ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿಎಫ್‌ ಎಸ್‌.ಶ್ರೀನಿವಾಸ್‌ ಮನೆ ಮೇಲೆ ಎಸಿಬಿ ದಾಳಿ: ₹ 4.7 ಲಕ್ಷ ನಗದು ವಶ

Last Updated 2 ಫೆಬ್ರುವರಿ 2021, 12:03 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಕ್ರಮ ಆಸ್ತಿ ಗಳಿಸಿದ ಆರೋಪಕ್ಕೆ ಗುರಿಯಾಗಿರುವ ಧಾರವಾಡದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ಎಸ್‌.ಶ್ರೀನಿವಾಸ್‌ ಅವರ ಇಬ್ಬರು ಪತ್ನಿಯರ ಮನೆ ಸೇರಿ ಐದು ಕಡೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.

ದಾಳಿಯ ಸಂದರ್ಭದಲ್ಲಿ 870 ಗ್ರಾಂ ತೂಕದ ಚಿನ್ನಾಭರಣ, ಎರಡೂವರೆ ಕೆ.ಜಿ ಬೆಳ್ಳಿ ಹಾಗೂ ₹ 4.7 ಲಕ್ಷ ನಗದು ಸಿಕ್ಕಿದೆ. ಅಪಾರ ಪ್ರಮಾಣದ ಗೃಹೋಪಯೋಗಿ ವಸ್ತು, ಎರಡು ಕಾರು, ಟ್ರ್ಯಾಕ್ಟರ್‌ ಮತ್ತು ದಾಖಲೆ ಪತ್ರಗಳ ಪರಿಶೀಲನೆ ಮಾಡಲಾಗುತ್ತಿದೆ.

ಚಿತ್ರದುರ್ಗದ ತಮಟಕಲ್ಲು ರಸ್ತೆಯ ಈಶ್ವರ ಬಡಾವಣೆಯ ನಿವಾಸ, ಕೆಎಚ್‌ಬಿ ಕಾಲೊನಿಯಲ್ಲಿರುವ ಮೊದಲ ಪತ್ನಿಯ ಮನೆ, ಮಾರಘಟ್ಟ ಬಳಿಯ ತೋಟದ ಮನೆ, ಧಾರವಾಡದ ಎಸಿಎಫ್ ಕಚೇರಿ ಹಾಗೂ ಅರಣ್ಯ ಇಲಾಖೆ ವಸತಿ ಗೃಹದ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ.

‘ಮಂಗಳವಾರ ಬೆಳಿಗ್ಗೆ 6ಕ್ಕೆ ದಾಳಿ ನಡೆಸಲಾಗಿದೆ. ಈಶ್ವರ ಬಡಾವಣೆಯಲ್ಲಿರುವ ಮನೆಯಲ್ಲಿ ಚಿನ್ನಾಭರಣ ಮತ್ತು ನಗದು ಪತ್ತೆಯಾಗಿದೆ. ಎಷ್ಟು ಪಟ್ಟು ಹೆಚ್ಚುವರಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬುದನ್ನು ಇನ್ನೂ ಲೆಕ್ಕಾ ಹಾಕಲಾಗುತ್ತಿದೆ’ ಎಂದು ಪೂರ್ವ ವಲಯದ ಎಸಿಬಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಜಯಪ್ರಕಾಶ್‌ ತಿಳಿಸಿದ್ದಾರೆ.

ಚಿತ್ರದುರ್ಗ ಎಸಿಬಿ ಡಿವೈಎಸ್‌ಪಿ ಬಸವರಾಜ ಆರ್. ಮುಗದುಮ್, ಶಿವಮೊಗ್ಗ ಎಸಿಬಿ ಡಿವೈಎಸ್‌ಪಿ ಲೋಕೇಶ್, ಹಾವೇರಿ ಎಸಿಬಿ ಡಿವೈಎಸ್‌ಪಿ ಮಹಾಂತೇಶ್ವರ ಎಸ್.ಜಿದ್ದಿ, ಇನ್‌ಸ್ಪೆಕ್ಟರ್‌ ಪ್ರವೀಣ್‌ಕುಮಾರ್, ಮಧುಸೂದನ್, ಇಮ್ರಾನ್ ಬೇಗ್ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಗರಗ ಗ್ರಾಮದಲ್ಲಿ ಶೋಧ
ಬೆಂಗಳೂರಿನ ಸಹಕಾರ ಇಲಾಖೆ ಜಂಟಿ ರಿಜಿಸ್ಟ್ರಾರ್ ಪಾಂಡರಂಗ ಗರಗ ಅವರ ಸ್ವಗ್ರಾಮ ಹೊಸದುರ್ಗ ತಾಲ್ಲೂಕಿನ ಗರಗ ಗ್ರಾಮದ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿದರು.

ಶ್ರೀರಾಂಪುರ ಸಮೀಪದ ಗರಗ ಗ್ರಾಮದ ಮನೆಯಲ್ಲಿ ಪಾಂಡುರಂಗ ಅವರ ಸಹೋದರ ಸೇರಿದಂತೆ ಕುಟುಂಬದ ಸದಸ್ಯರಿದ್ದರು. ಬೆಂಗಳೂರಿನಿಂದ ಬಂದಿದ್ದ ಎಸಿಬಿ ಅಧಿಕಾರಿಗಳು ಬೆಳಿಗ್ಗೆ 6ರಿಂದ 11ರವರೆಗೆ ಶೋಧ ಕಾರ್ಯ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT