ಮಂಗಳವಾರ, ಜನವರಿ 31, 2023
19 °C
ದಾಳಿಂಬೆ, ಹೀರೇಕಾಯಿ ಕೃಷಿಯಲ್ಲಿ ಮಾದರಿ ಸಾಧನೆ

ಬರಡು ಭೂಮಿ ಬಂಗಾರ ಮಾಡಿದ ಸುರೇಶ್

ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ಸಾಧನೆ ಮಾಡುವ ಛಲವಿದ್ದಲ್ಲಿ ಬರಡು ಭೂಮಿಯಲ್ಲೂ ಬಂಗಾರ ಬೆಳೆಯಬಹುದು ಎಂಬ ಮಾತಿಗೆ ತಕ್ಕಂತೆ ಸಾಧನೆ ಮಾಡಿದ್ದಾರೆ ತಾಲ್ಲೂಕಿನ ಮಠದ ಜೋಗಿಹಟ್ಟಿಯ ರೈತ ಸುರೇಶ್.

ಆಂಧ್ರಪ್ರದೇಶದ ಭೀಮಾವರಂನ ಸುರೇಶ್ ಕೃಷಿ ಮಾಡಲೆಂದು ಈ ಭಾಗಕ್ಕೆ ಸಹೋದರರ ಜತೆ 15 ವರ್ಷಗಳ ಹಿಂದೆ ವಲಸೆ ಬಂದಿದ್ದಾರೆ. ಪಾಳು ಬಿದ್ದಿದ್ದ ಬರಡು ಭೂಮಿಯನ್ನು ಕೊಂಡು ಇಂದು ಮಾದರಿ ಕೃಷಿ ಪ್ರದೇಶವನ್ನಾಗಿ ಮಾಡಿರುವುದು ಅವರ ಕೃಷಿ ಪ್ರೇಮಕ್ಕೆ ಸಾಕ್ಷಿ. ಮಳೆ ಕೊರತೆಯಾದಲ್ಲಿ ನೀರಿನ ಸಮಸ್ಯೆ ಎದುರಾಗಬಾರದು ಎಂದು ಬೃಹತ್ ಕೃಷಿ ಹೊಂಡಗಳನ್ನು ಮಾಡಿಕೊಂಡಿರುವುದು ಅವರ ಜಾಣ್ಮೆಗೆ ಹಿಡಿದ ಕನ್ನಡಿಯಾಗಿದೆ.

22 ಎಕರೆ ಭೂಮಿಯನ್ನು ಹೊಂದಿರುವ ಅವರು 15 ಎಕರೆಯಲ್ಲಿ ದಾಳಿಂಬೆ ಮತ್ತು 4 ಎಕರೆಯಲ್ಲಿ ಹೀರೇಕಾಯಿ ನಾಟಿ ಮಾಡಿದ್ದಾರೆ. ‘15 ವರ್ಷಗಳಿಂದ ದಾಳಿಂಬೆ ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದೇನೆ. ಕೋವಿಡ್ ಸಮಯ ಹೊರತುಪಡಿಸಿದಲ್ಲಿ ದಾಳಿಂಬೆಯಲ್ಲಿ ಉತ್ತಮ ಲಾಭ ಕಂಡಿದ್ದೇನೆ’ ಎಂದರು.

‘ಈಗ ಗಿಡಗಳು ಕೊಳೆ ರೋಗಕ್ಕೆ ತುತ್ತಾಗುತ್ತಿದ್ದು, ತೆರವು ಮಾಡಿ ಹೊಸ ಗಿಡಗಳನ್ನು ನಾಟಿ ಮಾಡಲು ಸಿದ್ಧತೆ ಮಾಡಲಾಗುತ್ತಿದೆ. 3 ವರ್ಷಗಳಿಂದ ದಾಳಿಂಬೆಗೆ ರೋಗಬಾಧೆ ಜಾಸ್ತಿಯಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಇದನ್ನು ಹೊರತುಪಡಿಸಿದರೆ ಹೆಚ್ಚು ಲಾಭ ಮಾಡಿಕೊಟ್ಟಿರುವುದು ದಾಳಿಂಬೆ ಮಾತ್ರ’ ಎಂದರು.

‘ಪ್ರಸ್ತುತ 4 ಎಕರೆಯಲ್ಲಿ ಹೀರೇಕಾಯಿ ನಾಟಿ ಮಾಡಲಾಗಿದ್ದು, ಗಿಡಗಳು ದಷ್ಟಪುಷ್ಟವಾಗಿ ಬೆಳೆಯಲಿ ಎಂದು ಚಪ್ಪರ ಪದ್ಧತಿ ಅಳವಡಿಸಲಾಗಿದೆ. ಇದಕ್ಕೆ ಪ್ರತಿ ಎಕರೆಗೆ ₹ 3 ಲಕ್ಷ ಖರ್ಚು ಬರುತ್ತದೆ. ಪ್ರತಿ ಎಕರೆಗೆ 15 ಟನ್ ಇಳುವರಿ ಬರುವ ಅಂದಾಜಿತ್ತು. ಆದರೆ, ಹೆಚ್ಚು ತೇವಾಂಶ ಹಾಗೂ ಸರಿಯಾಗಿ ಹೂ ಕಟ್ಟದಿರುವುದು ತುಸು ಇಳುವರಿಯ ಮೇಲೆ ದುಷ್ಪರಿಣಾಮ ಬೀರುವ ಆತಂಕವಿದೆ. ಸದ್ಯ ಪ್ರತಿ ಕೆ.ಜಿ. ಹೀರೇಕಾಯಿಗೆ ₹ 20 ದರವಿದೆ. ಬಿಡಿಸುವ ಕಾರ್ಮಿಕರ ಕೂಲಿ, ಸಾಗಣೆ ವೆಚ್ಚ ಹೆಚ್ಚಿರುವ ಕಾರಣ ₹ 20ಕ್ಕೂ ಹೆಚ್ಚು ದರ ಸಿಕ್ಕಲ್ಲಿ ನಿರೀಕ್ಷಿತ ಲಾಭ ಕಾಣಬಹುದು’ ಎಂದರು.

‘ನಾನು ಬರಡು ಭೂಮಿಯನ್ನು ತುಂಬಾ ಕಷ್ಟಪಟ್ಟು ಹಸನು ಮಾಡಿ ಇಂದು ಯೋಗ್ಯ
ಕೃಷಿ ಭೂಮಿಯನ್ನಾಗಿ ಮಾಡಿದ್ದೇನೆ. ಯುವಕರು, ಹೊಸಬರು ಬರಿ ಆಸೆಯಿಂದ ಕೃಷಿ ಕ್ಷೇತ್ರಕ್ಕೆ ಬಂದರೆ ಸಾಲದು. ಶ್ರಮಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಆಸೆ ಪಟ್ಟು ಕೃಷಿ ಮಾಡಿದಲ್ಲಿ ನಷ್ಟ ಕಟ್ಟಿಟ್ಟ ಬುತ್ತಿ. ದಿನೇ, ದಿನೇ ಪ್ರದೇಶ ವಿಸ್ತರಣೆ ಮಾಡಿಕೊಂಡು ಕೃಷಿ ಮಾಡಿದಲ್ಲಿ ಅನುಭವದ ಜತೆಗೆ ಹಣ ಮಾಡಲು ಸಾಧ್ಯವಿದೆ’ ಎಂದು ಸುರೇಶ್
ಅನಿಸಿಕೆ ವ್ಯಕ್ತಪಡಿಸಿದರು.

ಕೃಷಿ ಯೋಗ್ಯ ಭೂಮಿ ಮಾಡಿದ್ದು ಸಾಧನೆ

ಸುರೇಶ್ ಅವರು ತೋಟದಲ್ಲಿ ಮುಂದಾಲೋಚನೆಯಾಗಿ ಬೃಹತ್ ಸಾಮರ್ಥ್ಯದ ಕೃಷಿ ಹೊಂಡಗಳನ್ನು ಮಾಡಿಕೊಂಡಿದ್ದಾರೆ. ಅನುಪಯುಕ್ತವಾಗಿದ್ದ ಪ್ರದೇಶವನ್ನು ಕೃಷಿ ಯೋಗ್ಯ ಭೂಮಿ ಮಾಡಿರುವುದು ಅವರ ಕೃಷಿ ಪ್ರೇಮಕ್ಕೆ ಸಾಕ್ಷಿಯಾಗಿದೆ. ತಾಲ್ಲೂಕಿನಲ್ಲಿರುವ ಉತ್ತಮ ತಾಂತ್ರಿಕ ತೋಟದಲ್ಲಿ ಇದೂ ಒಂದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು