ್ಲಿ ಪ್ರಕಟಿಸಲಾದ ಮತದಾರರ ಅಂತಿಮ ಪಟ್ಟಿಯನ್ವಯ ಜಿಲ್ಲೆಯಲ್ಲಿನ ಮತದಾರರ ಸಂಖ್ಯೆ 13,39,248 ಆಗಿತ್ತು. ಪರಿಷ್ಕರಣೆ ಕಾರ್ಯದ ಬಳಿಕ ಮತದಾರರ ಸಂಖ್ಯೆ 13,49,380 ಆಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 10,132 ಮತದಾರರ ಸಂಖ್ಯೆ ಹೆಚ್ಚಳವಾಗಿದೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳು ಪರಿಣಾಮಕಾರಿಯಾಗಬೇಕು. ಮತದಾನದ ಪ್ರಮಾಣವೂ ಹೆಚ್ಚಾದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಪ್ರಯತ್ನ ಸಾರ್ಥಕವಾಗಲಿದೆ’ ಎಂದು ಹೇಳಿದರು.

ಜಿಲ್ಲಾ ಚುನಾವಣಾಧಿಕಾರಿ ವಿನೋತ್ ಪ್ರಿಯಾ, ‘ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಆಯಾ ತಾಲ್ಲೂಕುಗಳ ತಹಶೀಲ್ದಾರರ ನೇತೃತ್ವದಲ್ಲಿ ಉತ್ತಮವಾಗಿ ನಡೆದಿದೆ’ ಎಂದು ಹೇಳಿದರು.

ಉಪವಿಭಾಗಾಧಿಕಾರಿ ವಿಜಯಕುಮಾರ್, ತಹಶೀಲ್ದಾರ್ ಪ್ರತಿಭಾ, ನಗರಸಭೆ ಪೌರಾಯುಕ್ತ ಚಂದ್ರಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT