ಬುಧವಾರ, ನವೆಂಬರ್ 25, 2020
26 °C
ಎಂ.ಜಯಣ್ಣ ಅವರ ಅಂತಿಮ ದರ್ಶನ ಪಡೆದ ಸಾವಿರಾರು ಅಭಿಮಾನಿಗಳು

ದಲಿತ ನೇತಾರನಿಗೆ ಭಾವಪೂರ್ವ ವಿದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ದಲಿತ ಚಳವಳಿಯ ನೇತಾರ ಹಾಗೂ ನೀರಾವರಿ ಹೋರಾಟಗಾರ ಎಂ.ಜಯಣ್ಣ ಅವರಿಗೆ ಮಂಗಳವಾರ ಭಾವಪೂರ್ಣ ನಮನ ಸಲ್ಲಿಸಲಾಯಿತು. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಚಿತ್ರದುರ್ಗ ಸಮೀಪದ ಕ್ಯಾದಿಗೇರೆಯಲ್ಲಿ ಅಂತ್ಯಕ್ರಿಯೆ ನೆರವೇರಿತು.

ಬೆಂಗಳೂರಿನ ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧರಾಗಿದ್ದ ಜಯಣ್ಣ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಬೆಳಿಗ್ಗೆ ಚಿತ್ರದುರ್ಗಕ್ಕೆ ತರಲಾಯಿತು. ಕೆಎಚ್‌ಬಿ ಕಾಲೊನಿಯ ನಿವಾಸದಲ್ಲಿ ಕೆಲ ಕಾಲ ಇಡಲಾಯಿತು. ಕುಟುಂಬದ ಸದಸ್ಯರ ಅಂತಿಮ ವಿಧಿವಿಧಾನಗಳು ಮುಗಿದ ಬಳಿಕ ಒನಕೆ ಓಬವ್ವ ವೃತ್ತದಲ್ಲಿ ಸಾರ್ವಜನಿಕ ದರ್ಶನಕ್ಕ ವ್ಯವಸ್ಥೆ ಕಲ್ಪಿಸಲಾಯಿತು.

ರಾಜ್ಯದ ಹಲವೆಡೆಯಿಂದ ಬಂದಿದ್ದ ಸಾವಿರಾರು ಅಭಿಮಾನಿಗಳು ಹೋರಾಟಗಾರನ ದರ್ಶನ ಪಡೆದು ಭಾವುಕರಾದರು. ಹೋರಾಟದ ದಿನ ಗಳನ್ನು ಸ್ಮರಿಸಿ ಮೌನಕ್ಕೆ ಶರಣಾದರು. ದಲಿತ ಚಳವಳಿಯ ನೇತಾರರೊಬ್ಬರು ಅಗಲಿದ ನೋವು ಪ್ರತಿಯೊಬ್ಬರ ಮುಖದಲ್ಲಿ ಇಣುಕುತ್ತಿತ್ತು. ಭಾರವಾದ ಹೃದಯದೊಂದಿಗೆ ಬಂದಿದ್ದ ಅಭಿಮಾನಿ ಗಳ ಕಣ್ಣಂಚಲ್ಲಿ ನೀರು ಜಿನುಗುತ್ತಿತ್ತು.

ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ‘ಚಿತ್ರದುರ್ಗ ಜಿಲ್ಲೆ ಪ್ರಾಮಾಣಿಕ ಹೋರಾಟಗಾರ ರೊಬ್ಬರನ್ನು ಕಳೆದುಕೊಂಡಿದೆ. ಹೋರಾಟದ ಕನಸು ಗಳನ್ನು ಕಟ್ಟಿಕೊಂಡಿದ್ದ ಜಯಣ್ಣ ಅವರು ಸಿದ್ಧಾಂತ ಬಿಟ್ಟು ರಾಜಿಯಾಗಲಿಲ್ಲ. ಬಡವರು, ಶೋಷಿತರ ಏಳಿಗೆಗೆ ಅವರು ಸದಾ ಮಿಡಿಯುತ್ತಿದ್ದರು. ಪಕ್ಷ, ಸಿದ್ಧಾಂತ ಬೇರೆಯಾದರೂ ಸ್ನೇಹಕ್ಕೆ ಕೊರತೆ ಇರಲಿಲ್ಲ’ ಎಂದು ಹೇಳಿದರು.

‘ಅಧಿಕಾರದಲ್ಲಿದ್ದ ಎಲ್ಲ ಪಕ್ಷಗಳನ್ನು ಅವರು ಪ್ರಶ್ನಿಸುತ್ತಿದ್ದರು. ನೀರಾವರಿ ಬಗ್ಗೆ ಅಪಾರ ಒಲವು ಹೊಂದಿ ಚಳವಳಿ ರೂಪಿಸಿದರು. ಬರದ ನಾಡಿಗೆ ನೀರು ತರುವ ಅವರ ಹಠ ಸಾರ್ಥಕವಾಗಿದೆ. ನಿರಂತರ ಪರಿಶ್ರಮದ ಫಲವಾಗಿ ಜಿಲ್ಲೆಗೆ ಭದ್ರಾ ನೀರು ಹರಿದು ಬಂದಿದೆ’ ಎಂದು ಸ್ಮರಿಸಿದರು.

ಮಾಜಿ ಸಚಿವ ಎಚ್‌.ಆಂಜನೇಯ ಮಾತನಾಡಿ, ‘ಜಯಣ್ಣ ಅವರು ಸಮರ್ಪಣಾ ಭಾವ ಹೊಂದಿದ್ದರು. ಪೌರಕಾರ್ಮಿಕ ಚಳವಳಿಯ ಮೂಲಕ ಹೋರಾಟದ ಸಾಗರಕ್ಕೆ ಧುಮುಕಿದರು. ಬಿ.ಆರ್.ಅಂಬೇಡ್ಕರ್, ಪ್ರೊ.ಬಿ.ಕೃಷ್ಣಪ್ಪ ಅವರ ಸಿದ್ಧಾಂತದಲ್ಲಿ ಅಪಾರ ನಂಬಿಕೆ ಹೊಂದಿದ್ದರು. ಕಾನ್ಷಿರಾಂ ಅವರ ಪ್ರಭಾವಕ್ಕೆ ಒಳಗಾಗಿದ್ದ ಅವರು ಚಿತ್ರದುರ್ಗದ ಅಂಬೇಡ್ಕರ್‌ ಎಂಬಂತೆ ಮನ ಗೆದ್ದಿದ್ದರು’ ಎಂದು ಸ್ಮರಿಸಿದರು.

‘ಜಯಣ್ಣ ಅವರ ಹೋರಾಟವನ್ನು ಮುಂದಿನ ಪೀಳಿಗೆಗೆ ಮನದಟ್ಟು ಮಾಡಬೇಕಿದೆ. ಅವರ ಅಂತ್ಯಕ್ರಿಯೆ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡುವ ಅಗತ್ಯವಿದೆ. ನಾನು ಒಂದು ಎಕರೆ ಹಾಗೂ ಸಂಸದ ಎ.ನಾರಾಯಣಸ್ವಾಮಿ ಒಂದು ಎಕರೆ ಭೂಮಿ ನೀಡಲು ಒಪ್ಪಿದ್ದೇವೆ’ ಎಂದು ಪ್ರಕಟಿಸಿದರು.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಮಾತನಾಡಿ, ‘ಜಯಣ್ಣ ಅವರೊಂದಿಗೆ ಐದೂವರೆ ದಶಕದ ಒಡನಾಟವಿದೆ. ಯಾರಿಗೂ ನೋವುಂಟು ಮಾಡದಂತಹ ವ್ಯಕ್ತಿತ್ವ ಅವರದು. ಶೋಷಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು, ಜೀವನವನ್ನು ಹೋರಾಟಕ್ಕೆ ಮುಡಿಪಾಗಿಟ್ಟರು. ಇದರಿಂದ ಅವರ ಆರೋಗ್ಯ ಕ್ಷೀಣಿಸಿತು. ಅವರ ಸ್ಮಾರಕ ನಿರ್ಮಾಣದ ಜವಾಬ್ದಾರಿಯನ್ನು ಶಾಸಕನಾಗಿ ನಾನು ಹೋರುತ್ತೇನೆ’ ಎಂದು ಹೇಳಿದರು. 

***

ಎರಡು ಎಕರೆಯಲ್ಲಿ ಸ್ಮಾರಕ

ಹೋರಾಟಗಾರ ಎಂ.ಜಯಣ್ಣ ಅವರ ಅಂತ್ಯಕ್ರಿಯೆ ನೆರವೇರಿದ ಚಿತ್ರದುರ್ಗ ತಾಲ್ಲೂಕಿನ ಕ್ಯಾದಿಗೇರೆಯ ಎರಡು ಎಕರೆ ಭೂಮಿಯಲ್ಲಿ ಸ್ಮಾರಕ ನಿರ್ಮಿಸಲು ಒಡನಾಡಿಗಳು ಮಂಗಳವಾರ ಒಮ್ಮತದ ತೀರ್ಮಾನ ಕೈಗೊಂಡರು.

ಜಯಣ್ಣ ಅವರ ಅಂತ್ಯಕ್ರಿಯೆಯನ್ನು ಅಗಸನಕಲ್ಲು ಬಡಾವಣೆಯಲ್ಲಿ ನೆರವೇರಿಸಲು ಕುಟುಂಬ ತೀರ್ಮಾನಿಸಿತ್ತು. ಇದಕ್ಕೆ ಸಿದ್ಧತೆ ಕೂಡ ಮಾಡಿಕೊಂಡಿತ್ತು. ಒನಕೆ ಓಬವ್ವ ವೃತ್ತಕ್ಕೆ ಪಾರ್ಥಿವ ಶರೀರ ತಂದ ಬಳಿಕ ತೀರ್ಮಾನ ಬದಲಾಯಿತು. ಮಾಜಿ ಸಚಿವ ಎಚ್‌.ಆಂಜನೇಯ ಹಾಗೂ ಸಂಸದ ಎ.ನಾರಾಯಣಸ್ವಾಮಿ ಅವರು ಭೂಮಿ ನೀಡುವುದಾಗಿ ಪ್ರಕಟಿಸಿದರು.

ಸ್ಮಾರಕ ನಿರ್ಮಾಣದ ಹೊಣೆ ಹೊರಲು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಮುಂದೆ ಬಂದರು. ಅಗತ್ಯ ನೆರವು ನೀಡುವುದಾಗಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಆಶ್ವಾಸನೆ ನೀಡಿದರು. ಇದಕ್ಕೆ ಕುಟುಂಬ ವರ್ಗ ಹಾಗೂ ಅಭಿಮಾನಿಗಳು ಒಪ್ಪಿಗೆ ಸೂಚಿಸಿದರು.

***

ಕಂಬನಿ ಮಿಡಿದ ಗಣ್ಯರು

ಶಿವಮೂರ್ತಿ ಮುರುಘಾ ಶರಣರು, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಬಸವನಾಗಿದೇವ ಸ್ವಾಮೀಜಿ, ಮಾರ್ಕಂಡೇಯ ಮುನಿ ಸ್ವಾಮೀಜಿ, ಹರಳಯ್ಯ ಸ್ವಾಮೀಜಿ, ಆದಿಜಾoಬವ ಮಠದ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಜಯಣ್ಣ ಅವರ ನಿಧನಕ್ಕೆ ಕಂಬನಿ ಮಿಡಿದರು.

ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ, ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ರಾಜ್ಯ ದಲಿತ ಮುಖಂಡರಾದ ಮಾರಸಂದ್ರ ಮುನಿಯಪ್ಪ, ವೆಂಕಟಸ್ವಾಮಿ, ಶಿವಮೊಗ್ಗ ಗುರುಮೂರ್ತಿ, ಪ್ರೊ.ಸಿ.ಕೆ.ಮಹೇಶ್‌ ಸೇರಿ ಅನೇಕರು ಅಂತಿಮ ದರ್ಶನ ಪಡೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು