ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದಲ್ಲಿ ವಾಜಪೇಯಿ ಬಡಾವಣೆ ನಿರ್ಮಾಣ

Last Updated 8 ಫೆಬ್ರುವರಿ 2018, 9:52 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಉಪ್ಪಳ್ಳಿ– ಇಂದಾವರ ಗ್ರಾಮಗಳ ರೈತರ ಸಹಭಾಗಿತ್ವದಲ್ಲಿ ಉಪ್ಪಳ್ಳಿ ಸಮೀಪ ಎ.ಬಿ.ವಾಜ ಪೇಯಿ ಬಡಾವಣೆ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದ್ದು, ಒಂದು ವರ್ಷದಲ್ಲಿ ಬಡಾವಣೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ಸಯ್ಯದ್‌ ಹನೀಫ್‌ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2008–09ನೇ ಸಾಲಿನಲ್ಲಿ ವಾಜಪೇಯಿ ವಸತಿ ಯೋಜನೆ ರೂಪಿಸಲಾಗಿತ್ತು. ನಿವೇಶನ ಬೇಡಿಕೆ ಸಮೀಕ್ಷೆಯಲ್ಲಿ ಒಟ್ಟು 7,954 ನಿವೇಶನಾಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದಾರೆ. ಉಪ್ಪಳ್ಳಿ–ಇಂದಾವರ ಗ್ರಾಮಗಳ ರೈತರ ಸಹಭಾಗಿತ್ವದಲ್ಲಿ 40:60 ಅನುಪಾತದಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನಿಸಿ 2011 ಮಾರ್ಚ್‌ 30ರಂದು ಪ್ರಸ್ತಾವ ಸಲ್ಲಿಸಲಾಗಿತ್ತು. 2012ರ ಡಿಸೆಂಬರ್‌ 22ರಂದು ವಸತಿ ಯೋಜನೆಗೆ ₹ 160.42 ಕೋಟಿಗೆ ಅನುಮೋದನೆ ನೀಡಿದೆ’ ಎಂದರು.

‘ನಾಗಾರ್ಜುನ ಕನ್‌ಸ್ಟ್ರಕ್ಷನ್‌ ಕಂಪನಿಗೆ (ಎನ್‌ಸಿಸಿ) ನಿರ್ಮಾಣ ಹೊಣೆ ನಿರ್ವಹಿಸುತ್ತಿದೆ. 80x50, 40x30, 20x30 ಅಡಿ ವಿಸ್ತೀರ್ಣದ ನಿವೇಶನಗಳು ಇವೆ. ಒಟ್ಟು 2,591 ನಿವೇಶನಗಳಿದ್ದು, ಈ ಪೈಕಿ ರೈತರಿಗೆ 1,036 (ಶೇ 40) ಹಾಗೂ ಪ್ರಾಧಿಕಾರಕ್ಕೆ 1,555 (ಶೇ 60) ಹಂಚಿಕೆ ಮಾಡಲಾಗಿದೆ. ಯೋಜನೆಯ ಅನುಷ್ಠಾನಕ್ಕೆ ಅನುದಾನ ಸಂಗ್ರಹ ನಿಟ್ಟಿನಲ್ಲಿ ಸಾರ್ವಜನಿಕರಿಂದ ನಿವೇಶನದ ಪ್ರಾರಂಭಿಕ ಠೇವಣಿ ಶೇ 10 ಮೊತ್ತದೊಂದಿಗೆ ಅರ್ಜಿ ಆಹ್ವಾನಿಸಲಾಗಿತ್ತು’ ಎಂದರು.

‘ಯೋಜನೆ ಕಾರಣಾಂತರಗಳಿಗೆ ನನೆಗುದಿಗೆ ಬಿದ್ದಿತ್ತು. ಕಳೆದ ಫೆಬ್ರುವರಿಯಿಂದ ಬಡಾವಣೆ ನಿರ್ಮಾಣ ಕೆಲಸವನ್ನು ಚುರುಕುಗೊಳಿಸಲಾಗಿದೆ. ಸೆಪ್ಟೆಂಬರ್‌ನಿಂದ ಕಾಮಗಾರಿಯನ್ನು ಮತ್ತಷ್ಟು ತ್ವರಿತವಾಗಿ ಮಾಡಲಾಗುತ್ತಿದೆ. ಈಗಾಗಲೇ 768 ನಿವೇಶನಗಳನ್ನು ಲಾಟರಿ ಮೂಲಕ ಹಂಚಿಕೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಉಳಿಕೆ 510 ನಿವೇಶನಗಳನ್ನು ಶೇ 10 ಪ್ರಾರಂಭಿಕ ಠೇವಣಿಯೊಂದಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 2018ರ ಫೆಬ್ರುವರಿ 15 ಕೊನೆ ದಿನ. ಪ್ರಕ್ರಿಯೆ ಮುಗಿದ ನಂತರ, ಲಾಟರಿ ಎತ್ತುವ ಮೂಲಕ ಉಳಿಕೆ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು’ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಭೀಮನಿಡಿ ಮಾತನಾಡಿ, ‘ಈ ಬಡಾವಣೆಯು ಒಟ್ಟು 195 ಎಕರೆ ವಿಸ್ತೀರ್ಣ ಇದೆ. ರೈತರೊಂದಿಗೆ ಒಪ್ಪಂದ (ಎಂಒಯು) ಮಾಡಿಕೊಂಡು ಬಡಾವಣೆ ನಿರ್ಮಾಣ ಆರಂಭಿಸಲಾಗಿದೆ. ಒಳಚರಂಡಿ, ರಸ್ತೆ, ಪಾರ್ಕು ಮೊದಲಾ ದವನ್ನು ವ್ಯವಸ್ಥಿತವಾಗಿ ರೂಪಿಸಲು ಆದ್ಯ ಗಮನ ಹರಿಸಲಾಗಿದೆ’ ಎಂದರು.

‘ಬಡವಾಣೆ ಅಭಿವೃದ್ಧಿಗೆ ನಾಗಾರ್ಜುನ ಕನ್‌ಸ್ಟ್ರಕ್ಷನ್‌ ಕಂಪನಿಗೆ ಈವರೆಗೆ ₹ 18.5 ಕೋಟಿ ಬಿಡುಗಡೆ ಮಾಡಲಾಗಿದೆ. ನಿವೇಶನಗಳಿಗೆ ಸರ್ಕಾರಿ ದರ ನಿಗದಿಪಡಿಸಲಾಗಿದೆ. ಬಡಾವಣೆ ಅಭಿವೃದ್ಧಿಗೆ ಕೆನರಾ ಬ್ಯಾಂಕಿನಿಂದ ಶೇ 8.8 ಬಡ್ಡಿದರದಲ್ಲಿ ₹ 50 ಕೋಟಿ ಸಾಲ ಪಡೆಯಲು ಪ್ರಾಧಿಕಾರ ನಿರ್ಧರಿಸಿದೆ. 2019ರ ಮಾರ್ಚ್‌ ಹೊತ್ತಿಗೆ ಬಡಾವಣೆ ನಿರ್ಮಾಣ ಪೂರ್ಣಗೊಳ್ಳಲಿದೆ’ ಎಂದು ಹೇಳಿದರು. ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಚಂದ್ರು, ಎಚ್.ಡಿ.ತಮ್ಮಯ್ಯ, ತರೇಸಾ, ಶ್ರೀನಿವಾಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT