ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಜಾಜೂರು: ಅಂತರ ಬೆಳೆಯಲ್ಲೂ ಲಾಭ ಕಂಡುಕೊಂಡ ರೈತ

ಅಧಿಕ ಮಳೆಯಲ್ಲೂ ಮೆಣಸಿನ ಕಾಯಿ ಕೃಷಿ ಮಾಡಿದ ನಾಗರಾಜ್‌
Last Updated 31 ಆಗಸ್ಟ್ 2022, 4:56 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಅಂತರ ಬೆಳೆಯಲ್ಲಿ ಲಾಭವನ್ನು ನಿರೀಕ್ಷೆ ಮಾಡುವವರು ಕಡಿಮೆ. ಆದರೆ, ಒಂದು ಎಕರೆ ಜಮೀನಿನಲ್ಲಿ ಅಂತರ ಬೆಳೆಗಳನ್ನು ಬೆಳೆದು ಲಾಭ ಕಂಡುಕೊಂಡಿದ್ದಾರೆ ಸಮೀಪದ ಕಾಳಘಟ್ಟ ಗ್ರಾಮದ ರೈತ ನಾಗರಾಜ್‌.

4 ಎಕರೆ ಜಮೀನಿನಲ್ಲಿ ಒಂದು ಎಕರೆಯಲ್ಲಿ ಅಡಿಕೆ ಸಸಿ, ಉಳಿದ 3 ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಅಡಿಕೆಗೆ ನೆರಳಾಗಲಿ ಎಂದು ಅಂತರ ಬೆಳೆಯಾಗಿ ಬಾಳೆ ಸಸಿಗಳನ್ನೂ ನಾಟಿ ಮಾಡಿದ್ದಾರೆ. ಅಡಿಕೆ ಸಸಿಗಳ ಮಧ್ಯೆ ಎಂಟು ಅಡಿ ಅಂತರವಿರುವ ಖಾಲಿ ಜಾಗದಲ್ಲೇ ಎರಡು ಸಾಲು ಮೆಣಸಿನಕಾಯಿ ಸಸಿಗಳನ್ನು ನಾಟಿ ಮಾಡಿದ್ದಾರೆ.

‘ದಾವಣಗೆರೆಯ ಗ್ಯಾಸ್‌ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಈ ವೇಳೆ ಜಮೀನಿನಲ್ಲಿ ಕೊಳವೆ ಬಾವಿಯನ್ನು ಕೊರೆಸಿದೆ. ಈಗ ಉತ್ತಮ ನೀರು ಬಂದಿದೆ. ಇದರಿಂದಾಗಿ ಕೆಲಸ ಬಿಟ್ಟು ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಅಡಿಕೆ ಹಾಗೂ ಬಾಳೆ ಸಸಿಗಳು ಉತ್ತಮವಾಗಿ ಬೆಳೆದಿವೆ. ಕೈ ಖರ್ಚಿಗೆ ಇರಲಿ ಎಂದು ಮೆಣಸಿನ ಸಸಿಗಳನ್ನು ತಂದು ಅಂತರ ಬೆಳೆಯಾಗಿ ನಾಟಿ ಮಾಡಿದೆ’ ಎಂದು ರೈತ ನಾಗರಾಜ್‌ ತಿಳಿಸಿದರು.

‘ಮೇ ತಿಂಗಳಿನಲ್ಲಿ ನಾಟಿ ಮಾಡಲು 5,500 ಮೆಣಸಿನ ಸಸಿಗಳು, ಸಾಲು ಮಾಡಲು, ತಳಗೊಬ್ಬರ ಹಾಗೂ ಕೂಲಿ ಕಾರ್ಮಿಕರಿ ಗಾಗಿ ಈವರೆಗೆ ₹16,000 ಖರ್ಚಾಗಿದೆ. ಮೇಲಿಂದ ಮೇಲೆ ಮಳೆ ಬಂದಿ ದ್ದರಿಂದ ಕಳೆ ಹೆಚ್ಚಾಗಿ ಬೆಳೆದಿತ್ತು. ಕಳೆ ತೆಗೆಸಿ, ಮೇಲು ಗೊಬ್ಬರವನ್ನು ಹಾಕಿದೆ. ಇದರಿಂದ ಸಸಿಗಳು ಹುಲುಸಾಗಿ ಬೆಳೆದವು’ ಎಂದು ಅವರು ಮಾಹಿತಿ ನೀಡಿದರು.

ಉತ್ತಮ ಇಳುವರಿ:‘ಆರಂಭದಿಂದಲೂ ಗಿಡದಲ್ಲಿ ಮೆಣಸಿನಕಾಯಿ ಚೆನ್ನಾಗಿ ಬಿಟ್ಟಿದ್ದು, ಜುಲೈ ತಿಂಗಳ ಕೊನೆಯಿಂದ ಮೆಣಸಿನಕಾಯಿ ಕೊಯಿಲು ಆರಂಭಿಸಿದೆ. ಮೊದಲ ಸಲ 60 ಕೆ.ಜಿ. ಕಾಯಿ ಸಿಕ್ಕಿದೆ. ದಾವಣಗೆರೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ₹ 25 ರಂತೆ ಮಾರಾಟ ಮಾಡಿದೆ. ನಂತರ, 6 ಕ್ವಿಂಟಲ್‌ ಅನ್ನು ₹ 30ರಂತೆ ಮಾರಾಟ ಮಾಡಿದೆ. ಕಳೆದ ವಾರ 7 ಕ್ವಿಂಟಲ್‌ನಷ್ಟು ಕೊಯ್ಲು ಮಾಡಿ 1 ಕೆ.ಜಿ.ಗೆ
₹ 40ರಂತೆ ಮಾರಾಟ ಮಾಡಿದ್ದೇನೆ. ಈವರೆಗೆ 15 ಕ್ವಿಂಟಲ್‌ನಷ್ಟು ಮಾರಾಟ ಮಾಡಿದ್ದೇನೆ. ಈಗ ಹೂವು ಈಚುಗಳಾಗುತ್ತಿದ್ದು, ಎರಡು, ಮೂರು ತಿಂಗಳು ಕೊಯಿಲು ಮಾಡುವೆ. ಇದೇ ರೀತಿ ಇಳುವರಿ ಮತ್ತು ಉತ್ತಮ ಬೆಲೆ ಸಿಕ್ಕಲ್ಲಿ ಉತ್ತಮ ಆದಾಯ ಬರುವ ನಿರೀಕ್ಷೆ ಇದೆ’ ಎಂದು ನಾಗರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT