ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಹಶೀಲ್ದಾರ್‌ ವಾಹನಕ್ಕೆ ಬೆಂಕಿ ಹಚ್ಚಿದ ಯುವಕ

ತಾಯಿಯ ದೂರು ಸ್ವೀಕರಿಸದ್ದಕ್ಕೆ ಆಕ್ರೋಶ
Published : 5 ಸೆಪ್ಟೆಂಬರ್ 2024, 16:38 IST
Last Updated : 5 ಸೆಪ್ಟೆಂಬರ್ 2024, 16:38 IST
ಫಾಲೋ ಮಾಡಿ
Comments

ಚಳ್ಳಕೆರೆ (ಚಿತ್ರದುರ್ಗ ಜಿಲ್ಲೆ): ‘ಪೊಲೀಸರು ತಾಯಿ ನೀಡಿದ್ದ ದೂರು ಸ್ವೀಕರಿಸಲಿಲ್ಲ’ ಎಂದು ಆರೋಪಿಸಿ ಈಚೆಗೆ ಬೆಂಗಳೂರಿನಲ್ಲಿ ವಿಧಾನಸೌಧದ ಎದುರು ತನ್ನ ಸ್ಕೂಟರ್‌ಗೇ ಬೆಂಕಿ ಹಚ್ಚಿದ್ದ ಯುವಕ ಗುರುವಾರ ಇಲ್ಲಿ ತಹಶೀಲ್ದಾರ್‌ ವಾಹನಕ್ಕೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ.

ಇಲ್ಲಿನ ಗಾಂಧಿನಗರದ ನಿವಾಸಿಯಾದ ಎಂ.ಪೃಥ್ವಿರಾಜ್‌, ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಲೆಂದು ಪೆಟ್ರೊಲ್‌ನೊಂದಿಗೆ ನೇರವಾಗಿ ಠಾಣೆಗೆ ತೆರಳಿದ್ದ. ಅಲ್ಲಿ ಪೊಲೀಸರ ವಾಹನ ಇಲ್ಲದಿರುವುದನ್ನು ಕಂಡು ಪಕ್ಕದಲ್ಲಿರುವ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ನಿಂತಿದ್ದ ತಹಶೀಲ್ದಾರ್ ವಾಹನಕ್ಕೆ ಬೆಂಕಿ ಹಚ್ಚಿದ್ದಾನೆ. ತಡೆಯಲು ಹೋದ ಕಚೇರಿ ಸಿಬ್ಬಂದಿಗೆ ಪೆಟ್ರೋಲ್‌ ಎರಚಲು ಮುಂದಾಗಿ, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದ.

ಕಚೇರಿ ಆವರಣದಲ್ಲಿದ್ದ ಜನರು ಈತನ ವರ್ತನೆ ಕಂಡು ಭಯಭೀತರಾಗಿ ನಿಂತಿದ್ದರು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆದರು.

ಪೃಥ್ವಿರಾಜ್‌ ನಾಪತ್ತೆಯಾಗಿದ್ದ ಸಂಬಂಧ ತಾಯಿ ರತ್ನಮ್ಮ ಜುಲೈ 21ರಂದು ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದರು. ಆದರೆ ಪೊಲೀಸರು ದೂರು ಸ್ವೀಕರಿಸದೇ ವಾಪಸ್‌ ಕಳುಹಿಸಿದ್ದರು. ನಂತರ ವಾಪಸಾಗಿದ್ದ ಪೃಥ್ವಿರಾಜ್‌ ಪೊಲೀಸ್‌ ಠಾಣೆಗೆ ತೆರಳಿ, ‘ನನ್ನ ತಾಯಿಯ ದೂರು ಏಕೆ ಸ್ವೀಕರಿಸಲಿಲ್ಲ?’ ಎಂದು ಪ್ರಶ್ನಿಸಿ ಗಲಾಟೆ ಮಾಡಿದ್ದ.

‘ನ್ಯಾಯ ಕೇಳಿದರೆ ಠಾಣೆಯಲ್ಲಿ ತಾಯಿ ಎದುರಿನಲ್ಲೇ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆ, ನಮ್ಮ ಮೆಟ್ರೊ, ಡಿಆರ್‌ಡಿಒ, ಇಸ್ರೊ, ವಿಧಾನಸೌಧ, ರಾಜಭವನಕ್ಕೆ ಎಲ್ಲಿಂದ ವಿದ್ಯುತ್‌ ಬರುತ್ತದೆ ಎಂಬುದು ಗೊತ್ತಿದೆ. ಎಲ್ಲಿ ಚುಚ್ಚಿದರೆ ಎಲ್ಲಿ ಸ್ಫೋಟವಾಗುತ್ತದೆ ಎಂಬುದು ನನಗೆ ಗೊತ್ತು‘ ಎಂದು ವಿಡಿಯೊ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ.

ನಂತರ ಆಗಸ್ಟ್‌ 14ರಂದು ಬೆಂಗಳೂರಿಗೆ ತೆರಳಿದ್ದ ಪೃಥ್ವಿರಾಜ್‌, ಇದೇ ವಿಚಾರಕ್ಕೆ ವಿಧಾನಸೌಧದ ಎದುರು ತನ್ನ ಎಲೆಕ್ಟ್ರಿಕ್‌ ಸ್ಕೂಟರ್‌ಗೆ ಬೆಂಕಿ ಹಚ್ಚಿ ದುರ್ವರ್ತನೆ ತೋರಿದ್ದ. ‘ನನ್ನ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದೂ ಒತ್ತಾಯಿಸಿದ್ದ.

ರತ್ನಮ್ಮ ಅವರ ದೂರು ಸ್ವೀಕರಿಸದ ಆರೋಪದ ಮೇಲೆ ಎಎಸ್‌ಐ ಮುಷ್ಟೂರಪ್ಪ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆಗಸ್ಟ್‌ 15ರಂದು ಆದೇಶಿಸಿದ್ದರು. ಈಗ ಮತ್ತೆ ದುರ್ವರ್ತನೆ ಮುಂದುವರಿಸಿರುವ ಪೃಥ್ವಿರಾಜ್, ತಹಶೀಲ್ದಾರ್‌ ವಾಹನಕ್ಕೆ ಬೆಂಕಿ ಇಟ್ಟಿದ್ದಾನೆ.

‘ಕರ್ತವ್ಯಕ್ಕೆ ಅಡ್ಡಿ, ಸರ್ಕಾರಿ ವಾಹನಕ್ಕೆ ಬೆಂಕಿ, ಬೆದರಿಕೆ, ಸಾರ್ವಜನಿಕ ಸ್ವತ್ತಿಗೆ ಹಾನಿ ಮಾಡಿರುವ ಆರೋಪದ ಮೇಲೆ ಪೃಥ್ವಿರಾಜ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಡಿವೈಎಸ್‌ಪಿ ಟಿ.ಬಿ. ರಾಜಣ್ಣ ತಿಳಿಸಿದರು. 

ಪೃಥ್ವಿರಾಜ್‌
ಪೃಥ್ವಿರಾಜ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT