ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ವಿಶ್ವಾಸದ ಕೊಡುಗೆ ಹರಿದಿದೆ

ಕನಕಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವಾಸ
Last Updated 9 ಮೇ 2018, 13:06 IST
ಅಕ್ಷರ ಗಾತ್ರ

ಕನಕಗಿರಿ: 2013ರ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 5,052 ಮತಗಳ ಅಂತರ
ದಿಂದ ಶಾಸಕ ಶಿವರಾಜ ತಂಗಡಗಿ ವಿರುದ್ದ ಸೋಲುಂಡಿರುವ ಬಸವರಾಜ  ಧಡೇಸೂಗುರು ಈಗ ಕನಕಗಿರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಪ್ರಬಲ ಅಭ್ಯರ್ಥಿಯೊಬ್ಬರ ವಿರುದ್ಧ ಸೆಣಸಾಟ ತಂತ್ರ ಪ್ರತಿತಂತ್ರ ರೂಪಿಸಬೇಕಾದ ತುರುಸಿನಲ್ಲಿ ಅವರಿದ್ದಾರೆ. ಧನ, ಧಾನ್ಯದ ಕೊಡುಗೆಯ ರೂಪದಲ್ಲಿ ಜನಬೆಂಬಲ ಅವರಿಗೆ ಸಿಗುತ್ತಿದೆ. ಪ್ರಚಾರದ ನಡುವೆಯ ಪ್ರಜಾವಾಣಿಗೆ ನೀಡಿರುವ ಸಂದರ್ಶನ ಇಲ್ಲಿದೆ.

ಚುನಾವಣೆಯ ಸಮಯ ಮಾಜಿ ಸಂಸದರು, ಟಿಕೆಟ್ ಆಕಾಂಕ್ಷಿಗಳು ಬಿಜೆಪಿ ತೊರೆದಿದ್ದಾರಲ್ಲಾ?

ಮಾಜಿ ಸಂಸದರಾದ ಕೆ. ವಿರೂಪಾಕ್ಷಪ್ಪ, ಶಿವರಾಮಗೌಡ ಹಾಗೂ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮುಕುಂದರಾವ್ ಭವಾನಿಮಠ  ಅವಸರ ಮಾಡಿ ಪಕ್ಷ ತೊರೆದಿದ್ದಾರೆ. ಸರ್ಕಾರ ರಚನೆಯಾದ ನಂತರ ಸ್ಥಾನಮಾನ ನೀಡಲಾಗುವುದು ಎಂದು ಹೇಳಿದ್ದರೂ ದುಡುಕಿನ ನಿರ್ಧಾರ ಕೈಗೊಂಡರು ಎಂದೆನ್ನಿಸುತ್ತದೆ.ಈ ಮುಖಂಡರು ದೈಹಿಕವಾಗಿ ದೂರವಾಗಿದ್ದರೂ ಮಾನಸಿಕವಾಗಿ ತಮ್ಮನ್ನು ಬೆಂಬಲಿಸುತ್ತಿದ್ದಾರೆ. ಭವಾನಿಮಠರ ಪತ್ನಿ ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯೆ ಭಾಗ್ಯವತಿ ಅವರು ತಮ್ಮ ಪರ ಪ್ರಚಾರ ಮಾಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಪ್ರಭಾವ ಚುನಾವಣೆಯಲ್ಲಿ ಪರಿಣಾಮ ಬೀರುತ್ತದೆಯೇ?

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವ ಚುನಾವಣೆಯಲ್ಲಿ ಒಳ್ಳೆಯ ಕೆಲಸ ಮಾಡಲಿದೆ. 70 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್‌ ಜನರಿಗೆ ಏನೂ ಮಾಡಲಿಲ್ಲ. ನಾಲ್ಕು ವರ್ಷದ ಅಧಿಕಾರಾವಧಿಯಲ್ಲಿ ವಿಶ್ವವೇ ಭಾರತದ ಕಡೆಗೆ ನೋಡುವಂತೆ ಮೋದಿ ಅವರು ಮಾಡಿದ್ದಾರೆ. ಉಚಿತ ಆರೋಗ್ಯ ಚಿಕಿತ್ಸೆ, ರಿಯಾಯಿತಿ ದರದಲ್ಲಿ ಔಷಧಿ ವಿತರಣೆ, ಅಪಘಾತ ಜೀವ ವಿಮೆ ಹೀಗೆ ಕೇಂದ್ರ ಸರ್ಕಾರದ ಯೋಜನೆಗಳು ಜನಪ್ರಿಯವಾಗಿವೆ. ಮೋದಿ ಹವಾದಿಂದ ಯುವಕರು ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ.

ತಮಗೆ ಓದು, ಬರಹ ಬರಲ್ಲ ಎಂಬ ವಿರೋಧ ಪಕ್ಷದವರ ಟೀಕೆಯನ್ನು ಹೇಗೆ ಸ್ವೀಕರಿಸುತ್ತೀರಿ?

ಈ ಬಗ್ಗೆ ನಾನು ಏನು ಹೇಳಲ್ಲ. ಪ್ರಜಾಪ್ರಭುತ್ವದಲ್ಲಿ ಓದು ಬರಹ ಬಲ್ಲವನೇ ಆಡಳಿತ ಮಾಡಬೇಕೆಂದೇನಿಲ್ಲ. ನಾಯಕತ್ವ, ಸಾಮಾನ್ಯಪ್ರಜ್ಞೆ, ಲೋಕಜ್ಞಾನ ಇದ್ದರೆ ಸಾಕು. ಅದಕ್ಕೆಲ್ಲಾ ಸಮಯ ಬಂದಾಗ ಉತ್ತರ ನೀಡುತ್ತೇನೆ. ಮತದಾರರೇ ಕ್ಷೇತ್ರದ ಮಾಲೀಕರು. ಮೇ 15ರಂದು ಜನರೇ ಈ ಪ್ರಶ್ನೆಗೆ ಉತ್ತರ ನೀಡುತ್ತಾರೆ.

ಪ್ರತಿಸ್ಪರ್ಧಿಗಳನ್ನು ಎದುರಿಸಲು ಏನು ತಂತ್ರ ಹೂಡಿದ್ದೀರಿ?

ಕ್ಷೇತ್ರದ ಮತದಾರರೇ ಪ್ರತಿಸ್ಪರ್ಧಿಯನ್ನು ಸೋಲಿಸಲು ಮುಂದಾಗಿದ್ದಾರೆ. ರಾಜ್ಯ, ದೇಶ ಆಳಿದ ಮುಖ್ಯಮಂತ್ರಿ, ಪ್ರಧಾನಮಂತ್ರಿ ಅವರನ್ನೂ ಸೋಲಿಸಿದ್ದಾರೆ. ಇನ್ನೂ ಈ ಶಾಸಕರನ್ನು ಬಿಡುತ್ತಾರೆಯೇ? ಕಳೆದ ಅವಧಿಯಲ್ಲಿ ಸ್ವಲ್ಪ ಮತಗಳಲ್ಲಿ ಪರಾಭವಗೊಂಡಿರುವೆ. ಕ್ಷೇತ್ರಕ್ಕೆ ಕಾಲಿಟ್ಟು 9 ವರ್ಷ ಗತಿಸಿವೆ. ಯಾವುದೇ ಅಧಿಕಾರವಿಲ್ಲದಿದ್ದರೂ ಜನರ ಸೇವೆ ಮಾಡಿರುವೆ. ಪ್ರಚಾರದ ಸಮಯದಲ್ಲಿ ವ್ಯಾಪಕ ಬೆಂಬಲ ನೀಡಲಾಗುತ್ತಿದೆ. ಜನತಾ ನ್ಯಾಯಾಲಯವೇ ತೀರ್ಪು ನೀಡುತ್ತದೆ. ತಂಗಡಗಿಯನ್ನು ಸೋಲಿಸಲು ಇನ್ನೇನು ಬೇಕು ಹೇಳಿ.

ಚುನಾವಣೆ ಹೇಗೆ ಎದುರಿಸುತ್ತಿದ್ದೀರಿ?

ಅಪಾರ ಸಂಖ್ಯೆಯ ಕಾರ್ಯಕರ್ತರು ತಮ್ಮ ಬೆನ್ನೆಲುಬಾಗಿ ನಿಂತಿದ್ದಾರೆ. ಚುನಾವಣೆಯ ವೆಚ್ಚಕ್ಕೆ ವಿವಿಧ ಗ್ರಾಮಸ್ಥರು, ರೈತರು ನಗದು, ಧವಸ ಧಾನ್ಯ ನೀಡುತ್ತಿದ್ದಾರೆ. ಬಹಳ ಖುಷಿಯಾಗಿದೆ. ಹಣಕ್ಕಿಂತ ಜನರ ಪ್ರೀತಿ, ವಿಶ್ವಾಸ ಮುಖ್ಯ. ಹಣವೇ ಮುಖ್ಯವಲ್ಲ. ಕ್ಷೇತ್ರದ ಜನರು ತಮ್ಮನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆಯಿಂದ ಚುನಾವಣೆ ಎದುರಿಸುತ್ತಿದ್ದೇನೆ.

ಚುನಾವಣೆಯಲ್ಲಿ ಗೆದ್ದರೆ ಆದ್ಯತೆಗಳು ಏನು?

ಚುನಾವಣೆಯಲ್ಲಿ ಗೆಲುವು ಶತ ಸಿದ್ದ. ಗ್ರಾಮೀಣ ಭಾಗದಲ್ಲಿ ಸಿಸಿ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರು, ಮೂಲ ಸೌಕರ್ಯಗಳನ್ನು ಕಲ್ಪಿಸುವೆ. ವಿದ್ಯುತ್ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ, ರೈತರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುತ್ತೇನೆ. ರೈತರೇ ಮುಂದಾಗಿ ಸರ್ಕಾರಕ್ಕೆ ಸಾಲ ನೀಡುವಂತ ಸ್ಥಿತಿ ತರುತ್ತೇನೆ. ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗುಳೆ ಹೋಗುತ್ತಿದ್ದಾರೆ. ಮೊದಲು ಅದನ್ನು ತಡೆಯುತ್ತೇನೆ. ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಕಲ್ಪಿಸಲಾಗುವುದು.

ಮೆಹಬೂಬಹುಸೇನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT