ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಬಲಹೀನ ಸಮುದಾಯಕ್ಕೆ ಸಿಕ್ಕ ‘ಉಸಿರು’; ಎಚ್‌.ಆಂಜನೇಯ

ಸುಪ್ರೀಂ ಕೋರ್ಟ್ ತೀರ್ಪಿಗೆ ವಿಶ್ಲೇಷಣೆ
Last Updated 28 ಆಗಸ್ಟ್ 2020, 15:01 IST
ಅಕ್ಷರ ಗಾತ್ರ

ಚಿತ್ರದುರ್ಗ: ಮೀಸಲಾತಿ ಸೌಲಭ್ಯದಿಂದ ವಂಚಿತವಾಗಿ ಕೋಮಾಸ್ಥಿತಿ ತಲುಪಿದ್ದ ಬಲಹೀನ ಸಮುದಾಯಕ್ಕೆ ಸುಪ್ರೀಂಕೋರ್ಟ್‌ ಪ್ರಕಟಿಸಿದ ಒಳಮೀಸಲಾತಿ ತೀರ್ಪು ‘ಉಸಿರು’ ನೀಡಿದೆ ಎಂದು ಮಾಜಿ ಸಚಿವ ಎಚ್‌.ಆಂಜನೇಯ ವಿಶ್ಲೇಷಣೆ ಮಾಡಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅರುಣ್‌ ಮಿಶ್ರಾ ನೇತೃತ್ವದ ಐವರು ಸದಸ್ಯರ ನ್ಯಾಯಪೀಠ ಒಳಮೀಸಲಾತಿ ಕುರಿತು ನೀಡಿದ ತೀರ್ಪು ಹೊಸ ಮೈಲುಗಲ್ಲು ಸೃಷ್ಟಿಸಿದೆ. ಒಳಮೀಸಲಾತಿ ಸೌಲಭ್ಯ ಕಲ್ಪಿಸಲು ಈವರೆಗೆ ಇದ್ದ ಅಡೆತಡೆಗಳು ನಿವಾರಣೆಯಾದಂತೆ ಕಾಣುತ್ತಿವೆ’ ಎಂದು ಸಂತಸ ಹಂಚಿಕೊಂಡರು.

‘ಒಳಮೀಸಲಾತಿ ಕುರಿತು 2004–05ರಲ್ಲಿ ಆಂಧ್ರಪ್ರದೇಶದಲ್ಲಿ ದೊಡ್ಡ ಹೋರಾಟ ನಡೆಯಿತು. ಚಳವಳಿಗೆ ಮಣಿದ ರಾಜ್ಯ ಸರ್ಕಾರ ಒಳಮೀಸಲಾತಿ ಸೌಲಭ್ಯ ಕಲ್ಪಿಸಿತು. ಮಾದಿಗ ಸಮುದಾಯಕ್ಕೆ ಶೇ 7ರಷ್ಟು ಮೀಸಲಾತಿ ಸೌಲಭ್ಯ ಸಿಕ್ಕಿತ್ತು. ಪರಿಶಿಷ್ಟ ಜಾತಿಯ ಎಲ್ಲರಿಗೂ ಜಾತಿ ಆಧಾರಿತ ಮೀಸಲಾತಿ ಕಲ್ಪಿಸಲಾಗಿತ್ತು. ಈ ವಿಚಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಬಳಿಕ ನನೆಗುದಿಗೆ ಬಿದ್ದಿತ್ತು’ ಎಂದು ಹೇಳಿದರು.

‘ಒಳಮೀಸಲಾತಿ ಕುರಿತು 2005ರಲ್ಲಿ ಪ್ರಕಟವಾಗಿದ್ದ ತೀರ್ಪು ಶೋಷಿತ ಸಮುದಾಯದಲ್ಲಿ ನಿರಾಸೆ ಮೂಡಿಸಿತ್ತು. ಒಳಮೀಸಲಾತಿ ನಿರ್ಧರಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲವೆಂದು ಅಭಿಪ್ರಾಯಪಟ್ಟಿತ್ತು. ಕರ್ನಾಟಕದಲ್ಲಿ ಶೇ 6ರಷ್ಟು ಜನಸಂಖ್ಯೆ ಹೊಂದಿರುವ ಮಾದಿಗ ಸಮುದಾಯ ಈವರೆಗೆ ಶೇ 2ಕ್ಕಿಂತಲೂ ಕಡಿಮೆ ಮೀಸಲಾತಿ ಸೌಲಭ್ಯ ಅನುಭವಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಾದಿಗ ಸಮುದಾಯ ಈಗಲೂ ದಯನೀಯ ಸ್ಥಿತಿಯಲ್ಲಿ ಬದುಕುತ್ತಿದೆ. ಬಹುತೇಕರು ಚಪ್ಪಲಿ ಹೊಲೆದು ಬದುಕು ಕಟ್ಟಿಕೊಂಡಿದ್ದಾರೆ. ಮಲ ಹೋರುವ, ಪೌರಕಾರ್ಮಿಕರಾಗಿ ಕೆಲಸ ಮಾಡುತ್ತ ಸಮಾಜ ಸ್ವಾಸ್ಥ್ಯಕ್ಕೆ ಜೀವನ ಮುಡಿಪಾಗಿಟ್ಟಿದ್ದಾರೆ. ಪೌರಕಾರ್ಮಿಕರ ಮಕ್ಕಳು ಪ್ರೌಢಶಾಲೆ ಶಿಕ್ಷಕರಾಗಲು ಕೂಡ ಸಾಧ್ಯವಾಗಿಲ್ಲ. ಈ ಅಸಮಾನತೆಯನ್ನು ಹೋಗಲಾಡಿಸಲು ಒಳಮೀಸಲಾತಿ ನೀಡುವ ಅಗತ್ಯವಿದೆ’ ಎಂದು ಹೇಳಿದರು.

ಗೊಂದಲ ಸೃಷ್ಟಿಸಬೇಡಿ: ಮನವಿ

ಒಳಮೀಸಲಾತಿ ಕುರಿತು ನ್ಯಾಯಮೂರ್ತಿ ಸದಾಶಿವ ಆಯೋಗ ನೀಡಿದ ವರದಿಯ ಬಗ್ಗೆ ಸಮಾಜದಲ್ಲಿ ಗೊಂದಲ ಸೃಷ್ಟಿಸಬೇಡಿ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಮನವಿ ಮಾಡಿದರು.

‘ಕೊರಮ, ಕೊರಚ ಸೇರಿದಂತೆ ಹಲವು ಜಾತಿಗಳನ್ನು ಮೀಸಲಾತಿ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂಬ ವದಂತಿ ಹಬ್ಬಿಸಲಾಗಿದೆ. ಇದು ವಾಸ್ತವಕ್ಕೆ ದೂರವಾಗಿರುವ ಸಂಗತಿ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗೂ ಮೀಸಲಾತಿ ಸೌಲಭ್ಯವಿದೆ. ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಅದು ನಿರ್ಧಾರವಾಗುತ್ತದೆ. ಯಾರೊಬ್ಬರು ಆತಂಕಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹರಾಜು, ಸದಸ್ಯರಾದ ಪ್ರಕಾಶಮೂರ್ತಿ, ಗೀತಾ, ಲಿಡ್ಕರ್‌ ನಿಗಮದ ಮಾಜಿ ಅಧ್ಯಕ್ಷ ಶಂಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT