ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ನಿಧಿ ವಶಕ್ಕೆ ವಿರೋಧ

ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕರ ಪ್ರತಿಭಟನೆ
Last Updated 18 ಡಿಸೆಂಬರ್ 2018, 12:11 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಮೀಸಲಾಗಿರುವ ₹ 42 ಸಾವಿರ ಕೋಟಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಸಮೀಪದ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕರ್ನಾಟಕವೂ ಸೇರಿ ದೇಶದ ಎಲ್ಲ ರಾಜ್ಯದ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ₹ 42 ಸಾವಿರ ಕೋಟಿ ನಿಧಿ ಇದೆ. ಇದನ್ನು ಕಾರ್ಮಿಕರ ಕಲ್ಯಾಣಕ್ಕೆ ಮಾತ್ರ ಬಳಸಿಕೊಳ್ಳಲು ಸಾಧ್ಯವಿದೆ. ವಿಶೇಷ ನೀತಿಯೊಂದನ್ನು ರೂಪಿಸಿ ನಿಧಿಯನ್ನು ವಶಕ್ಕೆ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

‘ಕಾರ್ಮಿಕರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿಲ್ಲ. ಬಹುಮಹಡಿ ಕಟ್ಟಡ, ರಸ್ತೆ, ಸೇತುವೆ ನಿರ್ಮಾಣ ಸೇರಿದಂತೆ ವಿವಿಧೆಡೆಗಳಿಂದ ಸೆಸ್‌ ಮೂಲಕ ಸಂಗ್ರಹವಾದ ಹಣ ನಿಧಿಯಲ್ಲಿದೆ. ಹೆಸರು ನೋಂದಣಿ ಸಂದರ್ಭದಲ್ಲಿ ಕಾರ್ಮಿಕರು ನೀಡಿದ ಶುಲ್ಕವೂ ನಿಧಿಗೆ ಸಂದಾಯವಾಗಿದೆ. ಈ ಹಣವನ್ನು ಕಾರ್ಮಿಕರ ಏಳಿಗೆಗೆ ಬಳಸುವ ಬದಲು ಅನ್ಯ ಕಾರ್ಯಕ್ಕೆ ಉಪಯೋಗಿಸಲು ಮುಂದಾಗಿರುವುದು ಖಂಡನೀಯ’ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕೆ.ಗೌಸ್‌ಪೀರ್ ಆಕ್ರೋಶ ವ್ಯಕ್ತಪಡಿಸಿದರು.

‘ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ಹಣವನ್ನು ಕಟ್ಟಡ ಕಾರ್ಮಿಕರಿಗೆ ಮಾತ್ರ ಬಳಕೆ ಮಾಡುವಂತೆ ಸುಪ್ರೀಂ ಕೋರ್ಟ್‌ ಈಗಾಗಲೇ ನಿರ್ದೇಶನ ನೀಡಿದೆ. ಸಾಮಾಜಿಕ ಸುರಕ್ಷತೆಯ ನೆಪದಲ್ಲಿ ನಿಧಿಗೆ ಕೈಹಾಕಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ರಾಜ್ಯದಲ್ಲಿಯೂ ಸುಮಾರು ₹ 7 ಸಾವಿರ ಕೋಟಿ ಹಣವಿದೆ. ಬಂಡವಾಳಶಾಹಿ ಪರ ನೀತಿ ರೂಪಿಸುವಲ್ಲಿ ಉತ್ಸುಕವಾಗಿರುವ ಕೇಂದ್ರ ಸರ್ಕಾರ, ಬಡವರು ಹಾಗೂ ಶ್ರಮಿಕರನ್ನು ಶೋಷಣೆ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಕಲ್ಯಾಣ ಮಂಡಳಿಯಲ್ಲಿ ಹೆಸರು ನೋಂದಾಯಿಸಿರುವ 60 ವರ್ಷ ಮೇಲ್ಪಟ್ಟ ಕಟ್ಟಡ ಕಾರ್ಮಿಕರಿಗೆ ಮಾಸಿಕ ₹ 1 ಸಾವಿರ ಪಿಂಚಣಿ ನೀಡಲಾಗುತ್ತಿದೆ. ಕಟ್ಟಡ ಕಾಮಗಾರಿ ನಿರ್ವಹಣೆಯ ವೇಳೆ ಸಂಭವಿಸಿದ ಅಪಘಾತದಲ್ಲಿ ಶಾಶ್ವತ ಅಂಗವಿಕಲತೆಗೆ ತುತ್ತಾದವರಿಗೂ ಪಿಂಚಣಿ ಸೌಲಭ್ಯವಿದೆ. ಅನಾರೋಗ್ಯದಿಂದ ಬಳಲುತ್ತಿರುವ ಕಾರ್ಮಿಕರಿಗೂ ಈ ನಿಧಿ ನೆರವಾಗುತ್ತಿದೆ. ಮನೆ ನಿರ್ಮಾಣ ಹಾಗೂ ಖರೀದಿಗೆ ₹ 2 ಲಕ್ಷದವರೆಗೂ ಸಹಾಯಧನ ನೀಡುವ ಸೌಲಭ್ಯವಿದೆ. ಕಲ್ಯಾಣ ನಿಧಿ ಕೇಂದ್ರದ ವಶವಾದರೆ, ಈ ಸೌಲಭ್ಯಗಳು ಸ್ಥಗಿತಗೊಳ್ಳು ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕಟ್ಟಡ ಕಾರ್ಮಿಕರ ಅಸೋಷಿಯೇಷನ್‌ ಮುಖಂಡರಾದ ಷೇಕ್‌ ಕಲೀಂ, ಬಿ.ಸಿ.ಭಾಸ್ಕರಾಚಾರಿ, ನಾಗರಾಜ್ ಬಿ.ದುರ್ಗ, ನಾಗರಾಜ ಆಚಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT