ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತರ ಕುಟುಂಬಕ್ಕೆ ₹ 80 ಲಕ್ಷ ಪರಿಹಾರ

ಗಣಿ ಲಾರಿ ಅಪಘಾತ; ಗರ್ಭಿಣಿ ಸೇರಿ ಮೂವರ ಸಾವು
Last Updated 11 ಜೂನ್ 2019, 13:18 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕಿನ ಹಿರೇಗುಂಟನೂರು ಸಮೀಪ ಗಣಿ ಲಾರಿ ಡಿಕ್ಕಿ ಹೊಡೆದು ಮೃತಪಟ್ಟ ಮೂವರ ಕುಟುಂಬಕ್ಕೆ ‘ವೇದಾಂತ– ಸೇಸಾ ಗೋವಾ ಕಬ್ಬಿಣ ಅದಿರು ಕಂಪನಿ’ ₹ 80 ಲಕ್ಷ ಪರಿಹಾರ ನೀಡಲು ಒಪ್ಪಿಗೆ ಸೂಚಿಸಿದೆ.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕಬ್ಬಿಣ ಅದಿರು ಕಂಪನಿಯ ಪ್ರವೀಣ್‌ ಜಾರ್ಜ್‌ ಈ ಆಶ್ವಾಸನೆ ನೀಡಿದರು. ಸಂತ್ರಸ್ತರ ಕುಟುಂಬದ ಇಬ್ಬರಿಗೆ ಕಂಪನಿಯಲ್ಲಿ ಉದ್ಯೋಗ ಹಾಗೂ ಮೃತರ ಅಂತ್ಯಕ್ರಿಯೆಗೆ ₹ 2 ಲಕ್ಷ ನೀಡುವುದಾಗಿ ಘೋಷಣೆ ಮಾಡಿದರು.

ಮೃತರ ಅಂತ್ಯಕ್ರಿಯೆ ನಡೆಸದೇ ಗ್ರಾಮಸ್ಥರು ಆರಂಭಿಸಿದ ಹೋರಾಟ, ಹಲವು ಸುತ್ತಿನ ಮಾತುಕತೆಯ ಬಳಿಕ ಮಂಗಳವಾರ ಅಂತ್ಯಗೊಂಡಿತು. ಪರಿಹಾರದ ಮೊತ್ತವನ್ನು ಹಸ್ತಾಂತರಿಸಲು ಒಂದು ವಾರದ ಕಾಲಾವಕಾಶ ನೀಡಲಾಯಿತು. ಅಪಘಾತ ವಿಮೆಯನ್ನು ಮೃತರ ಕುಟುಂಬಕ್ಕೆ ತಲುಪಿಸಲು ಸಹಕರಿಸುವುದಾಗಿ ಕಂಪನಿ ಭರವಸೆ ನೀಡಿತು.

ಗಣಿಯಿಂದ ಅದಿರು ತುಂಬಿಕೊಂಡು ಸೋಮವಾರ ಚಿತ್ರದುರ್ಗಕ್ಕೆ ಬರುತ್ತಿದ್ದ ಲಾರಿ ದ್ವಿಚಕ್ರ ವಾಹಕ್ಕೆ ಡಿಕ್ಕಿ ಹೊಡೆದಿತ್ತು. ಭೀಮಸಮುದ್ರ ಲಂಬಾಣಿ ಹಟ್ಟಿಯ ನಿವಾಸಿ ಮಹಾಂತೇಶ್‌, ಪತ್ನಿ ದೀಪಾ, ಸಹೋದರನ ಪುತ್ರ ಚೇತನ್‌ ಮೃತಪಟ್ಟಿದ್ದರು. ದೀಪಾ ತುಂಬು ಗರ್ಭಿಣಿಯಾಗಿದ್ದರಿಂದ ಸಾರ್ವಜನಿಕರ ಆಕ್ರೋಶ ಕಟ್ಟೆಯೊಡೆದಿತ್ತು.

ಪರಿಹಾರದ ಮೊತ್ತಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಯಿತು. ಜನಪ್ರತಿನಿಧಿಗಳು, ರೈತರು, ಮೃತರ ಕುಟುಂಬದ ಸದಸ್ಯರು ಸಭೆಯಲ್ಲಿದ್ದರು. ಮೃತರ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ನೀಡಬೇಕು ಪ್ರತಿಭಟನಾಕಾರರು ಪಟ್ಟು ಹಿಡಿದರು.

‘ಪರಿಹಾರದಲ್ಲಿ ಒಂದು ಪೈಸೆ ಕಡಿಮೆಯಾದರೂ ಒಪ್ಪುವುದಿಲ್ಲ. ಮೃತದೇಹಗಳನ್ನು ಮುಂದಿಟ್ಟುಕೊಂಡು ಪರಿಹಾರದ ಬಗ್ಗೆ ಚರ್ಚಿಸುವುದು ತಪ್ಪಾಗುತ್ತದೆ. ಮಾನವೀಯತೆಯ ದೃಷ್ಟಿಯಿಂದ ಪರಿಹಾರಕ್ಕೆ ಒಪ್ಪಿಕೊಳ್ಳಿ’ ಎಂದು ಕಾಂಗ್ರೆಸ್‌ ಮುಖಂಡ ಜಿ.ಎಸ್‌.ಮಂಜುನಾಥ್‌ ಸಲಹೆ ನೀಡಿದರು.

ಕಂಪನಿಯೊಂದಿಗೆ ಚರ್ಚಿಸಿ ಅಭಿಪ್ರಾಯ ತಿಳಿಸಲು ಕಾಲಾವಕಾಶ ನೀಡಲಾಯಿತು. ಅರ್ಧ ಗಂಟೆ ಕಳೆದರೂ ಕಂಪನಿ ನಿರ್ಧಾರ ಪ್ರಕಟಿಸದಿರುವುದರಿಂದ ಜನರು ಆಕ್ರೋಶಗೊಂಡರು. ಕಂಪನಿಯ ಹಿರಿಯ ಅಧಿಕಾರಿ ಚಂದ್ರಶೇಖರ ಪಾಟೀಲ ಸಭೆಗೆ ಬರುವಂತೆ ಪಟ್ಟು ಹಿಡಿದರು. ಹಲವು ಸುತ್ತಿನ ಚರ್ಚೆಯ ಬಳಿಕ ₹ 80 ಲಕ್ಷ ಪರಿಹಾರ ನೀಡುವುದಾಗಿ ಕಂಪನಿ ಘೋಷಣೆ ಮಾಡಿತು.

ನ್ಯಾಯಾಧೀಶರ ಸಮ್ಮುಖದಲ್ಲಿ ಕಾನೂನಾತ್ಮಕವಾಗಿ ಪರಿಹಾರ ವಿತರಣೆ ಮಾಡಬೇಕು ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಸಲಹೆ ನೀಡಿದರು. ಅಪಘಾತ ವಿಮೆ ಪಡೆಯಲು ತೊಂದರೆ ಉಂಟಾಗಬಹುದು ಎಂಬ ಕಾರಣಕ್ಕೆ ಮೃತರ ಕುಟುಂಬಕ್ಕೆ ನೇರವಾಗಿ ತಲುಪಿಸಲು ಸಭೆ ನಿರ್ಣಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT