ಶನಿವಾರ, ಜುಲೈ 2, 2022
25 °C
ಹಿರಿಯೂರು ತಾಲ್ಲೂಕಿನ ಕಸ್ತೂರಿರಂಗಪ್ಪನಹಳ್ಳಿ

ಹಿರಿಯೂರು: ತಪಸ್ವಿಗಳಂತೆ ಕೃಷಿಯಲ್ಲಿ ತೊಡಗಿರುವ ದಂಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ಹಿರಿಯೂರಿನಿಂದ ಬೆಂಗಳೂರು ಕಡೆ ಹೋಗುವಾಗ ಕಸ್ತೂರಿರಂಗಪ್ಪನಹಳ್ಳಿ ಗೇಟ್‌ನಲ್ಲಿ ಎಡಕ್ಕೆ ತಿರುಗಿ ಎರಡೂವರೆ ಕಿ.ಮೀ. ಕ್ರಮಿಸಿದರೆ ಸುಮಾರು ನಲವತ್ತು ಎಕರೆ ಪ್ರದೇಶದಲ್ಲಿ ತಪಸ್ವಿಗಳ ಹಾಗೆ ತೋಟಗಾರಿಕೆ ಬೆಳೆಗಳ ನಡುವೆ ಶ್ರೀಗಂಧದ ಸಸಿಗಳನ್ನು ಬೆಳೆಸಿರುವ ದಂಪತಿಯ ಕೆಲಸ ಅಚ್ಚರಿ ಮೂಡಿಸುತ್ತದೆ.

ರಾಮಣ್ಣ ಮತ್ತು ಪಂಕಜ ದಂಪತಿ 40 ಎಕರೆ ಜಮೀನು ಖರೀದಿಸಿ, ಅದರಲ್ಲಿ ತೆಂಗು, ಅಡಿಕೆ, ಕರಿಬೇವು, ಬೇಲ, ನೆಲ್ಲಿ, ಜಂಬುನೇರಳೆ, ಮಾವು, ಆಮ್ಲ ಗಿಡಗಳ ಜೊತೆ ಶ್ರೀಗಂಧ, ರಕ್ತಚಂದನ, ತೇಗ, ಬೇವಿನ ಗಿಡಗಳನ್ನು ಬೆಳೆಸಿದ್ದಾರೆ. ತೋಟ ನೋಡಲು ಹೋದವರಿಗೆ ಪುಟ್ಟ ಅರಣ್ಯ ಹೊಕ್ಕ ಅನುಭವ ಆಗುತ್ತದೆ.

‘ತಿರುಪತಿ ಸಮೀಪದ ರೈಲ್ವೆ ಕೋಡೂರಿನಿಂದ ಮೂರೂವರೆ ವರ್ಷಗಳ ಹಿಂದೆ 12 ಸಾವಿರ ಶ್ರೀಗಂಧದ ಸಸಿ ತಂದು ನಾಟಿ ಮಾಡಿದ್ದೆ. ತೋಟಕ್ಕೆ ತರುವ ವೇಳೆಗೆ ಪ್ರತಿ ಸಸಿಗೆ ₹ 22 ವೆಚ್ಚವಾಗಿತ್ತು. ಶ್ರೀಗಂಧ ಪರಾವಲಂಬಿ ಗಿಡ. ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಹಾಕಿದಲ್ಲಿ ಚೆನ್ನಾಗಿ ಬರುತ್ತದೆ. ಇಲ್ಲವಾದಲ್ಲಿ ಬೇವು, ಹೊಂಗೆ, ಕರಿಬೇವು ಗಿಡಗಳನ್ನು ಶ್ರೀಗಂಧದ ಜೊತೆ ನಾಟಿ ಮಾಡಬೇಕು’ ಎನ್ನುತ್ತಾರೆ ರಾಮಣ್ಣ.

‘ಬಯಲುಸೀಮೆಗೆ ಶ್ರೀಗಂಧ ಹೇಳಿ ಮಾಡಿಸಿದ ಬೆಳೆ. ಹೆಚ್ಚು ನೀರು ಬಯಸುವುದಿಲ್ಲ. ಮೊದಲ ಮೂರು ವರ್ಷ ನೀರು ಕೊಟ್ಟರೆ ಸಾಕು. ನಂತರ ತಾನೇ ಬೆಳೆಯುತ್ತದೆ. ಈ ಮರಗಳು ಹಲವು ರೀತಿಯ ಪಕ್ಷಿಗಳಿಗೆ ಆಶ್ರಯ ನೀಡುತ್ತವೆ. ಬೇರೆ ಮರಗಿಡಗಳಿಗೆ ಹೋಲಿಸಿದರೆ ಇವು ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕ ಬಿಡುಗಡೆ ಮಾಡುತ್ತವೆ. ಈ ಬೆಳೆ ನಮ್ಮ ರಾಜ್ಯದಲ್ಲಿ ಬಂದಂತೆ ಬೇರೆಲ್ಲೂ ಬರುವುದಿಲ್ಲ’ ಎಂದು ರಾಮಣ್ಣ ಅವರು ವಿವರಿಸಿದರು.

ಅರಣ್ಯ ಇಲಾಖೆಯಿಂದ ಮುಕ್ತಗೊಳಿಸಬೇಕು: ‘ಪ್ರಸ್ತುತ ಶ್ರೀಗಂಧವನ್ನು ಅರಣ್ಯ ಬೆಳೆ ಎಂದು ಪರಿಗಣಿಸಿ ಅರಣ್ಯ ಕಾಯ್ದೆಯಡಿ ಇಟ್ಟಿದೆ. ರೈತರು ತಮ್ಮ ಜಮೀನುಗಳಲ್ಲಿ ಇತರೆ ತೋಟಗಾರಿಕೆ ಬೆಳೆಗಳಂತೆ ಶ್ರೀಗಂಧ ಬೆಳೆಯುತ್ತಿರುವ ಕಾರಣ ಇದನ್ನು ತೋಟಗಾರಿಕೆ ಬೆಳೆ ಎಂದು ಘೋಷಿಸಿ, ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ತರಬೇಕು. ರೈತರು ಶ್ರೀಗಂಧ ಬೆಳೆಯಲು ಅನುಮತಿ ನೀಡಿರುವ ಸರ್ಕಾರ, ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಗೆ ಮಾರಾಟ ಮಾಡಲು ಕಾನೂನಿನ ತೊಡಕಿದೆ. ಗಂಧದ ತುಂಡುಗಳನ್ನು ವಿಭಜನೆ ಮಾಡುವಾಗ ಅರಣ್ಯ ಇಲಾಖೆ ರೈತರಿಗೆ ವಂಚಿಸುತ್ತಿದೆ. ನಮಗೆ ಇಲಾಖೆಯ ಪ್ರೋತ್ಸಾಹ ಸಿಗದಿದ್ದರೆ ಬೇಡ. ಕಿರಿಕಿರಿ ನಿಲ್ಲಬೇಕು. ನಿವೃತ್ತ ಜಿಲ್ಲಾಧಿಕಾರಿ ಕೆ. ಅಮರನಾರಾಯಣ ಅಧ್ಯಕ್ಷತೆಯಲ್ಲಿ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಒಕ್ಕೂಟ ರಚಿಸಿಕೊಂಡು ಹೋರಾಟ ನಡೆಸುತ್ತಿದ್ದೇವೆ’ ಎಂದು ತಿಳಿಸಿದರು.

ಬೇಡಿಕೆ: ಶ್ರೀಗಂಧ ಬೆಳೆಯಲು ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಸಾಲದ ವ್ಯವಸ್ಥೆ ಆಗಬೇಕು. ಇತರೆ ತೋಟಗಾರಿಕೆ ಬೆಳೆಗಳಂತೆ ಶ್ರೀ ಗಂಧವನ್ನೂ ವಿಮಾ ವ್ಯಾಪ್ತಿಗೆ ಒಳಪಡಿಸಬೇಕು. ಬೆಳೆಗಾರರಿಗೆ ಪ್ರೋತ್ಸಾಹಧನ, ಸಸಿಗಳನ್ನು ಪೂರೈಸಬೇಕು. ಶ್ರೀಗಂಧ–ರಕ್ತಚಂದನ–ಬಿದಿರು ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ತೆಂಗು ಉತ್ಪಾದಕ ಕಂಪನಿಗಳ ರೀತಿಯಲ್ಲಿ ಇವುಗಳಿಗೂ ಉತ್ಪಾದಕರ ಕಂಪನಿ ಆರಂಭಿಸಲು ಅನುಮತಿ ಮತ್ತು ಉತ್ತೇಜನ ನೀಡಬೇಕು. ಸಂಶೋಧನೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮತ್ತು ಮುಕ್ತ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ತೋಟಗಳ ರಕ್ಷಣೆಗೆ ರೈತರಿಗೆ ಗನ್ ಬಳಸಲು ಪರವಾನಗಿ ಕೊಡಿಸಬೇಕು. ಹೀಗಾದರೆ ಲಕ್ಷಾಂತರ ರೈತರು ಶ್ರೀಗಂಧ ಕೃಷಿಯತ್ತ ಆಕರ್ಷಿತರಾಗುತ್ತಾರೆ’ ಎಂದು ರಾಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಮಣ್ಣ ಅವರ ಸಂಪರ್ಕಕ್ಕೆ: 98445–57570

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು