ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಲ್ಕ್ ಚಿಲ್ಲಿಂಗ್ ಕೇಂದ್ರಕ್ಕೆ 9 ಎಕರೆ ಭೂಮಿ- ಶಾಸಕಿ ಪೂರ್ಣಿಮಾ ಶ್ರೀನಿವಾಸ್

Last Updated 21 ಫೆಬ್ರುವರಿ 2022, 6:06 IST
ಅಕ್ಷರ ಗಾತ್ರ

ಹಿರಿಯೂರು:‘ತಾಲ್ಲೂಕಿನ ಪಟ್ರೆಹಳ್ಳಿ ಸಮೀಪ ನಿರ್ಮಿಸಲು ಉದ್ದೇಶಿಸಿರುವ ಮಿನಿ ವಿಧಾನಸೌಧದ ಪಕ್ಕದಲ್ಲಿ ಶಿವಮೊಗ್ಗ ಹಾಲು ಒಕ್ಕೂಟದವರು ಒಂದು ಲಕ್ಷ ಲೀಟರ್ ಸಾಮರ್ಥ್ಯದ ಮಿಲ್ಕ್ ಚಿಲ್ಲಿಂಗ್ ಕೇಂದ್ರ ಆರಂಭಿಸಲು 9 ಎಕರೆ ಭೂಮಿ ಕೊಡಿಸಲಾಗುವುದು’ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಭರವಸೆ ನೀಡಿದರು.

ತಾಲ್ಲೂಕಿನ ಮಸ್ಕಲ್ ಗ್ರಾಮದಲ್ಲಿ ಭಾನುವಾರ ಪಶುಪಾಲನಾ ಇಲಾಖೆ ಹಾಗೂ ಶಿವಮೊಗ್ಗ ಹಾಲು ಉತ್ಪಾದಕರ ಸಂಘದಿಂದ ಏರ್ಪಡಿಸಿದ್ದ ಮಿಶ್ರತಳಿ ಹಸು ಕರುಗಳ ಪ್ರದರ್ಶನ ಮತ್ತು ಬರಡುರಾಸು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ಹೈನುಗಾರಿಕೆ ಉದ್ಯಮವಾಗಿ ಬೆಳೆಯಬೇಕು ಎಂಬುದು ನಮ್ಮ ಬಯಕೆ. ಪ್ರಸ್ತುತ 54 ಹಾಲು ಉತ್ಪಾದಕರ ಸಂಘಗಳ 2600 ಉತ್ಪಾದಕರು ನಿತ್ಯ 29,500 ಲೀಟರ್ ಹಾಲನ್ನು ಶಿವಮೊಗ್ಗ ಹಾಲು ಒಕ್ಕೂಟಕ್ಕೆ ಪೂರೈಕೆ ಮಾಡುತ್ತಿದ್ದಾರೆ. ಇದು ಎರಡು ಮೂರು ಪಟ್ಟು ಹೆಚ್ಚಬೇಕು. ಹಸು–ಎಮ್ಮೆ ಸಾಕಣೆಯಿಂದ ಆದಾಯ ಹೆಚ್ಚುತ್ತದೆ. ಉತ್ಪಾದಕರು ಗುಣಮಟ್ಟದ ಹಾಲನ್ನು ಒಕ್ಕೂಟಕ್ಕೆ ನೀಡಬೇಕು’ ಎಂದರು.

ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಜಿ.ಪಿ. ಯಶವಂತರಾಜು, ‘ಶಿವಮೊಗ್ಗ ಒಕ್ಕೂಟದಲ್ಲಿ 1500ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಂಘಗಳಿದ್ದು, ಈ ಭಾಗದಲ್ಲಿ ಹಾಲು ಉತ್ಪಾದನೆ ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ಶಿಮುಲ್‌ನಿಂದ ರೈತರಿಗೆ ಮೇವು ಕತ್ತರಿಸುವ ಮತ್ತು ಹಾಲು ಕರೆಯುವ ಯಂತ್ರ, ಮಿನರಲ್ ಮಿಶ್ರಣ, ಬೂಸಾವನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಹಾಲು ಹಾಕುವವರು ಮೃತಪಟ್ಟರೆ ವಯಸ್ಸಿಗೆ ಅನುಗುಣವಾಗಿ ₹ 30 ಸಾವಿರದಿಂದ ₹ 1 ಲಕ್ಷದವರೆಗೆ ಪರಿಹಾರ ನೀಡುತ್ತೇವೆ. ಹಸುಗಳ ವಿಮಾ ಕಂತು ಪಾವತಿಸುತ್ತೇವೆ. ಮಸ್ಕಲ್ ಗ್ರಾಮದಲ್ಲಿ 3 ಸಾವಿರ ಲೀಟರ್ ಸಾಮರ್ಥ್ಯದ ಮಿಲ್ಕ್ ಚಿಲ್ಲಿಂಗ್ ಕೇಂದ್ರ ಆರಂಭವಾಗುತ್ತಿದ್ದು, ಶಿಮುಲ್‌ನಿಂದ ₹ 7 ಲಕ್ಷ ಹಾಗೂ ಶಾಸಕರು ತಮ್ಮ ಅನುದಾನದಲ್ಲಿ ₹ 5 ಲಕ್ಷ ನೀಡಿದ್ದಾರೆ. ಮಿನಿ ವಿಧಾನಸೌಧದ ಬಳಿ 9 ಎಕರೆ ಸರ್ಕಾರಿ ಜಾಗ ಸಿಕ್ಕರೆ ಡೈರಿ ಉದ್ಯಮ ದೊಡ್ಡಮಟ್ಟದಲ್ಲಿ ಬೆಳೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಸ್ಕಲ್ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಧು ಅಧ್ಯಕ್ಷತೆ ವಹಿಸಿದ್ದರು. ಸಿ.ವೀರಭದ್ರಬಾಬು, ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುಳ, ಉಪಾಧ್ಯಕ್ಷ ನಾಗರಾಜ, ಸದಸ್ಯ ವಿ.ಎಲ್.ಗೌಡ, ಬಾಲು, ಮುಖಂಡರಾದ ರಾಜೇಶ್, ಸಂಪತ್, ಭೀಮಣ್ಣ, ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT