ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಸಂಕಷ್ಟದ ನಡುವೆ ಎಪಿಎಂಸಿಗೆ ಹೊಸರೂಪ

ನೆರವು ನೀಡುತ್ತಿದೆ ರೈಲ್ವೆ ಇಲಾಖೆ, ವಾಣಿಜ್ಯ ಸಂಕೀರ್ಣ ನಿರ್ಮಾಣ
Last Updated 5 ಮಾರ್ಚ್ 2021, 2:02 IST
ಅಕ್ಷರ ಗಾತ್ರ

ಚಿತ್ರದುರ್ಗ: ಸೆಸ್‌ ಇಳಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದರೂ ರೈಲ್ವೆ ಇಲಾಖೆಯ ನೆರವಿನಿಂದ ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಹೊಸರೂಪ ಪಡೆಯಲಿದೆ. ರೈಲು ಮಾರ್ಗದಲ್ಲಿ ನಡೆಯುತ್ತಿರುವ ವಿದ್ಯುದೀಕರಣ ಕಾಮಗಾರಿ ಎಪಿಎಂಸಿಗೆ ವರವಾಗಿ ಪರಿಣಮಿಸಿದೆ.

ಎಪಿಎಂಸಿ ಅಭಿವೃದ್ಧಿಗೆ ರೈಲ್ವೆ ಇಲಾಖೆ ಉದಾರ ನೆರವು ನೀಡಲು ಮುಂದೆ ಬಂದಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ಮೇಲ್ಸೇತುವೆ ನಿರ್ಮಾಣ ಸೇರಿ ₹ 15 ಕೋಟಿ ವೆಚ್ಚದ ಕಾಮಗಾರಿ ನಡೆಸುವುದಾಗಿ ವಾಗ್ದಾನ ಮಾಡಿದೆ. ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿ ಎಪಿಎಂಸಿ ಹಾಗೂ ರೈಲ್ವೆ ಇಲಾಖೆಯ ನಡುವೆ ಒಡಂಬಡಿಕೆ ಏರ್ಪಟ್ಟಿದೆ. ವರ್ಷಾಂತ್ಯಕ್ಕೆ ಎಪಿಎಂಸಿ ಚಿತ್ರಣ ಬದಲಾಗುವ ಸಾಧ್ಯತೆ ಇದೆ.

86 ಎಕರೆ ವಿಸ್ತೀರ್ಣದಲ್ಲಿರುವ ಎಪಿಎಂಸಿಯಲ್ಲಿ 336 ಮಳಿಗೆಗಳಿವೆ. ಮಾರುಕಟ್ಟೆಯ ಮಧ್ಯಭಾಗದಲ್ಲಿ ರೈಲು ಹಳಿ ಹಾದು ಹೋಗಿದೆ. ರೈಲು ಹಳಿಗಳ ವಿದ್ಯುದೀಕರಣ ಕಾಮಗಾರಿಯನ್ನು ನೈರುತ್ಯ ರೈಲ್ವೆ ವಲಯ ಕೈಗೆತ್ತಿಕೊಂಡಿದೆ. ರೈಲು ಹಳಿಯ ಮೇಲೆ ನಿರ್ಮಿಸಿದ್ದ ಸೇತುವೆಯು ವಿದ್ಯುದೀಕರಣಕ್ಕೆ ತೊಡಕಾಗಿ ಪರಿಣಮಿಸಿತ್ತು. ಏಳು ಅಡಿ ಎತ್ತರದ ಹೊಸ ಸೇತುವೆ ನಿರ್ಮಿಸುವ ಅಗತ್ಯವಿದೆ. ಇದರಿಂದ ಎಪಿಎಂಸಿ ಆವರಣದ ಸೌಂದರ್ಯಕ್ಕೆ ಚ್ಯುತಿ ಉಂಟಾಗುವ ಆತಂಕ ಎದುರಾಗಿತ್ತು. ಇದಕ್ಕೆ ಪರಿಹಾರ ರೂಪದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದ ಕಾಮಗಾರಿಗೆ ರೈಲ್ವೆ ಇಲಾಖೆ ಆಸಕ್ತಿ ತೋರಿದೆ.

ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್‌ ರಸ್ತೆಯ ಪ್ರವೇಶ ದ್ವಾರದಿಂದ ‘ಸಿ’ ಮತ್ತು ‘ಡಿ’ ಬ್ಲಾಕ್‌ವರೆಗಿನ ರಸ್ತೆ ಮೆರುಗು ಪಡೆಯಲಿದೆ. ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆ, ಪಾದಚಾರಿ ಮಾರ್ಗ ನಿರ್ಮಾಣವಾಗಲಿವೆ. ‘ಇ’ ಮತ್ತು ‘ಎಫ್‌’ ಬ್ಲಾಕ್‌ಗೆ ಕೆಳಸೇತುವೆ ಮೂಲಕ ಪ್ರವೇಶ ಕಲ್ಪಿಸಲಾಗುತ್ತದೆ. ಜಂಕ್ಷನ್‌ ನಿರ್ಮಿಸಿ ವಾಹನಗಳು ಸರಾಗವಾಗಿ ಸಾಗಲು ಅವಕಾಶ ಕಲ್ಪಿಸಲಾಗುತ್ತದೆ.

ರೈಲು ಹಳಿ ಸಮೀಪ ನಿರ್ಮಾಣವಾಗುವ ಸೇತುವೆಯಿಂದ ಉಂಟಾಗುವ ಸಮಸ್ಯೆಯನ್ನು ನಿವಾರಿಸಲು ರೈಲ್ವೆ ಇಲಾಖೆ ಒಪ್ಪಿಕೊಂಡಿದೆ. ಅಂಗಡಿಗಳಿಗೆ ಮೆಟ್ಟಿಲು, ರ‍್ಯಾಂಪ್‌ ನಿರ್ಮಿಸಿಕೊಡುವುದಾಗಿ ಆಶ್ವಾಸನೆ ನೀಡಿದೆ. ಎಪಿಎಂಸಿ ಆವರಣದಲ್ಲಿರುವ ಬೀದಿದೀಪಗಳು ಹೊಸರೂಪ ಪಡೆಯಲಿವೆ. ದಾವಣಗೆರೆ ರಸ್ತೆಯಿಂದ ಪ್ರವೇಶ ಪಡೆಯುವ ‘ಡಿ’ ಬ್ಲಾಕ್‌ ಹಾಗೂ ಹೂವಿನ ಮಾರುಕಟ್ಟೆ ಬಳಿ ಕಮಾನು ನಿರ್ಮಿಸಲು ಸಮ್ಮತಿ ಸೂಚಿಸಿದೆ.

ನೀರು, ಕೇಬಲ್‌ ಸೇರಿ ಕೊಳವೆ ಮಾರ್ಗಕ್ಕೆ ಮೇಲ್ಸೇತುವೆ ಪಕ್ಕದಲ್ಲೇ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಎಂಟು ತಿಂಗಳ ಕಾಲಾವಕಾಶ ನೀಡಲಾಗಿದೆ. ಕೃಷಿ ಉತ್ಪನ್ನ ಸಾಗಣೆ, ವಾಹನ ಸಂಚಾರ ಹಾಗೂ ರೈತರಿಗೆ ಅನುಕೂಲವಾಗುವ ನಿರೀಕ್ಷೆ ಇದೆ.

ಕೋಲ್ಡ್‌ ಸ್ಟೋರೇಜ್‌ಗೆ ಪ್ರಸ್ತಾವ
ಎಪಿಎಂಸಿ ಆವರಣದಲ್ಲಿ ಕೋಲ್ಡ್‌ ಸ್ಟೋರೇಜ್‌ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸಲು ₹ 13 ಕೋಟಿ ವೆಚ್ಚದ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪ್ರವೇಶ ದ್ವಾರದ ಸಮೀಪದಲ್ಲಿ ವಾಣಿಜ್ಯ ಸಂಕೀರ್ಣ ಹಾಗೂ ಕೋಲ್ಡ್‌ ಸ್ಟೋರೇಜ್‌ ನಿರ್ಮಿಸಲು ಉದ್ದೇಶಿಸಲಾಗಿದೆ.

ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಕಡಲೆ, ಹುಣಸೆಹಣ್ಣು ಹಾಗೂ ಮೆಣಸಿನಕಾಯಿ ಪ್ರಮುಖ ಬೆಳೆ. ಬೆಲೆ ಇಲ್ಲದ ಸಂದರ್ಭದಲ್ಲಿ ಇವುಗಳನ್ನು ಸಂರಕ್ಷಿಸಿಡಲು ರೈತರು ಧಾರವಾಡ ಹಾಗೂ ಹಾವೇರಿ ಜಿಲ್ಲೆಗೆ ತೆರಳಬೇಕಿದೆ. ಈ ತಾಪತ್ರಯ ತಪ್ಪಿಸಲು ಕೋಲ್ಡ್‌ ಸ್ಟೋರೇಜ್‌ ನಿರ್ಮಿಸಲಾಗುತ್ತಿದೆ.

ಅತ್ಯಾಧುನಿಕ ತಂತ್ರಜ್ಞಾನದ ಕೋಲ್ಡ್‌ ಸ್ಟೋರೇಜ್‌ನಲ್ಲಿ 400 ಮೆಟ್ರಿಕ್‌ ಟನ್‌ ಕೃಷಿ ಉತ್ಪನ್ನಗಳನ್ನು ದಾಸ್ತಾನು ಇಡಬಹುದು. ಸುಮಾರು ₹ 6 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಭರಮಸಾಗರ ಎಪಿಎಂಸಿ ಆವರಣದಲ್ಲಿಯೂ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT