ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಿ ಉಳುಮೆ ಶುರು: ರೈತರ ಜಮೀನಿನಲ್ಲಿ ಬೆಳ್ಳಕ್ಕಿಗಳ ಕಲರವ

ಆಹಾರಕ್ಕಾಗಿ ಬರುವ ಪಕ್ಷಿಗಳ ಹಿಂಡು
Last Updated 3 ಮೇ 2021, 2:48 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಹಲವೆಡೆ ರೈತರು ಪೂರ್ವ ಮುಂಗಾರಿನ ಮಾಗಿ ಉಳುಮೆ ಆರಂಭಿಸಿದ್ದು, ಬೆಳ್ಳಕ್ಕಿಗಳು ಆಹಾರ ಅರಸಿ ಜಮೀನಿಗೆ ಲಗ್ಗೆ ಇಡುತ್ತಿವೆ.

ಈ ಬಾರಿಯ ಕಡುಬೇಸಿಗೆಯ ಬಿಸಿಲಿನ ಝಳಕ್ಕೆ ಹಲವೆಡೆ ಕೆರೆಕಟ್ಟೆ, ಕೃಷಿಹೊಂಡ, ಚೆಕ್‌ಡ್ಯಾಂ, ಬ್ಯಾರೇಜ್‌, ಗೋಕಟ್ಟೆಗಳಲ್ಲಿ ಹನಿ ನೀರಿಲ್ಲದೇ ಬರಿದಾಗಿವೆ. ಇದರಿಂದಾಗಿ ಜಲಮೂಲಗಳಲ್ಲಿ ಪಕ್ಷಿಗಳಿಗೆ ಆಹಾರ ಹಾಗೂ ನೀರು ಸಮರ್ಪಕವಾಗಿ ಸಿಗುತ್ತಿಲ್ಲ. ಹಲವೆಡೆ ಸರ್ಕಾರಿ ಜಮೀನು, ಅರಣ್ಯ ಪ್ರದೇಶ, ಗೋಮಾಳ ಒತ್ತುವರಿಯಾಗಿದೆ.

ಇದರಿಂದ ಪಕ್ಷಿ ಸಂಕುಲವೂ ಆಹಾರಕ್ಕಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಜಲತಾಣಗಳ ಅಂಗಳದಲ್ಲಿ ಕ್ರಿಮಿಕೀಟ, ಚಿಕ್ಕ ಚಿಕ್ಕ ಮೀನಿನ ಮರಿ ತಿಂದು ಬದುಕುತ್ತಿದ್ದ ಬೆಳ್ಳಕ್ಕಿಗಳು ಈಗ ರೈತರ ಜಮೀನಿಗೆ ಧಾವಿಸುತ್ತಿರುವುದು ಪಕ್ಷಿ ಪ್ರಿಯರ ಗಮನ ಸೆಳೆಯುತ್ತಿದೆ. ಹೊಲ, ತೋಟಗಳಲ್ಲಿ ಕೃಷಿ ಕಾಯಕದಲ್ಲಿ ತೊಡಗಿರುವ ಅನ್ನದಾತರಿಗೂ ಅಚ್ಚರಿಯನ್ನುಂಟು ಮಾಡುತ್ತಿದೆ.

ಮೂರ್ನಾಲ್ಕು ದಿನಗಳ ಹಿಂದೆ ತಾಲ್ಲೂಕಿನ ಹಲವೆಡೆ ಅಶ್ವಿನಿ ಮಳೆ ಸುರಿದಿದ್ದು ಜಮೀನುಗಳು ಹದವಾಗಿವೆ. ಇದರಿಂದಾಗಿ ಹಲವು ರೈತರು ಪೂರ್ವ ಮುಂಗಾರು ಹಂಗಾಮಿನ ಮಾಗಿ ಉಳುಮೆ ಆರಂಭಿಸಿದ್ದಾರೆ. ಎತ್ತು, ಹಸು ಹಾಗೂ ಟ್ರ್ಯಾಕ್ಟರ್‌ ನೇಗಿಲು, ಕಂಟ್ರಿ, ಕುಂಟೆಯಂತಹ ಕೃಷಿ ಸಾಧನ ಬಳಸಿ ಮಾಗಿ ಬೇಸಾಯ ಮಾಡಿದ್ದಾರೆ.

ಮಾಗಿ ಉಳುಮೆ ಮಾಡುತ್ತಿದ್ದಂತೆ ಭೂಮಿಯಿಂದ ಮೇಲೇಳುವ ಎರೆಹುಳು, ಮಿಡತೆ ಸೇರಿ ಇನ್ನಿತರ ಕೀಟಗಳನ್ನು ಜಮೀನಿಗೆ ಹಿಂಡುಗಟ್ಟಲೇ ಬರುವ ಬೆಳ್ಳಕ್ಕಿಗಳು ಆಯ್ದು ತಿನ್ನುತ್ತಿವೆ. ಬೇಸಾಯ ಮುಗಿಯುವವರೆಗೂ ಜಮೀನಿನಲ್ಲಿಯೇ ಸುತ್ತಾಡುತ್ತಿರುತ್ತವೆ. ಕೊರೊನಾ ಸೋಂಕಿನ 2ನೇ ಅಲೆ ವ್ಯಾಪಿಸುತ್ತಿರುವ ಕಾರಣ ಶಾಲಾ–ಕಾಲೇಜಿಗೆ ರಜೆ ಇದೆ. ಇದರಿಂದಾಗಿ ಕೆಲವೆಡೆ ಮಕ್ಕಳು ಕೃಷಿ ಕಾಯಕಕ್ಕೆ ನೆರವಾಗಲು ಜಮೀನಿಗೆ ಹೋಗುತ್ತಿದ್ದಾರೆ. ಜಮೀನಿಗೆ ಗುಂಪು, ಗುಂಪಾಗಿ ಬರುವ ಬೆಳ್ಳಕ್ಕಿಗಳನ್ನು ನೋಡಿ ಸಂಭ್ರಮಿಸುತ್ತಿದ್ದಾರೆ ಎನ್ನುತ್ತಾರೆ ರೈತ ಕುಮಾರಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT