ಗುರುವಾರ , ಆಗಸ್ಟ್ 5, 2021
21 °C
96ರ ಇಳಿ ವಯಸ್ಸಿನಲ್ಲೂ ಕೊರೊನಾ ಸೋಂಕಿನಿಂದ ಗುಣಮುಖರಾದ ವೃದ್ದೆ

ಕೋವಿಡ್‌ ಗೆದ್ದ ಚಿತ್ರದುರ್ಗದ 96ರ ಅಜ್ಜಿ ಮತ್ತು ಇಡೀ ಕುಟುಂಬದ ಕತೆ ಇದು...

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ‘ಪತಿ, ಪುತ್ರನಿಗೆ ಸೋಂಕು ಬಂದಾಗ ಸಹಜವಾಗಿಯೇ ಆತಂಕವಾಗಿತ್ತು. 96 ವರ್ಷದ ಅತ್ತೆಗೆ ಜ್ವರ ಬಾಧಿಸಿತು. ಗಂಟಲು ಮಾದರಿ ಪರೀಕ್ಷಿಸಿದಾಗ ನನಗೂ ಸೋಂಕು ಅಂಟಿದ್ದು ಖಚಿತವಾಯಿತು. ಸೋಂಕು ಎದುರಿಸಲು ಅಗತ್ಯವಿರುವ ಮಾನಸಿಕ ಸಿದ್ಧತೆ ಮಾಡಿಕೊಂಡು ಆಸ್ಪತ್ರೆ ಸೇರಿದೆ. ಧೈರ್ಯವಿದ್ದರೆ ಸೋಂಕು ಏನೂ ಮಾಡದು...’

ಹಿರಿಯೂರಿನ 58 ವರ್ಷದ ಮಹಿಳೆಯ ಖಚಿತ ನುಡಿ ಇದು. 96 ವರ್ಷದ ಅತ್ತೆಯೊಂದಿಗೆ ಕೋವಿಡ್‌ ಆಸ್ಪತ್ರೆ ಸೇರಿದ್ದ ಇವರು, ಜುಲೈ 6ರಂದು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇಡೀ ಕುಟುಂಬಕ್ಕೆ ಕೋವಿಡ್‌ ಅಂಟಿದರೂ ಇವರ ಜೀವನಸ್ಫೂರ್ತಿಯನ್ನು ಕುಂದಿಸಲು ಕೊರೊನಾ ಸೋಂಕಿಗೆ ಸಾಧ್ಯವಾಗಿಲ್ಲ.

ವೈದ್ಯರೊಬ್ಬರ ಸಂಪರ್ಕದಿಂದ ಮಹಿಳೆಯ 27 ವರ್ಷದ ಪುತ್ರನಿಗೆ ಸೋಂಕು ಕಾಣಿಸಿಕೊಂಡಿತ್ತು. 64 ವರ್ಷದ ಪತಿಗೆ ಜುಲೈ 23ರಂದು ಕೋವಿಡ್‌ ಇರುವುದು ದೃಢಪಟ್ಟಿತ್ತು. ಮನೆಯಲ್ಲೇ ಇದ್ದ ತಂಗಿಯ 19 ವರ್ಷದ ಮಗನಲ್ಲೂ ಸೋಂಕು ಪತ್ತೆಯಾಗಿತ್ತು. ಧರ್ಮಪುರ ಕೋವಿಡ್‌ ಕೇರ್‌ ಸೆಂಟರ್‌ಗೆ ಇಬ್ಬರು ಪುತ್ರರು ಹಾಗೂ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಪತಿ ದಾಖಲಾಗಿದ್ದರು.

‘ಅತ್ತೆಗೆ ಮೈಬಿಸಿಯಾಗಿ ಸೋಂಕಿನ ಲಕ್ಷಣ ಕಾಣಿಸಿಕೊಂಡಿತ್ತು. ಆದರೆ, ನನ್ನಲ್ಲಿ ಯಾವುದೇ ಲಕ್ಷಣಗಳು ಗೋಚರಿಸಲೇ ಇಲ್ಲ. ಸೋಂಕು ಇದೆ ಎಂಬ ವರದಿಯನ್ನು ಆರಂಭದಲ್ಲಿ ನಂಬಲು ಸಾಧ್ಯವಾಗಲಿಲ್ಲ. ಮನಸು ದೃಢ ಮಾಡಿಕೊಂಡು ಕೋವಿಡ್‌ ಆಸ್ಪತ್ರೆ ಸೇರಿದೆ. ಅತ್ತೆ ಹಾಗೂ ನಾನು ಒಂದೇ ಕೊಠಡಿಯಲ್ಲಿ ಚಿಕಿತ್ಸೆಗೆ ದಾಖಲಾದೆವು. ಒಂದೆಡೆ ಇರುವುದು ಕಷ್ಟವಾಯಿತು. ದಿನ ಕಳೆದಂತೆ ರೂಢಿ ಆಯಿತು’ ಎಂದು ಮಹಿಳೆ ಅನುಭವ ಹಂಚಿಕೊಂಡರು.

ಜುಲೈ 25ರಂದು ಅತ್ತೆ–ಸೊಸೆ ಆಸ್ಪತ್ರೆಗೆ ದಾಖಲಾಗಿದ್ದರು. ನಿತ್ಯ ಬೆಳಿಗ್ಗೆ ಹಾಗೂ ರಾತ್ರಿ ಇಬ್ಬರಿಗೂ ಮಾತ್ರ ನೀಡಲಾಗುತ್ತಿತ್ತು. ಆಸ್ಪತ್ರೆ ಸಿಬ್ಬಂದಿ ನಿತ್ಯ ಕೊಠಡಿಗೆ ಧಾವಿಸಿ ಆರೋಗ್ಯ ಪರೀಕ್ಷಿಸುತ್ತಿದ್ದರು. ಏಳನೇ ದಿನ ಮತ್ತೊಮ್ಮೆ ಗಂಟಲು ದ್ರವದ ಮಾದರಿ ಪಡೆದು ಪರೀಕ್ಷಿಸಿದಾಗ ಸೋಂಕು ಕಾಣಿಸಿಕೊಳ್ಳಲಿಲ್ಲ. ಮತ್ತೆರಡು ದಿನ ನಿಗಾದಲ್ಲಿ ಇಟ್ಟುಕೊಂಡ ವೈದ್ಯರು, ಬಳಿಕ ಮನೆಗೆ ಕಳುಹಿಸಿದರು. 96 ವರ್ಷದ ವೃದ್ದೆ ಕೋವಿಡ್‌ ಗೆದ್ದಿರುವುದು ಆರೋಗ್ಯ ಇಲಾಖೆ ಸಿಬ್ಬಂದಿಯಲ್ಲಿ ಸ್ಫೂರ್ತಿ ತುಂಬಿದೆ.

‘ನಿತ್ಯ ಬೆಳಿಗ್ಗೆ ಬೇಗ ಏಳುತ್ತಿದ್ದೆವು. ಸಮಯಕ್ಕೆ ಸರಿಯಾಗಿ ಟೀ, ಕಾಫಿ, ತಿಂಡಿ ಹಾಗೂ ಊಟ ಬರುತ್ತಿತ್ತು. ಸಂಬಂಧಿಕರು, ಸ್ನೇಹಿತರು ದೂರವಾಣಿ ಕರೆ ಮಾಡಿ ವಿಚಾರಿಸುತ್ತಿದ್ದರು. ಇದರಿಂದ ಬೇಸರ, ಒಂಟಿತನ ಕಳೆಯಲು ಸಾಧ್ಯವಾಯಿತು. ಅತ್ತೆಯ ಆರೋಗ್ಯವೂ ಸುಧಾರಿಸಿತು. ರಕ್ತದೊತ್ತಡವಿದ್ದರೂ ಯಾವುದೇ ತೊಂದರೆ ಇಲ್ಲದೇ ಗುಣಮುಖರಾದರು’ ಎಂದು ಮಹಿಳೆ ಸಂತಸ ವ್ಯಕ್ತಪಡಿಸಿದರು.

‘ಟಿ.ವಿ. ನೋಡಿ ದಿಗಿಲಾಗಿತ್ತು’

‘ಕೊರೊನಾ ಸೋಂಕಿನ ಬಗ್ಗೆ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿದ್ದ ವರದಿ, ವಿಶ್ಲೇಷಣೆ ನೋಡಿ ನಿಜಕ್ಕೂ ದಿಗಿಲಾಗಿತ್ತು. ಆದರೆ, ದಿನ ಕಳೆದಂತೆ ಆಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆ ಭೀತಿಯನ್ನು ಹೋಗಲಾಡಿಸಿತು’ ಎನ್ನುತ್ತಾರೆ ವೃದ್ದೆಯ 64 ವರ್ಷದ ಪುತ್ರ.

ಹಿರಿಯೂರಿನಲ್ಲಿ ಪ್ರಾವಿಜನ್‌ ಸ್ಟೋರ್‌ ಹೊಂದಿರುವ ಇವರು, ಪುತ್ರನ ಪ್ರಾಥಮಿಕ ಸಂಪರ್ಕಿತರು. ಟೈಫಡ್‌ ಜ್ವರದ ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಿದ್ದ ಪುತ್ರನೊಂದಿಗೆ ಇವರೂ ಇದ್ದರು. ವೈದ್ಯರಿಂದ ಪುತ್ರನಿಗೆ ಸೋಂಕು ಬಂದಿತ್ತು.

‘ಸೋಂಕು ಬಂದರೆ ಬದುಕು ಮುಗಿದೇ ಹೋಯಿತು ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ಇದೊಂದು ಸಾಮಾನ್ಯ ಕಾಯಿಲೆ. ಸೋಂಕು ಕಾಣಿಸಿಕೊಂಡವರು ಖಂಡಿತ ಹೆದರುವ ಅಗತ್ಯವಿಲ್ಲ. ಸಕಾಲಕ್ಕೆ ಚಿಕಿತ್ಸೆ ಪಡೆದರೆ ಗುಣಮುಖರಾಗಿ ಮನೆಗೆ ಮರಳಬಹುದು’ ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು