ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗರ್‌ಹುಕುಂ ಅರ್ಜಿ ಸಲ್ಲಿಕೆ ಅವಧಿ ಹೆಚ್ಚಳ: ಆರ್. ಅಶೋಕ

ಆಡಳಿತ ಸೌಧ ಉದ್ಘಾಟಿಸಿದ ಸಚಿವ ಆರ್. ಅಶೋಕ
Last Updated 11 ಆಗಸ್ಟ್ 2022, 5:07 IST
ಅಕ್ಷರ ಗಾತ್ರ

ಮೊಳಕಾಲ್ಮುರು: ‘ಭೂಮಿಯನ್ನು ಉಳುವವನಿಗೇ ಅದರ ಒಡೆತನ ನೀಡುವ ಯೋಜನೆಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಅರ್ಹ ಜಮೀನುಗಳ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.

ಪಟ್ಟಣದಲ್ಲಿ ಬುಧವಾರ ನೂತನ ತಾಲ್ಲೂಕು ಆಡಳಿತ ಸೌಧ ಲೋಕಾರ್ಪಣೆ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಮೂದು ಆಗದ ಹಟ್ಟಿ, ತಾಂಡಾ, ಹಾಡಿ, ಕುರುಬರ ಹಟ್ಟಿ ಸೇರಿದಂತೆ ಪ್ರತಿಯೊಂದು ಜನವಸತಿಯನ್ನೂ ಉಪನೋಂದಣಾಧಿಕಾರಿ ಕಚೇರಿ ಮೂಲಕ ನೋಂದಣಿ ಮಾಡುವ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಹಲವು ದಶಕಗಳಿಂದ ನನೆಗುದಿಗೆ ಬಿದ್ದಿರುವ ಕಂದಾಯ ಗ್ರಾಮ ಬೇಡಿಕೆ ಕಾರ್ಯರೂಪಕ್ಕೆ ಬರಲಿದೆ. ರಾಜ್ಯದಲ್ಲಿ ಇಂತಹ 3 ಸಾವಿರ ಗ್ರಾಮಗಳನ್ನು ಗುರುತಿಸಲಾಗಿದ್ದು, ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ಪ್ರಥಮ ಹಂತದಲ್ಲಿ ಇಡೀ ಜಿಲ್ಲೆಯನ್ನು ಕಂದಾಯ ವ್ಯಾಪ್ತಿಗೆ ತರಲು ಸಿದ್ಧತೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯಲ್ಲೂ ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದು, ಜಿಲ್ಲಾಧಿಕಾರಿ ಒಂದೂವರೆ ತಿಂಗಳು ಸಮಯ ಕೇಳಿದ್ದಾರೆ’ ಎಂದು ಹೇಳಿದರು.

‘ಈ ಯೋಜನೆಯಿಂದ ಪೋಷಕರು ಮಕ್ಕಳಿಗೆ ಕಾನೂನು ಬದ್ಧ ನಿವೇಶನ, ಮನೆ, ಹೊಲವನ್ನು ನೀಡಲು ಸಾಧ್ಯವಾಗಲಿದೆ. ಆಸ್ತಿಗೆ ಮೌಲ್ಯ ದೊರೆಯುವ ಜತೆಗೆ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಅನುಕೂಲವಾಗಲಿದೆ. ಬಗರ್ ಹುಕುಂ ಯೋಜನೆಯಲ್ಲಿ ಅರ್ಜಿ ಸಲ್ಲಿಕೆ ಅವಧಿ ಮುಕ್ತಾಯವಾಗಿದ್ದು, ಸಚಿವ ಬಿ. ಶ್ರೀರಾಮುಲು ಸೇರಿದಂತೆ ಹಲವರು ಕಾಲಾವಕಾಶ ಹೆಚ್ಚಳಕ್ಕೆ ಮನವಿ ಮಾಡಿರುವ ಕಾರಣ ಒಂದು ವರ್ಷ ಹೆಚ್ಚಳ ಮಾಡಲಾಗುವುದು. ಈ ಬಗ್ಗೆ ಬರಲಿರುವ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾವ ಸಲ್ಲಿಸಲಾಗುವುದು’ ಎಂದರು.

‘ಉತ್ತಮ, ಕಳಂಕ ರಹಿತ, ಶೀಘ್ರ ಸೌಲಭ್ಯ ಸಿಗಲಿ ಎಂಬ ನಿಟ್ಟಿನಲ್ಲಿ ಎಲ್ಲ ಕಡೆ ಆಡಳಿತ ಸೌಧಗಳನ್ನು ನಿರ್ಮಿಸಲಾಗುತ್ತಿದೆ. ಅಧಿಕಾರಿಗಳು ಇದನ್ನು ಅರ್ಥ ಮಾಡಿಕೊಂಡು ಜನರನ್ನು ಅಲೆದಾಡಿಸದೇ ಕೆಲಸ ಮಾಡಿಕೊಡಬೇಕು. ರಾಜ್ಯದ 144 ತಾಲ್ಲೂಕುಗಳಲ್ಲಿ ಆಡಳಿತ ಸೌಧ ನಿರ್ಮಿಸಲಾಗಿದ್ದು, ಈ ವರ್ಷ 20-30 ಹೊಸ ಕಟ್ಟಡಕ್ಕೆ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ನಿವೃತ್ತಿ ನಂತರ ಗೌರವ ಸಿಗುವಂತೆ ಕೆಲಸ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸಚಿವ ಅಶೋಕ ಕಿವಿಮಾತು
ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಚಿವ ಬಿ. ಶ್ರೀರಾಮುಲು, ‘2018 ರಲ್ಲಿ ನಾನು ನೀಡಿದ್ದ ಭರವಸೆಯಂತೆ ಮೊಳಕಾಲ್ಮುರು ಕ್ಷೇತ್ರದಲ್ಲಿ ಎಲ್ಲಾ ಅಭಿವೃದ್ಧಿಕಾರ್ಯಗಳನ್ನು ಮಾಡಿದ್ದೇನೆ. 2 ತಿಂಗಳ ಒಳಗೆ ತುಂಗಭದ್ರಾ ಹಿನ್ನೀರು ಕುಡಿಯುವ ನೀರಿನ ಯೋಜನೆ ಉದ್ಘಾಟನೆಯಾಗಲಿದೆ. ಕ್ಷೇತ್ರದಲ್ಲಿ ₹ 614 ಕೋಟಿ ವೆಚ್ಚದಲ್ಲಿ ಇದನ್ನು ಮಾಡಲಾಗಿದ್ದು, ಜತೆಗೆ ₹ 52 ಕೋಟಿ ವೆಚ್ಚದಲ್ಲಿ 128 ಜನವಸತಿಗೆ ಜಲಜೀವನ್ ಯೋಜನೆಯಡಿ ನಿರಂತರ ಶುದ್ಧ ಕುಡಿಯುವ ನೀರು ನೀಡಲು ಇಂದು ಶಂಕುಸ್ಥಾಪನೆ ಮಾಡಲಾಗಿದೆ’ ಎಂದರು.

‘ನಾನು ಶಾಸಕನಾಗಿ ಆಯ್ಕೆಯಾದ ನಂತರ ಮೊಳಕಾಲ್ಮುರು ಕ್ಷೇತ್ರಕ್ಕೆ ₹ 2,000 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ. ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಕಾರ್ಯ ಶೀಘ್ರ ಆರಂಭವಾಗಲಿದೆ. ₹ 30 ಕೋಟಿ ವೆಚ್ಚದ ಮುಖ್ಯರಸ್ತೆ ವಿಸ್ತರಣೆ, ಭದ್ರಾ ಮೂಲಕ ಕೆರೆ ತುಂಬಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ನಮ್ಮದು ಮನೆ ಬಾಗಿಲಿಗೆ ಸೌಲಭ್ಯ ಕಲ್ಪಿಸುವ ಸರ್ಕಾರವಾಗಿ ಹೊರಹೊಮ್ಮಿದೆ’ ಎಂದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನೀಕೇರಿ, ಉಪ ವಿಭಾಗಾಧಿಕಾರಿ ಆರ್. ಚಂದ್ರಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ. ಲಕ್ಷ್ಮಣ್, ಉಪಾಧ್ಯಕ್ಷೆ ಶುಭಾ ಪೃಥ್ವಿರಾಜ್, ರಾಜ್ಯ ಎಸ್‌ಟಿ ಆಯೋಗದ ಸದಸ್ಯ ಜಯಪಾಲಯ್ಯ, ಬಿಜೆಪಿ ಮಂಡಲಾಧ್ಯಕ್ಷರಾದ ಡಾ.ಪಿ.ಎಂ. ಮಂಜುನಾಥ್. ಇ. ರಾಮರೆಡ್ಡಿ, ರಾಮದಾಸ್, ಮುಖಂಡ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ, ತಹಶೀಲ್ದಾರ್ ಸುರೇಶ್ ಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಜಾನಕೀರಾಮ್ ಇದ್ದರು.

ಸಿದ್ದರಾಮಯ್ಯ ಅವರನ್ನು ಡಿಕೆಶಿ ಸೋಲಿಸಲಿದ್ದಾರೆ

‘2013ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಪರಿಶಿಷ್ಟ ಸಮುದಾಯದ ಮುಖಂಡ ಡಾ.ಜಿ. ಪರಮೇಶ್ವರ್ ಅವರನ್ನು ಚಾಣಾಕ್ಷತೆದಿಂದ ಸೋಲಿಸಿದ ಮಾದರಿಯಲ್ಲಿ ಈ ಬಾರಿ ಸಿದ್ದರಾಮಯ್ಯ ಅವರನ್ನು ಡಿ.ಕೆ. ಶಿವಕುಮಾರ್ ಸೋಲಿಸುವುದು ಖಚಿತ. ಕಾಂಗ್ರೆಸ್ ಅನ್ನು ಸೋಲಿಸಲು ಯಾರೂ ಬೇಕಾಗಿಲ್ಲ ಅವರ ನಾಯಕರೇ ಒಬ್ಬರಿಗೊಬ್ಬರು ಅಧಿಕಾರದ ಆಸೆಗಾಗಿ ಕಿತ್ತಾಡಿ ಸೋಲಿಸುತ್ತಾರೆ. 2023 ರಲ್ಲಿ ಮೊಳಕಾಲ್ಮುರು ಸೇರಿದಂತೆ ರಾಜ್ಯದಲ್ಲಿ 150 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ’ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು.

ಯಾರು ಗೆದ್ದರು ಎಂದು ಘೋಷಿಸಿದರೆ ಕಾಂಗ್ರೆಸ್‌ ಹೋಳು

ಕಾಂಗ್ರೆಸ್ ಒಂದು ಸಮಾವೇಶ ಮಾಡಿ ಬೀಗುತ್ತಿದೆ. ಬಿಜೆಪಿ ಮನಸ್ಸು ಮಾಡಿದರೆ ಪ್ರತಿ ಜಿಲ್ಲೆಯಲ್ಲೂ ಇಂತಹ ಸಮಾವೇಶ ಮಾಡುತ್ತದೆ. ಅತಿವೃಷ್ಟಿಯಿಂದ ರಾಜ್ಯ ಸಂಕಷ್ಟದಲ್ಲಿದೆ. ಇದು ಸಕಾಲವಲ್ಲ ಎಂದು ಸುಮ್ಮನಿದ್ದೇವೆ. ದೆಹಲಿಯಿಂದ ಬಂದಿದ್ದ ‘ಅಂಪೈರ್’ ಒಬ್ಬರು ಕಾಂಗ್ರೆಸ್ ಸಮಾವೇಶದಲ್ಲಿ ಯಾರು ಗೆದ್ದಿದ್ದಾರೆ ಎಂದು ಘೋಷಣೆ ಮಾಡಿಲ್ಲ. ಘೋಷಣೆ ಮಾಡಿದ ಮರುಕ್ಷಣವೇ ಕಾಂಗ್ರೆಸ್ ಇನ್ನಷ್ಟು ಹೋಳಾಗಲಿದೆ. ಕಾಂಗ್ರೆಸ್ ಇದ್ದರೆ ಬರ, ಬಿಜೆಪಿ ಇದ್ದಾಗ ಸಮೃದ್ಧಿ’ ಎಂದು ಈ ವರ್ಷದ ಮಳೆಗಾಲದಲ್ಲೂ ಸಾಬೀತಾಗಿದೆ ಎಂದು ಶ್ರೀರಾಮುಲು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT