ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

57ನೇ ಬಾರಿ ನೂರು ಅಡಿಯತ್ತ ವಾಣಿವಿಲಾಸ

ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ತಣಿಯದ ಕುತೂಹಲ
Last Updated 11 ಡಿಸೆಂಬರ್ 2019, 10:38 IST
ಅಕ್ಷರ ಗಾತ್ರ

ಹಿರಿಯೂರು: 112 ವರ್ಷಗಳ ಇತಿಹಾಸ ಇರುವ ತಾಲ್ಲೂಕಿನ ವಾಣಿವಿಲಾಸ ಜಲಾಶಯ 56 ಬಾರಿ 100 ಅಡಿ ತಲುಪಿದ್ದು, 57ನೇ ಬಾರಿ ಮುಟ್ಟುವ ಸಾಧ್ಯತೆ ಇದೆ. ಇದನ್ನು ಕಣ್ತುಂಬಿಕೊಳ್ಳಲು ತಾಲ್ಲೂಕಿನ ರೈತರು, ಸಾರ್ವಜನಿಕರು ಕಾತುರದಿಂದ ಕಾಯುತ್ತಿದ್ದಾರೆ.

ಡಿ. 9 ರಂದು ಬೆಳಿಗ್ಗೆ ಜಲಾಶಯದ ನೀರಿನ ಮಟ್ಟ 98.70 ಅಡಿ ಇತ್ತು. 30 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಒಟ್ಟು 11.01 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇದರಲ್ಲಿ ಭದ್ರಾ ಮೇಲ್ದಂಡೆ ಹಾಗೂ ಮಳೆಯಿಂದ 9.14 ಟಿಎಂಸಿ ಅಡಿ ನೀರು ಬಂದಿದೆ. ಡಿ. 3ರಿಂದ ಪ್ರತಿದಿನ 803 ಕ್ಯುಸೆಕ್‌ ಒಳಹರಿವು ಇದ್ದು, ಡಿ. 9ರಂದು 421 ಕ್ಯುಸೆಕ್‌ ಇಳಿದಿದೆ. ಈ ಲೆಕ್ಕದಲ್ಲಿ ಡಿ. 12ರಂದು ಬೆಳಗಿನ ವೇಳೆಗೆ ಜಲಾಶಯದ 100 ಅಡಿ ತಲುಪುವ ಸಾಧ್ಯತೆ ಇದೆ.

1911ರಲ್ಲಿ ಪ್ರಥಮ ಬಾರಿಗೆ ನೀರಿನ ಮಟ್ಟ 109.66 ಅಡಿ ತಲುಪಿತ್ತು. 1933ರಲ್ಲಿ 135.25 ಅಡಿ ದಾಖಲೆ ನೀರು ಸಂಗ್ರಹವಾಗಿ ಕೋಡಿ ಹರಿದಿತ್ತು. 2000ದಲ್ಲಿ 122.50 ಹಾಗೂ 2010ರಲ್ಲಿ 112.75 ಅಡಿ ನೀರು ಸಂಗ್ರಹವಾಗಿದ್ದು ಹೊರತುಪಡಿಸಿದರೆ ಒಂಬತ್ತು ವರ್ಷದ ನಂತರ 100 ಅಡಿ ಮುಟ್ಟುತ್ತಿದೆ.

ಸ್ಮರಣೀಯ ಒಡೆಯರ್: ವ್ಯರ್ಥವಾಗಿ ಹರಿದು ಹೋಗುತ್ತಿದ್ದ ವೇದಾವತಿ ನದಿಯ ನೀರನ್ನು ಬಯಲು ಸೀಮೆಯ ಜನರ ಒತ್ತಾಯದ ಮೇರೆಗೆ ಅಣೆಕಟ್ಟೆ ನಿರ್ಮಿಸಿ ರಕ್ಷಿಸುವ ಕೆಲಸಕ್ಕೆ ಮುಂದಾದವರು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್.

ಕೃಷ್ಣರಾಜ ಒಡೆಯರ್ ಜನರ ಒತ್ತಾಯದ ಮೇರೆಗೆ ವೇದಾವತಿ ನದಿಗೆ ಅಣೆಕಟ್ಟೆ ನಿರ್ಮಿಸಲು ಮುಂದಾದರು. ವಾಣಿವಿಲಾಸಪುರ ಗ್ರಾಮದ ಬಳಿ ಮಾರಿಕಣಿವೆ ಪ್ರದೇಶದಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ತಾಯಿ ಕೆಂಪ
ನಂಜಮ್ಮಣ್ಣಿ ಹೆಸರಿನಲ್ಲಿ ವಾಣಿವಿಲಾಸ ಜಲಾಶಯವನ್ನು ನಿರ್ಮಿಸಿದರು. 1897ರಲ್ಲಿ ಕಾಮಗಾರಿ ಆರಂಭಿಸಿ ಹತ್ತೇವರ್ಷದಲ್ಲಿ ₹ 45 ಲಕ್ಷ ವೆಚ್ಚದಲ್ಲಿ ಜಲಾಶಯ ನಿರ್ಮಿಸಿದರು. ಈ ಭಾಗದಜನರು ಅವರನ್ನು ಸ್ಮರಿಸುತ್ತಾರೆ.

ಮೈಸೂರು ಒಡೆಯರಲ್ಲಿದ್ದ ದೂರದೃಷ್ಟಿ ಜನಪ್ರತಿನಿಧಿಗಳಲ್ಲಿ ಸ್ವಲ್ಪ ಮಟ್ಟಿಗೆ ಇದ್ದಿದ್ದರೂ ಜಲಾಶಯ ತಳಮಟ್ಟ ತಲುಪಲು ಬಿಡುತ್ತಿರಲಿಲ್ಲ ಎಂಬುದು ರೈತರ ದೂರು. ಜುಲೈ 2019ರಲ್ಲಿ ಪ್ರಥಮ ಬಾರಿಗೆ ಜಲಾಶಯ ಡೆಡ್ ಸ್ಟೋರೇಜ್ ಹಂತ ತಲುಪಿದಾಗ ಜಿಲ್ಲಾಡಳಿತ ಪಂಪ್ ಮಾಡುವ ಮೂಲಕ ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ ಹಾಗೂ ಡಿಆರ್‌ಡಿಒ ಯೋಜನೆಗೆ ನೀರು ಪೂರೈಸಲು ಹೊರಟಿತ್ತು. ಜಿಲ್ಲಾಡಳಿತದ ನಿರ್ಧಾರ ಖಂಡಿಸಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ನೇತೃತ್ವದಲ್ಲಿ ವಾಣಿವಿಲಾಸ ಹೋರಾಟ ಸಮಿತಿ ನಡೆಸಿದ ಹೋರಾಟದ ಫಲವಾಗಿ ತಾತ್ಕಾಲಿಕವಾಗಿ ನೀರೆತ್ತುವುದಕ್ಕೆ ತಡೆ ಹಾಕಲಾಗಿತ್ತು.

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಇನ್ನೂ ಮೂರ್ನಾಲ್ಕು ವರ್ಷ ಪೂರ್ಣಗೊಳ್ಳುವುದಿಲ್ಲ ಎಂಬ ಸತ್ಯ ಅರಿತ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್, ಗೂಳಿಹಟ್ಟಿ ಶೇಖರ್, ಎಂ. ಚಂದ್ರಪ್ಪ, ಸಂಸದನಾರಾಯಣಸ್ವಾಮಿ ಹಾಗೂ ಹೋರಾಟ ಸಮಿತಿಯವರು ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೆಂಕಟರಮಣಪ್ಪ ಅವರ ಮೇಲೆ ಒತ್ತಡ ತಂದರು. ಅದರ ಪರಿಣಾಮ ವಿಶ್ವೇಶ್ವರಯ್ಯ ಜಲ ನಿಗಮದವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್ ಜತೆ ಸಮಾಲೋಚಿಸಿ ಪರ್ಯಾಯ ಯೋಜನೆ ಕಂಡುಕೊಂಡ ಪರಿಣಾಮ ಭದ್ರೆಯ ನೀರು ವಾಣಿವಿಲಾಸಕ್ಕೆ ಹರಿದು ಬರುತ್ತಿದೆ.

ಮಾರ್ಚ್‌ವರೆಗೆ ನೀರು: ಭದ್ರಾ ನೀರನ್ನು ನವೆಂಬರ್ ಅಂತ್ಯದವರೆಗೆ ಮಾತ್ರ ಪಂಪ್ ಮಾಡಲು ಇದ್ದ ಅವಧಿಯನ್ನು ಜಿಲ್ಲೆಯ ಶಾಸಕರು, ಸಂಸದರು, ಹೋರಾಟ ಸಮಿತಿ ಮುಖಂಡರ ಮನವಿ ಮೇರೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾರ್ಚ್ ಅಂತ್ಯದವರೆಗೆ ವಿಸ್ತರಿಸಿದ್ದಾರೆ. ಅಲ್ಲಿಯವರೆಗೆ ನೀರು ಬಂದರೆ 110 ಅಡಿ ತಲುಪುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT