ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್‌ ತಿದ್ದುಪಡಿಗೆ ಸಾರ್ವಜನಿಕರ ಪರದಾಟ,ನೋಂದಣಿ ಕೇಂದ್ರದೆದುರು ನಸುಕಿನಿಂದ ಸರತಿ

Last Updated 2 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಮಗಳಿಗೆ ಭಾಗ್ಯಲಕ್ಷ್ಮಿ ಬಾಂಡ್‌ ಪಡೆಯಲು ಆಧಾರ್‌ ಕಡ್ಡಾಯಗೊಳಿಸಲಾಗಿದೆ. ಎರಡು ವಾರದಲ್ಲಿ ಆಧಾರ್‌ ಸಂಖ್ಯೆ ನೀಡದೇ ಇದ್ದರೆ ಯೋಜನೆಯ ಪ್ರಯೋಜನ ಸಿಗುವುದಿಲ್ಲವೆಂದು ಅಂಗನವಾಡಿ ಸಹಾಯಕಿ ಎಚ್ಚರಿಕೆ ನೀಡಿದ್ದಾರೆ. 15 ದಿನಗಳಿಂದ ಅಲೆದರೂ ಮಗಳಿಗೆ ಆಧಾರ್‌ ಕಾರ್ಡ್‌ ಮಾಡಿಸಲು ಸಾಧ್ಯವಾಗಿಲ್ಲ...’

ಒಂದೂವರೆ ವರ್ಷದ ಪುತ್ರಿ ಮೇಘನಾಳನ್ನು ಹೆಗಲಲ್ಲಿ ಕೂರಿಸಿಕೊಂಡು ಅಳಲು ತೋಡಿಕೊಂಡವರು ಮಾಳೇನಹಳ್ಳಿಯ ಶಶಿಕುಮಾರ್‌. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ (ಎಸ್‌ಬಿಐ) ಆಧಾರ್‌ ನೋಂದಣಿ ಕೇಂದ್ರದ ಎದುರು ಬೆಳಿಗ್ಗೆ 6ರಿಂದ ಸರತಿಯಲ್ಲಿ ನಿಂತಿದ್ದರೂ ಟೋಕನ್‌ ಸಿಗದಿರುವ ನಿರಾಶೆ ಅವರ ಮುಖದಲ್ಲಿ ಇಣುಕುತ್ತಿತ್ತು.

ಆಧಾರ್‌ ಕಾರ್ಡ್‌ ಪಡೆಯಲು ಹಾಗೂ ಆಧಾರ್‌ ತಿದ್ದುಪಡಿಗೆ ಸಾರ್ವಜನಿಕರು ಪಡುತ್ತಿರುವ ಕಷ್ಟಕ್ಕೆ ಇದೊಂದು ನಿದರ್ಶನ. ಗ್ರಾಮೀಣ ಪ್ರದೇಶದ ಬಹುತೇಕರು ಆಧಾರ್‌ ನೋಂದಣಿ ಕೇಂದ್ರಗಳಿಗೆ ಅಲೆಯುತ್ತಿದ್ದರೂ ಜಿಲ್ಲಾಡಳಿತ ಕಣ್ಣು ತೆರೆದು ನೋಡುತ್ತಿಲ್ಲ.

ಹೊಳಲ್ಕೆರೆ ತಾಲ್ಲೂಕಿನ ಮಾಳೇನಹಳ್ಳಿ ಚಿತ್ರದುರ್ಗದಿಂದ 35 ಕಿ.ಮೀ ದೂರದಲ್ಲಿದೆ. ತಾಲ್ಲೂಕು ಕೇಂದ್ರದಲ್ಲಿ ಆಧಾರ್‌ ನೋಂದಣಿ ಕೇಂದ್ರ ಸ್ಥಗಿತಗೊಂಡಿದ್ದರಿಂದ ಜಿಲ್ಲಾ ಕೇಂದ್ರಕ್ಕೆ ಬರುವುದು ಅನಿವಾರ್ಯವಾಗಿದೆ. ಸೋಮವಾರ ನಸುಕಿನ 5 ಗಂಟೆಗೆ ಪುತ್ರಿಯೊಂದಿಗೆ ನಗರಕ್ಕೆ ಬಂದ ಶಶಿಕುಮಾರ್‌, ಟೋಕನ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದರು.

‘ಸೆ.29ರಂದು ಮಗಳೊಂದಿಗೆ ಚಿತ್ರದುರ್ಗಕ್ಕೆ ಬಂದಿದ್ದೆ. ಹಿಂದೂ ಮಹಾಗಣಪತಿಯ ಶೋಭಯಾತ್ರೆಯ ಪ್ರಯುಕ್ತ ಆಧಾರ್‌ ನೋಂದಣಿ ಕೇಂದ್ರಗಳು ಬಾಗಿಲು ಹಾಕಿದ್ದವು. ಬರುವುದು ಕೊಂಚ ವಿಳಂಬವಾಗಿದ್ದರಿಂದ ಅ.1ರಂದು ಕೂಡ ಟೋಕನ್‌ ಸಿಗಲಿಲ್ಲ’ ಎಂದು ಬೇಸರ ಹೊರಹಾಕುತ್ತಾರೆ ಶಶಿಕುಮಾರ್‌.

ಹೊಳಲ್ಕೆರೆ ತಾಲ್ಲೂಕಿನ ತಾಳ್ಯದಿಂದ 6 ವರ್ಷದ ಮಗಳೊಂದಿಗೆ ಬಂದಿದ್ದ ನಾಗರತ್ನ ಅವರ ಸಮಸ್ಯೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. 1ನೇ ತರಗತಿಗೆ ಪ್ರವೇಶ ಪಡೆದಿರುವ ಮಗಳು ವರ್ಷಿತಾಳ ಆಧಾರ್‌ ಕಾರ್ಡ್‌ ನೀಡುವಂತೆ ಶಾಲೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಒಂದು ವಾರದಿಂದ ಹಲವು ಕೇಂದ್ರಗಳಿಗೆ ಸುತ್ತಾಡಿದರೂ ಆಧಾರ್‌ ಕಾರ್ಡ್‌ ಪಡೆಯಲು ಸಾಧ್ಯವಾಗಿಲ್ಲ.

ತಾಳೆ ಆಗದ ಬೆರಳಚ್ಚು:

ಆಧಾರ್‌ ಕಾರ್ಡ್‌ ಪಡೆದ ಅನೇಕರಿಗೆ ಬೆರಳಚ್ಚು ತಾಳೆ ಆಗುತ್ತಿಲ್ಲ. ಆಧಾರ್‌ ಕಡ್ಡಾಯಗೊಳಿಸಿದ ಯೋಜನೆಗಳ ಪ್ರಯೋಜನ ಪಡೆಯಲು ಇವರಿಗೆ ಸಾಧ್ಯವಾಗುತ್ತಿಲ್ಲ. ಆಧಾರ್‌ ನೋಂದಣಿ ಕೇಂದ್ರಗಳಿಗೆ ಲಗ್ಗೆ ಇಡುವವರಲ್ಲಿ ಇವರ ಪಲೇ ಹೆಚ್ಚು.

‘ಆಶ್ರಯ ಮನೆ’ ಯೋಜನೆಯ ಅನುದಾನ ಪಡೆಯುವಲ್ಲಿ ಬೆರಳಚ್ಚು ಹೊಂದಾಣಿಕೆಯಾಗದ ಸಮಸ್ಯೆಗೆ ಸಿಲುಕಿದವರು ಕುಡುಪನಹಳ್ಳಿಯ ಗಂಗಾಧರ. ಮೊದಲ ಎರಡು ಕಂತುಗಳ ಅನುದಾನ ಪಡೆದಿರುವ ಇವರಿಗೆ ಮೂರನೇ ಕಂತಿನ ಹಣ ಪಡೆಯಲು ಬ್ಯಾಂಕಿನಲ್ಲಿ ಈ ತೊಡಕು ಎದುರಾಗಿದೆ. 36 ಕಿ.ಮೀ ದೂರದ ಗ್ರಾಮದಿಂದ ನಸುಕಿನಲ್ಲಿ ಚಿತ್ರದುರ್ಗಕ್ಕೆ ಬರಲು ಬಸ್‌ ವ್ಯವಸ್ಥೆ ಇಲ್ಲ. ಹೀಗಾಗಿ, ರಾತ್ರಿಯೇ ನಗರಕ್ಕೆ ಬಂದು ಆಧಾರ್‌ ಕೇಂದ್ರದ ಎದುರು ವಾಸ್ತವ್ಯ ಹೂಡಿದ್ದರು.

ಸರ್ವರ್‌ ಸಮಸ್ಯೆ:

ತಾಲ್ಲೂಕು ಕಚೇರಿ, ನಾಡ ಕಚೇರಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಆಧಾರ್‌ ಕಾರ್ಡ್‌ ಪಡೆಯಲು ಅವಕಾಶವಿತ್ತು. ಆದರೆ, ಈ ನೀತಿಯನ್ನು ಸರ್ಕಾರ ಈಚೆಗೆ ಬದಲಾಯಿಸಿದೆ. ರಾಷ್ಟ್ರೀಕೃತ ಬ್ಯಾಂಕ್‌, ಅಂಚೆ ಕಚೇರಿ ಹಾಗೂ ತಾಲ್ಲೂಕು ಕಚೇರಿಗಳಲ್ಲಿ ಮಾತ್ರ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸಮಸ್ಯೆ ಇನ್ನಷ್ಟು ಸಂಕೀರ್ಣಗೊಂಡಿದೆ.

‘ಆಧಾರ್‌ ತಿದ್ದುಪಡಿ ಹಾಗೂ ನೂತನ ಕಾರ್ಡ್‌ ಪಡೆಯಲು ಸರ್ವರ್‌ ಸಮಸ್ಯೆ ಎದುರಾಗಿದೆ. ನಿತ್ಯ ಗರಿಷ್ಠ 25 ಜನರಿಗೆ ಮಾತ್ರ ಸೇವೆ ಒದಗಿಸಲು ಸಾಧ್ಯವಿದೆ. ಹೀಗಾಗಿ, ಮೊದಲು ಬಂದವರಿಗೆ ಮಾತ್ರ ಆದ್ಯತೆ ನೀಡುತ್ತೇವೆ. ಟೋಕನ್‌ ಪಡೆಯದವರು ಮರುದಿನ ಕೇಂದ್ರಕ್ಕೆ ಧಾವಿಸಿ ಸೇವೆ ಪಡೆಯಬಹುದು’ ಎನ್ನುತ್ತಾರೆ ಎಸ್‌ಬಿಐ ಬ್ಯಾಂಕ್‌ ಆಧಾರ್‌ ನೋಂದಣಿ ಕೇಂದ್ರದ ಮಂಜುನಾಥ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT