ಗುರುವಾರ , ಮಾರ್ಚ್ 30, 2023
31 °C
ಹಸಿರು ಲೋಗೊ ಇಲ್ಲದ ಪಟಾಕಿ ಮಾರಾಟ ಮಾಡಿದಲ್ಲಿ ಕ್ರಮದ ಎಚ್ಚರಿಕೆ

ಚಿತ್ರದುರ್ಗ: ಚುರುಕು ಪಡೆದ ಪಟಾಕಿ ವ್ಯಾಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಇಲ್ಲಿಯ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಪಟಾಕಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿ ಮೂರು ದಿನಗಳಾಗಿವೆ. ಆದರೆ, ಮೊದಲೆರಡು ದಿನ ಹೇಳಿಕೊಳ್ಳುವಂಥ ವ್ಯಾಪಾರ ನಡೆದಿಲ್ಲ. ನರಕ ಚತುರ್ದಶಿ ಹಬ್ಬದ ಅಂಗವಾಗಿ ಬುಧವಾರ ನಿಧಾನವಾಗಿ ವ್ಯಾಪಾರ ಚಟುವಟಿಕೆ ಆರಂಭವಾಯಿತು. ದೀಪಾವಳಿ ಅಮಾವಾಸ್ಯೆ ದಿನವಾದ ಗುರುವಾರ ಚುರುಕು ಪಡೆಯಿತು. ಇದು ವ್ಯಾಪಾರಸ್ಥರಲ್ಲಿ ಒಂದಿಷ್ಟು ಭರವಸೆ ಮೂಡಿಸಿದೆ.

‘ಹಸಿರು ಪಟಾಕಿ’ ಸಿಗದ ಕಾರಣ ಜಿಲ್ಲೆಯಲ್ಲಿ ಅರ್ಧಕ್ಕರ್ಧ ಪಟಾಕಿ ವ್ಯಾಪಾರಸ್ಥರು ಈ ಬಾರಿ ಅಂಗಡಿ ತೆರೆಯುವ ಸಾಹಸಕ್ಕೆ ಕೈಹಾಕಿಲ್ಲ. ಪರವಾನಗಿ ಪಡೆದ ಕೆಲ ವ್ಯಾಪಾರಿಗಳು ಹಸಿರು ಲೋಗೊ ಇರುವ ಪಟಾಕಿಗಳ ವ್ಯಾಪಾರಕ್ಕೆ ಸೋಮವಾರದಿಂದ ಮುಂದಾಗಿದ್ದಾರೆ.

ಜಿಲ್ಲೆಯ ಚಿತ್ರದುರ್ಗ ನಗರವೊಂದರಲ್ಲೇ ದೀಪಾವಳಿ ವೇಳೆ ಪ್ರತಿ ವರ್ಷ 18 ಮಳಿಗೆಗಳು ತೆರೆಯುತ್ತಿದ್ದವು. ಆದರೆ, ಈ ಬಾರಿ 13 ಮಾತ್ರ ತೆರೆದಿವೆ. ಪರವಾನಗಿಗೆ ಅರ್ಜಿ ಸಲ್ಲಿಸಿದ 19 ಜನರ ಪೈಕಿ 13 ಮಂದಿಗೆ ಮಾತ್ರ ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಸರಿಯಾದ ದಾಖಲೆ ಒದಗಿಸದ ಕಾರಣಕ್ಕೆ ಉಳಿದ ಅರ್ಜಿಗಳನ್ನು ತಿರಸ್ಕರಿಸಿದೆ.

ಈ ಮೈದಾನದಲ್ಲಿ ಶುಕ್ರವಾರ ನಡೆಯಲಿರುವ ಬಲಿಪಾಡ್ಯಮಿ ಹಬ್ಬದವರೆಗೂ ಮಾರಾಟಕ್ಕೆ ನಗರಸಭೆ ಅವಕಾಶ ಕಲ್ಪಿಸಿದೆ. ಈಗಾಗಲೇ ಮಳಿಗೆಗಳನ್ನು ನಿರ್ಮಿಸಿಕೊಂಡಿರುವ ವ್ಯಾಪಾರಸ್ಥರಿಗೆ ಕೋವಿಡ್ ಮಾರ್ಗಸೂಚಿ ಪಾಲಿಸುವಂತೆಯೂ ಸೂಚನೆ ನೀಡಿದೆ.

ಹಸಿರು ಲೋಗೊ ಇದೆಯೋ, ಇಲ್ಲವೋ ಎಂಬ ಕುರಿತು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಸಿರು ಲೋಗೊ ಇರುವ ಪಟಾಕಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಪುನಃ ನಗರಸಭೆ, ಪೊಲೀಸ್ ಅಧಿಕಾರಿಗಳು ಸಮಿತಿಯೊಂದಿಗೆ ಭೇಟಿ ನೀಡಿ ಪರಿಶೀಲಿಸುವ ಸಾಧ್ಯತೆ ಇದೆ.

ಪಟಾಕಿ ಮಳಿಗೆ ತೆರೆದ ನಂತರ ಎರಡು ದಿನ ಹೇಳಿಕೊಳ್ಳುವಂಥ ವ್ಯಾಪಾರ ನಡೆದಿಲ್ಲ. ಇದರಿಂದಾಗಿ ನಿರಾಸೆಗೆ ಒಳಗಾಗಿದ್ದ ವ್ಯಾಪಾರಸ್ಥರು ಕೂಡ ಆತಂಕಕ್ಕೆ ಒಳಗಾಗಿದ್ದರು. ಆದರೆ, ಹಬ್ಬ ಸಮೀಪಿಸುತ್ತಿದ್ದಂತೆ ಆಸಕ್ತ ಗ್ರಾಹಕರು ಮೈದಾನದ ಪಟಾಕಿ ಮಳಿಗೆಗಳತ್ತ ದಾಂಗುಡಿ ಇಡುತ್ತಿದ್ದಾರೆ. ಇದು ವ್ಯಾಪಾರಸ್ಥರಲ್ಲಿ ಆಶಾಭಾವನೆ ಮೂಡಿಸಿದೆ. ಇನ್ನೂ ಹಬ್ಬಕ್ಕೆ ಒಂದೇ ದಿನ ಬಾಕಿ ಇರುವುದರಿಂದ ವ್ಯಾಪಾರ ಚಟುವಟಿಕೆ ಹೆಚ್ಚಾಗುವ ನಿರೀಕ್ಷೆಯಲ್ಲಿದ್ದಾರೆ.

‘ಜಿಲ್ಲೆಯ ಆಯಾ ಠಾಣಾ ವ್ಯಾಪ್ತಿಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿ ಅನುಸರಿಸದಿದ್ದರೆ, ಹಸಿರು ಲೋಗೊ ಇಲ್ಲದ ಪಟಾಕಿ ಮಾರಾಟ ಮಾಡಿರುವ ಕುರಿತು ದೂರು ಕೇಳಿ ಬಂದರೆ ಪೊಲೀಸ್ ಇಲಾಖೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಜಂಟಿಯಾಗಿ ಕ್ರಮ ಕೈಗೊಳ್ಳಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಎಚ್ಚರಿಕೆ ನೀಡಿದ್ದಾರೆ.

ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತದಿಂದ ಪರವಾನಗಿ ಪಡೆಯದೇ ಪಟಾಕಿ ಬಾಕ್ಸ್‌ಗಳನ್ನು ಜಿಲ್ಲೆಯ ಹಲವೆಡೆ ಕೆಲವರು ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ವ್ಯಾಪಾರಸ್ಥರು, ಸಾರ್ವಜನಿಕರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

*

ವ್ಯಾಪಾರ ಕೈಬಿಡಬಾರದು ಎಂಬ ಉದ್ದೇಶಕ್ಕಾಗಿ ಹಸಿರು ಪಟಾಕಿಗಳನ್ನೇ ತರಿಸಿ ವ್ಯಾಪಾರಕ್ಕೆ ಮುಂದಾಗಿದ್ದೇನೆ. ಗುರುವಾರ ಒಂದಿಷ್ಟು ವ್ಯಾಪಾರ ನಡೆದಿದೆ. ಈ ಬಾರಿಯೂ ಹೆಚ್ಚು ಲಾಭದ ನಿರೀಕ್ಷೆ ಇಲ್ಲ.
-ಜಯರಾಮರೆಡ್ಡಿ, ಪಟಾಕಿ ವ್ಯಾಪಾರಿ

*

ದೀಪಾವಳಿ ಅಮಾವಾಸ್ಯೆ ದಿನ ಗ್ರಾಹಕರು ಪಟಾಕಿ ಖರೀದಿಸಿದ್ದಾರೆ. ಹೀಗಾಗಿ ಬಲಿಪಾಡ್ಯಮಿ ಹಬ್ಬಕ್ಕೆ ನಗರದ ಆಸಕ್ತ ಜನರು ಹೆಚ್ಚು ಪಟಾಕಿ ಖರೀದಿಸುವ ನಿರೀಕ್ಷೆ ಇದೆ. ಗುರುವಾರ ವ್ಯಾಪಾರದಲ್ಲಿ ಚೇತರಿಕೆ ಕಂಡಿದೆ.
-ರಮೇಶ್‌, ಪಟಾಕಿ ವ್ಯಾಪಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.