ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಅದ್ದೂರಿಯಾಗಿ ಸಾಗಿದ ‘ಭೀಮಯಾತ್ರೆ’

ಮೊಳಗಿದವು ‘ಜೈ ಭೀಮ್‌’ ಘೋಷಣೆ – ಕೋಟೆನಾಡಲ್ಲಿ ಅಂಬೇಡ್ಕರ್‌ ಜಯಂತಿ ಸಂಭ್ರಮ
Last Updated 15 ಏಪ್ರಿಲ್ 2022, 2:50 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 131 ನೇ ಜನ್ಮ ದಿನಾಚರಣೆ ಅಂಗವಾಗಿ ನಗರದಲ್ಲಿ ಗುರುವಾರ ‘ಭೀಮಯಾತ್ರೆ’ ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ಸಾಗಿತು.

ಇದೇ ಮೊದಲ ಬಾರಿಗೆ ಕೋಟೆನಾಡಿನಲ್ಲಿ ಅಂಬೇಡ್ಕರ್‌ ಜಯಂತಿಯನ್ನು ಡಾ.ಬಿ.ಆರ್‌.ಅಂಬೇಡ್ಕರ್‌ ಜನ್ಮ ದಿನಾಚರಣೆ ಸಮಿತಿ ವಿಶೇಷವಾಗಿ ಆಯೋಜಿಸುವ ಮೂಲಕ ಹೊಸ ಭಾಷ್ಯ ಬರೆಯಿತು. ಕಳೆದ ಕೆಲ ದಿನಗಳಿಂದ ಸಮಿತಿ ನಿರಂತರ ಸಂಘಟನೆ ಮಾಡುವ ಮೂಲಕ ‘ಭೀಮಯಾತ್ರೆ’ಯನ್ನು ಅರ್ಥಪೂರ್ಣಗೊಳಿಸಿತು.

ಯಾತ್ರೆ ಅಂಗವಾಗಿ ಇಡೀ ನಗರವನ್ನು ನೀಲಿ ಬಣ್ಣದ ಬಟ್ಟೆಯಿಂದ ಸಿಂಗರಿಸಲಾಗಿತ್ತು. ನಗರದ ಗಾಂಧಿ ವೃತ್ತ, ಒನಕೆ ಓಬವ್ವ ವೃತ್ತ, ಅಂಬೇಡ್ಕರ್‌ ವೃತ್ತ ಸೇರಿದಂತೆ ನಗರದ ಪ್ರಮುಖ ವೃತ್ತಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ಬೆಳಿಗ್ಗೆಯಿಂದಲೇ ನಗರದಲ್ಲಿ ಜಯಂತಿಯ ಸಂಭ್ರಮ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿತ್ತು. ಜಿಲ್ಲಾಡಳಿತದಿಂದ ಅಂಬೇಡ್ಕರ್‌ ಭಾವಚಿತ್ರದ ಮೆರವಣಿಗೆ, ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕನಕ ವೃತ್ತದಲ್ಲಿ ಡಾ.ಅಂಬೇಡ್ಕರ್‌ ಭಾವಚಿತ್ರದ ‘ಭೀಮಯಾತ್ರೆ’ಗೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌ ವಿದ್ಯುಕ್ತ ಚಾಲನೆ ನೀಡಿದರು.

ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು ‘ಜೈ ಭೀಮ್‌’ ಘೋಷಣೆ ಕೂಗುತ್ತಾ ಕುಣಿದು ಕುಪ್ಪಳಿಸಿದರು. ಅಂಬೇಡ್ಕರ್‌ಗೆ ಜಯವಾಗಲಿ, ಜೈ ಅಂಬೇಡ್ಕರ್ ಎಂಬ ಘೋಷಣೆಗಳು ಮೆರವಣಿಗೆ
ಯಲ್ಲಿ ಮೊಳಗಿದವು. ಕನಕ ವೃತ್ತದಿಂದ ಹೊಳಲ್ಕೆರೆ ರಸ್ತೆ ಮಾರ್ಗವಾಗಿ ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತ, ಎಸ್‌ಬಿಐ ವೃತ್ತದಿಂದ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಮೆರವಣಿಗೆ ಸಾಗಿ ಅಂಬೇಡ್ಕರ್‌ ವೃತ್ತದ ಸಮೀಪ ಅಂತ್ಯವಾಯಿತು.

ಮೆರವಣಿಗೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್‌ ಅನುಯಾಯಿಗಳು, ರಾಜಕೀಯ ಮುಖಂಡರು, ದಲಿತ ಹೋರಾಟಗಾರರು, ಸಾಹಿತಿಗಳು, ವಿದ್ಯಾರ್ಥಿಗಳು, ನೌಕರರು ಸೇರಿದಂತೆ ಸಕಲ ಜಾತಿ ಧರ್ಮದವರು ಭಾಗವಹಿಸಿದ್ದರು. ಜಾನಪದ ಕಲಾಮೇಳ, ತಮಟೆ ವಾದ್ಯ, ಖಾಸಬೇಡರ ಪಡೆ, ಲಂಬಾಣಿ ನೃತ್ಯ ಹಾಗೂ ಡಿಜೆ ಸದ್ದಿಗೆ ಯುವ ಸಮುದಾಯ ಸಂಭ್ರಮದಿಂದ ಕುಣಿದು ಹರ್ಷ ವ್ಯಕ್ತಪಡಿಸಿತು.

ಅಂಬೇಡ್ಕರ್‌ ವೃತ್ತದಲ್ಲಿ ಹಾಕಿದ್ದ ವರ್ಣರಂಜಿತ ಬೃಹತ್‌ ವೇದಿಕೆಯಲ್ಲಿ ಬೆಂಗಳೂರಿನ ಭೂಮಿತಾಯಿ ಬಳಗ ಹಾಗೂ ಶಿವಮೊಗ್ಗದ ಕಲಾದ್ರಿ ಮೆಲೋಡೀಸ್‌ ತಂಡದಿಂದ ಕ್ರಾಂತಿಗೀತೆಗಳ ಗಾಯನ ಯುವ ಸಮುದಾಯಕ್ಕೆ ಸ್ಫೂರ್ತಿ ತುಂಬಿತು.

ಮೆರವಣಿಗೆಯಲ್ಲಿ ಭಾಗವಹಿಸಿದ್ದ ಬಹುತೇಕರು ‘ಭೀಮಯಾತ್ರೆ’ಯ ರಥದ ಮುಂದೆ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಾಲ್ಕೈದು ಗಂಟೆ ಸಾಗಿದ ಮೆರವಣಿಗೆ ಚಿತ್ರದುರ್ಗ ನೆಲದಲ್ಲಿ ಹೊಸ ಅಲೆ ಸೃಷ್ಟಿಸಿತು.

ನಗರಸಭೆ ಮಾಜಿ ಅಧ್ಯಕ್ಷರಾದ ಕಾಂತ್‌ರಾಜ್‌, ಎಚ್.ಸಿ.ನಿರಂಜನಮೂರ್ತಿ,ಮಾಜಿ ಸದಸ್ಯ ಕುಮಾರ್‌, ವಕೀಲರಾದ ನರಹರಿ, ರವೀಂದ್ರ, ಬ್ಯಾಲಹಾಳ್‌ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬ್ಯಾಲಹಾಳ್‌ ಜಯಪ್ಪ,ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್‌ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪು ಖಾಸಿಂ ಆಲಿ, ಡಾ.ಬಿ.ಆರ್‌.ಅಂಬೇಡ್ಕರ್‌ ಜನ್ಮ ದಿನಾಚರಣೆ ಸಮಿತಿ ಸಂಘಟಕ ಶರಣಪ್ಪ ಸೇರಿದಂತೆ ನೂರಾರು ಮುಖಂಡರು ಇದ್ದರು.

ಮೆರವಣಿಗೆಯುದ್ದಕ್ಕೂ ಮಜ್ಜಿಗೆ ವಿತರಣೆ
ಮಧ್ಯಾಹ್ನ ಬಿಸಿಲಿನಲ್ಲಿ ಪ್ರಾರಂಭವಾದ ಮೆರವಣಿಗೆಗೆ ಸಾವಿರಾರು ಜನರ ಭಾಗವಹಿಸಿದ್ದರಿಂದ ದಾರಿಯುದ್ದಕ್ಕೂ ಸಂಘ ಸಂಸ್ಥೆಗಳು ಮಜ್ಜಿಗೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು.

ಚಿತ್ರದುರ್ಗ ಜಿಲ್ಲಾ ಮುಸ್ಲಿಂ ವಕೀಲರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ಮಜ್ಜಿಗೆ ವಿತರಣೆ ಮಾಡಲಾಗಿತ್ತು. ಈ ಕಾರ್ಯಕ್ಕೆ ಸರ್ವ ಧರ್ಮದವರು ಕೈ ಜೋಡಿಸಿ ನಾವೇಲ್ಲ ಒಂದೇ ಎಂಬ ಸಂದೇಶವನ್ನು ಸಾರಿದರು.

ಜತೆಯಾದ ತಿಪ್ಪಾರೆಡ್ಡಿ, ಎಸ್‌ಕೆಬಿ
ಕನಕ ವೃತ್ತದಲ್ಲಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌ ಜತೆಯಾಗಿ ಮೆರವಣಿಗೆಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಬಹು ವರ್ಷಗಳ ಬಳಿಕ ಈ ಇಬ್ಬರು ಒಂದೇ ವೇದಿಯಲ್ಲಿ ನಗುತ್ತಾ ಕಾಣಿಸಿಕೊಂಡಿದ್ದರಿಂದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು. ಯಾತ್ರೆಗೆ ಚಾಲನೆ ನೀಡಿದ ಬಳಿಕ ಎಸ್‌.ಕೆ.ಬಸವರಾಜನ್‌ ಜನರ ನಡುವೆ ಹೋಗಿ ಹೆಜ್ಜೆ ಹಾಕಿದರು. ಇವರು ಹೆಜ್ಜೆ ಹಾಕುತ್ತಿದ್ದಂತೆ ಯುವ ಸಮುದಾಯ ಸಂಭ್ರಮಿಸಿತು.

ಸಂವಿಧಾನ ಬದಲಾವಣೆ ಅಸಾಧ್ಯ
ಚಿತ್ರದುರ್ಗ: ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಅಂತಹ ಪ್ರಯತ್ನಕ್ಕೆ ಮುಂದಾದರೆ ದೇಶದಲ್ಲಿ ರಕ್ತಪಾತವಾಗುತ್ತದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಎಚ್ಚರಿಕೆ ನೀಡಿದರು. ಭೀಮಯಾತ್ರೆ ಬಳಿಕ ಅಂಬೇಡ್ಕರ್ ಪ್ರತಿಮೆ ಬಳಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂವಿಧಾನ ಬದಲಾವಣೆ ಮಾತುಗಳು ಕೇವಲ ಊಹಾಪೋಹ. ಸಮಾಜದ ಎಲ್ಲ ಸಮುದಾಯದ ಆಶಾಕಿರಣವಾಗಿದ್ದ ಅಂಬೇಡ್ಕರ್ ಅವರು ಬಡತನ ನಿವಾರಿಸುವ ಪ್ರಯತ್ನ ಮಾಡಿದರು. ಅವರ ಆಶಯದಂತೆ ಸರ್ಕಾರಗಳು ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮಂತ್ರವನ್ನು ಅಂಬೇಡ್ಕರ್ ನೀಡಿದ್ದಾರೆ. ಶೋಷಿತ ಸಮುದಾಯಕ್ಕೆ ಈ ಮಂತ್ರವೇ ಭಗವದ್ಗೀತೆ ಇದ್ದಂತೆ. ನಿಷ್ಠೆಯಿಂದ ಎಲ್ಲರೂ ಇವನ್ನು ಪಾಲನೆ ಮಾಡಬೇಕು. ಮುಂದಿನ ವರ್ಷದಿಂದ ಇನ್ನೂ ಅದ್ದೂರಿಯಾಗಿ ಜಯಂತಿ ಆಚರಿಸಲಾಗುವುದು ಎಂದು ಹೇಳಿದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಮಾಜಿ ಸಂಸದರಾದ ಎಚ್.ಹನುಮಂತಪ್ಪ, ಬಿ.ಎನ್.ಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಮಾಜಿ ಸದಸ್ಯರಾದ ಬಿ.ಪಿ.ಪ್ರಕಾಶಮೂರ್ತಿ, ನರಸಿಂಹರಾಜು, ಯೋಗೇಶ್‌ಬಾಬು, ಡಿಸಿಸಿ ಮಾಜಿ ಅಧ್ಯಕ್ಷ ಫಾತ್ಯರಾಜನ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಇದ್ದರು.

ಮೀಸಲಾತಿ ವರ್ಗೀಕರಣದ ಮುಕ್ತ ಚರ್ಚೆ ಅಗತ್ಯ:ನಾರಾಯಣಸ್ವಾಮಿ
ಚಿತ್ರದುರ್ಗ:
ಮೀಸಲಾತಿ ವರ್ಗೀಕರಣ ಮಾದಿಗ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಸಮಾಜದ ಎಲ್ಲ ಜಾತಿಯ ಬಡವರಿಗೆ ಮೀಸಲಾತಿಯ ವರ್ಗೀಕರಣದ ಅಗತ್ಯವಿದೆ. ಮೀಸಲಾತಿಗೆ ಸಂಬಂಧಿಸಿ ದೇಶದ ಎಲ್ಲೆಡೆ ಮುಕ್ತವಾಗಿ ಚರ್ಚೆ ಆಗಬೇಕಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿ ಆಂಧ್ರಪ್ರದೇಶದ ಜನಪ್ರತಿನಿಧಿಯೊಬ್ಬರು ಪ್ರಶ್ನಿಸಿದ್ದರು. ಈ ಬಗ್ಗೆ ಸಂಸತ್ತಿನಲ್ಲಿ ಒಂದಷ್ಟು ಚರ್ಚೆ ನಡೆದಿದೆ. ಮೀಸಲಾತಿ ಬಗ್ಗೆ ಆಂಧ್ರಪ್ರದೇಶ, ಕೇರಳ ಸೇರಿದಂತೆ ದೇಶದ ಇತರ ರಾಜ್ಯಗಳು ಕೈಗೊಂಡ ನಿರ್ಣಯಗಳಿಗೆ ವ್ಯತಿರಿಕ್ತವಾದ ಅಭಿಪ್ರಾಯ ನ್ಯಾಯಾಲಯದಿಂದ ವ್ಯಕ್ತವಾಗಿದೆ’ ಎಂದರು.

‘ಮೀಸಲಾತಿ ವರ್ಗೀಕರಣ, ಒಳಮೀಸಲಾತಿಗೆ ಸಂಬಂಧಿಸಿ ಸಮಾಜದ ತಳಸಮುದಾಯ ಮಾತ್ರ ಮಾತನಾಡುತ್ತಿದೆ. ಜನಪ್ರತಿನಿಧಿಗಳು ಒಂದಷ್ಟು ಧ್ವನಿ ಎತ್ತುತ್ತಿದ್ದಾರೆ. ಸಮಾಜದ ಇತರ ಸಮುದಾಯದ ಈ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿದೆ. ಮಾಧ್ಯಮ ಕೂಡ ಸಮಾಜದ ಕಣ್ಣು ತೆರೆಸುವ ಕೆಲಸ ಮಾಡಿಲ್ಲ. ಡಾ.ಬಿ.ಆರ್‌. ಅಂಬೇಡ್ಕರ್‌ ರಚಿಸಿದ ಸಂವಿಧಾನದ ಆಶಯ ಈಡೇರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT