ಸೋಮವಾರ, ಅಕ್ಟೋಬರ್ 25, 2021
26 °C
ಪಾತಾಳಕ್ಕಿಳಿದ ಧಾರಣೆಯಿಂದ ರೈತ ಕಂಗಾಲು

50 ಪ್ಯಾಕೆಟ್ ಈರುಳ್ಳಿ ಕೆರೆಗೆ ಸುರಿದ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೂರು(ಹೊಸದುರ್ಗ): ಮಾರುಕಟ್ಟೆಯಲ್ಲಿ ಈರುಳ್ಳಿ ಧಾರಣೆ ಪಾತಾಳಕ್ಕಿಳಿದಿರುವುದರಿಂದ ಕಂಗೆಟ್ಟ ತಾಲ್ಲೂಕಿನ ಬಾಗೂರು ಗ್ರಾಮದ ರೈತ ಮಾರುತಿ 60 ಕೆ.ಜಿ. ತೂಕದ 50 ಪ್ಯಾಕೆಟ್‌ ಈರುಳ್ಳಿಯನ್ನು ಭಾನುವಾರ ಕೆರೆಗೆ ಸುರಿದ್ದಾರೆ.

40 ವರ್ಷಗಳಿಂದಲೂ ಈರುಳ್ಳಿ ಬೆಳೆಯುತ್ತಿದ್ದು, ಎರಡು ವರ್ಷ ಉತ್ತಮ ಆದಾಯ ಗಳಿಸಿದ್ದರು. ಈ ಬಾರಿಯೂ ಉತ್ತಮ ಧಾರಣೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಎರಡೂವರೆ ಎಕರೆ ಎರೆ ಜಮೀನಿನಲ್ಲಿ ₹1.20 ಲಕ್ಷ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದರು. ಬೆಳೆ ಉತ್ತಮವಾಗಿಯೇ ಬಂದಿತ್ತು.

ಈ ಬಾರಿ ಸುಮಾರು ಒಂದೂವರೆ ತಿಂಗಳ ಕಾಲ ಮೋಡಕವಿದ ವಾತಾವರಣ ಇದ್ದಿದ್ದರಿಂದ ಬೆಳೆಯು ನುಲ್ಲೆರೋಗ, ಮಜ್ಜಿಗೆ ರೋಗ ಹಾಗೂ ಕೊಳೆರೋಗ ಬಾಧೆಗೆ ತುತ್ತಾಗಿತ್ತು. ಸಾವಿರಾರು ರೂಪಾಯಿ ಖರ್ಚು ಮಾಡಿ ಔಷಧ ಸಿಂಪಡಿಸಿ ಬೆಳೆ ಉಳಿಸಿಕೊಂಡಿದ್ದರು. ಕಟಾವಿಗೆ ಬಂದಿದ್ದ ಈರುಳ್ಳಿಯನ್ನು ಕಾರ್ಮಿಕರಿಗೆ ಕೂಲಿ ಕೊಟ್ಟು ಕೀಳಿಸಿದ್ದರು. ಕಿತ್ತಾಗ ಈರುಳ್ಳಿ ಚೆನ್ನಾಗಿಯೇ ಕಾಣಿಸುತ್ತಿತ್ತು. ಕೀಳಿಸಿದ್ದ ಈರುಳ್ಳಿಯಲ್ಲಿ 2 ಟ್ರ್ಯಾಕ್ಟರ್‌ ಲೋಡ್‌ ಮಾತ್ರ ಮನೆಯ ಹತ್ತಿರ ಏರಿಸಿಕೊಂಡು ಬಂದಿದ್ದರು. ಖಾಲಿ ಚೀಲ ತಂದು ಕಾರ್ಮಿಕರ ಸಹಾಯದಿಂದ ಕೋಯ್ಯಿಸಿ 60 ಕೆ.ಜಿ. ತೂಕದ 100 ಪ್ಯಾಕೆಟ್‌ ಸಿದ್ಧಪಡಿಸಿದ್ದರು. ಆದರೆ, ಮಾರುಕಟ್ಟೆಯಲ್ಲಿ ದರ ಕುಸಿತವಾಗಿತ್ತು.

‘ಮಾರುಕಟ್ಟೆಯಲ್ಲಿ ಒಂದು ಪಾಕೆಟ್‌ ಗುಣಮಟ್ಟದ ಈರುಳ್ಳಿಗೆ ₹300 ರಿಂದ ₹500ರವರೆಗೆ ಸಿಗುತ್ತದೆ. ಈ ದರಕ್ಕೆ ಈರುಳ್ಳಿ ಮಾರಾಟ ಮಾಡಿದರೆ ಬೆಳೆ ಬೆಳೆಯಲು ಖರ್ಚು ಮಾಡಿರುವ ಹಣವೂ ಸಿಗುವುದಿಲ್ಲ. ಇಂದಲ್ಲ ನಾಳೆ ಉತ್ತಮ ದರ ಸಿಗಬಹುದು ಎಂದು ಕಾಯುತ್ತಿದ್ದೆ. ಆದರೆ ಬೆಲೆ ಸಿಗಲಿಲ್ಲ’ ಎಂದು ರೈತ ಮಾರುತಿ ಅಳಲು ತೋಡಿಕೊಂಡರು.

ಮಾರುಕಟ್ಟೆಗೆ ಕೊಂಡೊಯ್ಯಲು ಸಿದ್ಧ ಇಟ್ಟಿದ್ದ 100 ಪ್ಯಾಕೆಟ್‌ ಈರುಳ್ಳಿಯಲ್ಲಿ ಒಂದು ವಾರದ ವೇಳೆಗೆ 50 ಪ್ಯಾಕೆಟ್‌ ಕೊಳೆತು ನಾರುತ್ತಿತ್ತು. ಗಬ್ಬು ವಾಸನೆ ತಾಳಲಾರದೇ ಮನನೊಂದು ಕೆರೆಯ ಅಂಗಳಕ್ಕೆ ಸುರಿಯುತ್ತಿದ್ದೇನೆ. ಇನ್ನೊಂದು ವಾರಕ್ಕೆ ಮನೆ ಬಳಿ ಇರುವ 50 ಪ್ಯಾಕೆಟ್‌ ಈರುಳ್ಳಿ ಏನಾಗುತ್ತೋ ಗೊತ್ತಿಲ್ಲ. ಈ ವರ್ಷ ಒಂದು ಪ್ಯಾಕೆಟ್ ಈರುಳ್ಳಿಯನ್ನೂ ಮಾರಾಟ ಮಾಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು