ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತನೆ ಬದಲಿಸಿಕೊಳ್ಳಲು ಪೊಲೀಸರಿಗೆ ತಾಕೀತು: ಎಡಿಜಿಪಿ ಅಲೋಕ್‌ ಕುಮಾರ್‌

Last Updated 2 ನವೆಂಬರ್ 2022, 15:45 IST
ಅಕ್ಷರ ಗಾತ್ರ

ಚಿತ್ರದುರ್ಗ: ನೊಂದವರು, ಅಶಕ್ತರಿಗೆ ಪೊಲೀಸರು ಭರವಸೆಯ ಬೆಳಕಾಗಬೇಕೆ ಹೊರತು ಭಯ ಹುಟ್ಟಿಸಬಾರದು. ಸಾರ್ವಜನಿಕರೊಂದಿಗಿನ ವರ್ತನೆಯನ್ನು ಬದಲಿಸಿಕೊಳ್ಳಬೇಕು. ಠಾಣೆಗೆ ಬರುವ ಪ್ರತಿಯೊಬ್ಬರನ್ನು ಗೌರವಯುತವಾಗಿ ಕಾಣಬೇಕು ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್‌ ತಾಕೀತು ಮಾಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

‘ಪೊಲೀಸ್ ವ್ಯವಸ್ಥೆ ಇನ್ನಷ್ಟು ಜನಸ್ನೇಹಿಯಾಗಬೇಕಿದೆ. ಅಧಿಕಾರಿಗಳ ಹಂತದಲ್ಲಿ ಈ ಸುಧಾರಣೆ ಕಾಣುತ್ತಿದೆ. ಆದರೆ, ತಳ ಹಂತದ ಅಧಿಕಾರಿ, ಸಿಬ್ಬಂದಿಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿಲ್ಲ. ಈ ಬಗ್ಗೆ ಸಾರ್ವಜನಿಕರಲ್ಲಿ ಅತೀವ ಅಸಮಾಧಾನವಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತುರುವನೂರು ನಿವಾಸಿ ಅಶೋಕ್‌, ‘ಪೊಲೀಸ್‌ ಇಲಾಖೆಯ ತಳ ಹಂತದ ಸಿಬ್ಬಂದಿಯ ವರ್ತನೆ ಬದಲಾಗಿಲ್ಲ. ಠಾಣೆಗೆ ಬರುವ ಜನರನ್ನು ಕೀಳು ಭಾಷೆಯಲ್ಲಿ ನಿಂದಿಸಲಾಗುತ್ತದೆ’ ಎಂದು ಸಭೆಯ ಗಮನ ಸೆಳೆದರು. ಇದಕ್ಕೆ ದನಿಗೂಡಿಸಿದ ಇತರರು, ‘ಪೊಲೀಸರು ಸೊಂಟದ ಕೆಳಗಿನ ಭಾಷೆಯನ್ನು ಬಳಸುತ್ತಾರೆ. ಉದ್ದೇಶಪೂರ್ವಕವಾಗಿ ಅವಮಾನಿಸುತ್ತಾರೆ’ ಎಂದು ಅಸಮಾಧಾನ ಹೊರಹಾಕಿದರು.

ಅಹವಾಲು ಸ್ವೀಕಾರ ಕಡ್ಡಾಯ:

‘ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವುದು ಪೊಲೀಸರ ಕರ್ತವ್ಯ. ಸಬ್‌ ಇನ್‌ಸ್ಪೆಕ್ಟರ್‌, ಪೊಲೀಸ್‌ ಇನ್‌ಸ್ಟೆಕ್ಟರ್‌ ಹಾಗೂ ಡಿವೈಎಸ್‌ಪಿ ಹಂತದ ಅಧಿಕಾರಿಗಳು ನಿಯಮಿತವಾಗಿ ಕುಂದುಕೊರತೆ ಸಭೆ ನಡೆಸುವುದು ಕಡ್ಡಾಯ’ ಎಂದು ಎಡಿಜಿಪಿ ತಾಕೀತು ಮಾಡಿದರು.

‘ನೊಂದವರ ಅಹವಾಲು ಸ್ವೀಕಾರಕ್ಕೆ ಪ್ರತಿ ತಿಂಗಳ ಮೂರನೇ ಭಾನುವಾರ ಮೀಸಲಿಡಲಾಗಿದೆ. ದಾಖಲಾಗದ ದೂರು, ಆರೋಪಿಗಳಿಂದ ಬೆದರಿಕೆ ಸೇರಿ ಇತರ ಸಮಸ್ಯೆ ಎದುರಿಸುವವರು ಈ ಸಭೆಯಲ್ಲಿ ಪಾಲ್ಗೊಂಡು ಅಧಿಕಾರಿಗಳ ಗಮನ ಸೆಳೆಯಬಹುದು. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಕುಂದುಕೊರತೆ ಆಲಿಕೆಗೆ 4ನೇ ಭಾನುವಾರ ಮೀಸಲಿಡಲಾಗಿದೆ’ ಎಂದರು.

‘ದಲಿತರ ಮೇಲಿನ ದೌರ್ಜನ್ಯ ಈಗಲೂ ಮುಂದುವರಿಯುತ್ತಿರುವುದು ದುರದೃಷ್ಟಕರ. ಸಕಾಲಕ್ಕೆ ಕುಂದುಕೊರತೆ ಆಲಿಸಿದರೆ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ. ಬೀಟ್‌ ಪೊಲೀಸ್‌ ವ್ಯವಸ್ಥೆ ಇನ್ನಷ್ಟು ಸುಧಾರಣೆ ಆಗಬೇಕಿದೆ. ಬೀಟ್‌ಗೆ ನಿಯೋಜಿತರಾದ ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಗ್ರಾಮಾಂತರ ಪ್ರದೇಶ ಹೆಚ್ಚಾಗಿರುವ ಜಿಲ್ಲೆಯ ಜನರೊಂದಿಗೆ ಪೊಲೀಸರು ನಿರಂತರ ಒಡನಾಟದಲ್ಲಿ ಇರಬೇಕಿದೆ. ಕಾನೂನು ಸುವ್ಯಸ್ಥೆಗೆ ಸಂಬಂಧಿಸಿದ ಗಂಭೀರ ಸಮಸ್ಯೆ ಜಿಲ್ಲೆಯಲ್ಲಿ ಇಲ್ಲ’ ಎಂದರು.

‘ಮ್ಯಾಚ್‌ಫಿಕ್ಸಿಂಗ್‌’; ಎಡಿಜಿಪಿ ಕಿಡಿ

ಸಾರ್ವಜನಿಕ ಅಹವಾಲು ಸ್ವೀಕಾರ ಸಮಾರಂಭಕ್ಕೆ ಜನರನ್ನು ಕರೆತಂದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಎಡಿಜಿಪಿ ಅಲೋಕ್‌ಕುಮಾರ್‌, ‘ಇದು ಮ್ಯಾಚ್‌ಫಿಕ್ಸಿಂಗ್‌’ ಎಂದು ಪೊಲೀಸ್‌ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಅಹವಾಲು ಸಲ್ಲಿಸಲು ಬರುವ ಬಹುತೇಕರು ಪೊಲೀಸ್‌ ಅಧಿಕಾರಿಗಳನ್ನು ಹೊಗಳುತ್ತಿದ್ದರು. ದೂರು ಹೇಳಿಕೊಳ್ಳಲು ಹಿಂಜರಿಯುತ್ತಿದ್ದದು ಮೇಲ್ನೋಟಕ್ಕೆ ಕಂಡುಬರುತ್ತಿತ್ತು. ಇದನ್ನು ಗಮನಿಸಿದ ಎಡಿಜಿಪಿ ‘ಯಾರು ಇವರನ್ನೆಲ್ಲಾ ಇಲ್ಲಿಗೆ ಕರೆಸಿದ್ದು’ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು.

‘ಪೊಲೀಸ್‌ ಅಧಿಕಾರಿಗಳನ್ನು ಹೊಗಳುವುದನ್ನು ಕೇಳುವುದಕ್ಕಾಗಿ ಇಲ್ಲಿಗೆ ಬಂದಿಲ್ಲ. ಜನರ ಸಮಸ್ಯೆಗಳನ್ನು ಆಲಿಸುವುದು ಸಭೆಯ ಉದ್ದೇಶ. ಸಮಸ್ಯೆ ಎದುರಿಸುವ ಜನರನ್ನು ಸಭೆಗೆ ಕರೆದಿಲ್ಲ’ ಎಂದು ಕಿಡಿಕಾರಿದರು.

ತೂಕ ಇಳಿಸಿಕೊಳ್ಳಲು ತಾಕೀತು
ಪೊಲೀಸ್‌ ಅಧಿಕಾರಿಗಳ ದೇಹಾಕಾರದ ಬಗ್ಗೆ ಎಡಿಜಿಪಿ ಅಲೋಕ್‌ ಕುಮಾರ್‌ ಬಹಿರಂಗ ಅಸಮಾಧಾನ ಹೊರಹಾಕಿದರು. ತೂಕ ಇಳಿಸಿಕೊಳ್ಳುವಂತೆ ತಾಕೀತು ಮಾಡಿದರು.

ಚಿತ್ರದುರ್ಗಕ್ಕೆ ಆಗಮಿಸಿದ ಅಲೋಕ್‌ಕುಮಾರ್‌ ಅವರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಗೌರವ ಶ್ರೀರಕ್ಷೆ ನೀಡಲಾಯಿತು. ಈ ವೇಳೆ ಸ್ವಾಗತಕ್ಕೆ ಹೂಗುಚ್ಛ ಹಿಡಿದು ನಿಂತಿದ್ದ ಪೊಲೀಸ್‌ ಅಧಿಕಾರಿಗಳ ಬಳಿಗೆ ತೆರಳಿ ಹೊಟ್ಟೆಯ ಆಕಾರವನ್ನು ಪ್ರಶ್ನಿಸಿದರು.

‘ಎಸ್‌ಪಿ ಪರಶುರಾಮ್‌, ಐಜಿಪಿ ತ್ಯಾಗರಾಜ್‌ ಅವರನ್ನು ನೋಡಿ. ನಿಮಗಿಂತ ಅವರೇ ದೈಹಿಕವಾಗಿ ಸಮರ್ಥರಾಗಿದ್ದಾರೆ’ ಎಂದು ಹಿರಿಯೂರು ಡಿವೈಎಸ್‌ಪಿ ರೋಷನ್ ಜಮೀರ್, ಚಿತ್ರದುರ್ಗ ಡಿವೈಎಸ್‌ಪಿ ಅನಿಲ್, ಚಳ್ಳಕೆರೆ ಡಿವೈಎಸ್‌ಪಿ ರಮೇಶ್, ಡಿಸಿಆರ್‌ಬಿ ಡಿವೈಎಸ್‌ಪಿ ಲೋಕೇಶ್, ಸಿಪಿಐ ನಾಗರಾಜ್ ಅವರಿಗೆ ಹೇಳಿದರು.

‘ಪೋಕ್ಸೊ: ಕೂಲಂಕಷ ತನಿಖೆ’
ಮುರುಘಾ ಮಠಕ್ಕೆ ಸಂಬಂಧಿಸಿದಂತೆ ದಾಖಲಾದ ಪೋಕ್ಸೊ ಪ್ರಕರಣಗಳ ಕೂಲಂಕಷ ತನಿಖೆ ನಡೆಸಲಾಗುವುದು ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಮಾಹಿತಿ ನೀಡಿದರು.

‘ಪೋಕ್ಸೊ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಸಾಕ್ಷ್ಯಾಧಾರ ಕಲೆಹಾಕುವ ಅಗತ್ಯ ಇರುವುದರಿಂದ ಪ್ರಕರಣದ ತನಿಖೆ ಮುಂದುವರಿಯುತ್ತಿದೆ. ತನಿಖೆಯ ಮೇಲ್ವಿಚಾರಣೆ ನಡೆಸಿ ಸಂಪೂರ್ಣ ಮಾಹಿತಿ ಕಲೆಹಾಕಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

***

ಗಲಾಟೆಯಲ್ಲಿ ಹಲ್ಲೆಗೊಳಗಾದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗುತ್ತಾನೆ. ಹಲ್ಲೆ ನಡೆಸಿದ ಆರೋಪಿ ಠಾಣೆಗೆ ಮೊದಲು ದೂರು ನೀಡುತ್ತಾನೆ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸದೇ ಅನ್ಯಾಯ ಮಾಡುತ್ತಿದ್ದಾರೆ.
-ಜಯಪ್ಪ, ಮೊಳಕಾಲ್ಮುರು

***

ನಗರದಲ್ಲಿ ಆಟೊ ನಿಲ್ದಾಣಗಳ ಸ್ಥಿತಿ ಸರಿ ಇಲ್ಲ. ಗಾಂಧಿ ವೃತ್ತದಲ್ಲಿ ಸರಿಯಾದ ಸ್ಥಳಾವಕಾಶ ನೀಡದೇ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆಟೊ ಚಾಲಕರಿಗೆ ಪೊಲೀಸರು ಸ್ಪಂದಿಸಬೇಕಿದೆ.
-ಬಾಷಾ, ಆಟೊ ಚಾಲಕ, ಚಿತ್ರದುರ್ಗ

***

ರಸ್ತೆ ನಿರ್ಮಾಣವಾಗಿದ್ದರೂ ಅವೈಜ್ಞಾನಿಕವಾಗಿ ವಿಭಜಕ ಅಳವಡಿಸಲಾಗಿದೆ. ಸುಗಮ ಸಂಚಾರಕ್ಕೆ ತೊಂದರೆ ಉಂಟಾಗಿದೆ. ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದು ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
-ಮೈಲಾರಪ್ಪ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT