ಪ.ಪಂ. ಕಚೇರಿ ಕಟ್ಟಡಕ್ಕೆ ₹ 9.14 ಕೋಟಿ

ಹೊಳಲ್ಕೆರೆ: ₹ 9.14 ಕೋಟಿ ವೆಚ್ಚದಲ್ಲಿ ಪಟ್ಟಣ ಪಂಚಾಯಿತಿಯ ನೂತನ ಕಚೇರಿ ಕಟ್ಟಡ ನಿರ್ಮಿಸಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.
ಅಧ್ಯಕ್ಷ ಆರ್.ಎ.ಅಶೋಕ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
‘ಪಟ್ಟಣ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಪಟ್ಟಣದ ಹೃದಯ ಭಾಗದಲ್ಲಿ ಸುಂದರ ಕಟ್ಟಡ ನಿರ್ಮಾಣ ಆಗಲಿದ್ದು, ಸಾರ್ವಜನಿಕ ವಾಹನ ಪಾರ್ಕಿಂಗ್, ವಾಣಿಜ್ಯ ಮಳಿಗೆಗಳು, ಮೀಟಿಂಗ್ ಹಾಲ್ ಸೇರಿ ವಿವಿಧ ಸೌಲಭ್ಯಗಳಿರುತ್ತವೆ. ನನ್ನ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಟ್ಯಾಂಕರ್ ವಾಹನ ಹಾಗೂ ಬೀದಿ ದೀಪಗಳ ನಿರ್ವಹಣೆಗೆ ಏಣಿ ಹೊಂದಿರುವ ಜೀಪ್ ನೀಡಲಾಗುವುದು’ ಎಂದರು.
ಪಟ್ಟಣ ಪಂಚಾಯಿತಿ ನೂತನ ಕಚೇರಿ ಕಟ್ಟಡ ನಿರ್ಮಾಣ ಮಂಜೂರಾತಿಗಾಗಿ ತಾಂತ್ರಿಕ ಪ್ರಸ್ತಾವ ಸಲ್ಲಿಸುವುದು, ಪಟ್ಟಣದಲ್ಲಿ ಸುಸ್ಥಿತಿಯಲ್ಲಿರದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಿಸುವುದು, 9 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಣೆ ಮಾಡಲು ಹರಾಜು ಮಾಡುವುದು, ನೀರು ಸರಬರಾಜು, ಬೀದಿ ದೀಪ ನಿರ್ವಹಣೆಗೆ ವಾರ್ಷಿಕ ಟೆಂಡರ್ ಕರೆಯಲು ಒಪ್ಪಿಗೆ ಸೂಚಿಸಲಾಯಿತು.
ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸುವುದು, ಹಂದಿಗಳನ್ನು ಪಟ್ಟಣದಿಂದ ಹೊರಗೆ ಸಾಗಿಸುವುದು, ಪರಿಶಿಷ್ಟ ವರ್ಗದ ವಿದ್ಯಾರ್ಥಿ ನಿಲಯಕ್ಕೆ ನಿವೇಶನ ಒದಗಿಸುವುದು, ಅಗತ್ಯ ಇರುವ ಕಡೆ ಅಂಗನವಾಡಿ ಕಟ್ಟಡ ನಿರ್ಮಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಶೋಕ್, ಉಪಾಧ್ಯಕ್ಷ ಕೆ.ಸಿ.ರಮೇಶ್, ಸದಸ್ಯರಾದ ನಾಗರತ್ನಾ ವೇದಮೂರ್ತಿ, ಪಿ.ಆರ್.ಮಲ್ಲಿಕಾರ್ಜುನ, ಡಿ.ಎಸ್.ವಿಜಯ, ಬಿ.ಎಸ್.ರುದ್ರಪ್ಪ, ವಿಜಯಸಿಂಹ ಖಾಟ್ರೋತ್, ಮಮತಾ ಜಯಸಿಂಹ ಖಾಟ್ರೋತ್, ಪಿ.ಎಚ್.ಮುರುಗೇಶ್, ಶಬೀನ ಅಶ್ರಫ್‌ವುಲ್ಲಾ, ಸೈಯದ್ ಸಜೀಲ್, ಸೈಯದ್ ಮನ್ಸೂರ್, ಪೂರ್ಣಿಮಾ ಬಸವರಾಜ್, ಸುಧಾ ಬಸವರಾಜ, ಸವಿತಾ ನರಸಿಂಹ ಖಾಟ್ರೋತ್, ಬಿ.ವಸಂತಾ ರಾಜಪ್ಪ, ಮುಖ್ಯಾಧಿಕಾರಿ ಎ.ವಾಸಿಂ ಇದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.