ದೇಶದ ಪ್ರತಿಯೊಬ್ಬರಿಗೂ ಅಂಬೇಡ್ಕರ್ ಸ್ಫೂರ್ತಿ: ಜಿಲ್ಲಾಧಿಕಾರಿ ವಿನೋತ್ ಪ್ರಿಯಾ

ಶುಕ್ರವಾರ, ಏಪ್ರಿಲ್ 26, 2019
33 °C
ಅಂಬೇಡ್ಕರ್ ಜಯಂತ್ಯುತ್ಸವ

ದೇಶದ ಪ್ರತಿಯೊಬ್ಬರಿಗೂ ಅಂಬೇಡ್ಕರ್ ಸ್ಫೂರ್ತಿ: ಜಿಲ್ಲಾಧಿಕಾರಿ ವಿನೋತ್ ಪ್ರಿಯಾ

Published:
Updated:
Prajavani

ಚಿತ್ರದುರ್ಗ: ಜೀವನದಲ್ಲಿ ಅನುಭವಿಸಿದ ನೋವು, ಅವಮಾನಗಳನ್ನೇ ಸಾಧನೆಯ ಮೆಟ್ಟಿಲಾಗಿಸಿಕೊಂಡು ವಿಶ್ವ ನಾಯಕರಾದ ಡಾ.ಬಿ.ಆರ್.ಅಂಬೇಡ್ಕರ್ ದೇಶದ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

‘ಸಾಮಾಜಿಕ, ಆರ್ಥಿಕ, ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದೇಶದ ಹೆಮ್ಮೆಯ ಪುತ್ರ ಅಂಬೇಡ್ಕರ್, ದೇಶಕ್ಕೆ ಉತ್ತಮ ಸಂವಿಧಾನ ರಚಿಸಿ ಕೊಡುಗೆಯಾಗಿ ನೀಡಿದರು’ ಎಂದು ಸ್ಮರಿಸಿಕೊಂಡರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿ. ಸತ್ಯಭಾಮ, ‘ಸ್ವತಂತ್ರ್ಯ ನಂತರ ದೇಶದಲ್ಲಿ ಮಹಿಳಾ ಸಮಾನತೆಗಾಗಿ ಮೊಟ್ಟ ಮೊದಲು ದನಿ ಎತ್ತಿದವರು ಅಂಬೇಡ್ಕರ್. ಆದ್ದರಿಂದ ರಾಷ್ಟ್ರದ ಎಲ್ಲ ಮಹಿಳೆಯರು ಅವರನ್ನು ಸ್ಮರಿಸಬೇಕು’ ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರೇಖಾ, ‘ಅಂಬೇಡ್ಕರ್ ಎಂದರೆ ಶಿಕ್ಷಣ, ಸಂಘಟನೆ, ಹೋರಾಟ. ದೇಶದೊಳಗೆ ಅವಕಾಶ ವಂಚಿತ ಸಮುದಾಯದಲ್ಲಿ ಜನಿಸಿದ ಅವರು ಶೈಕ್ಷಣಿಕ, ಸಾಮಾಜಿಕವಾಗಿ ಮಾಡಿದ ಸಾಧನೆ ಅನನ್ಯ’ ಎಂದು ಬಣ್ಣಿಸಿದರು.

‘ಸಮಾನತೆ, ಮಾನವೀಯತೆ ಗೌರವಿಸುವ ಅವರ ಚಿಂತನೆ ಎಲ್ಲರಿಗೂ ಆದರ್ಶವಾದುದು. ಶಾಲೆಯಲ್ಲಿ ಗೋಣಿ ಚೀಲದ ಮೇಲೆ ಕುಳಿತು ಶಿಕ್ಷಣ ಪಡೆದ ಅವರು ಪ್ರತಿಭೆ ಮೂಲಕವೇ ಸಂವಿಧಾನ ಶಿಲ್ಪಿಯಾದರು. ಅದರ ಮೂಲಕವೇ ಶ್ರೇಷ್ಠ ಪ್ರಜಾಪ್ರಭುತ್ವ ವ್ಯವಸ್ಥೆ ದೇಶಕ್ಕೆ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದರು.

‘ಚುನಾವಣೆಯಲ್ಲಿ ಪ್ರಜೆಗಳೇ ಪ್ರಭುಗಳಾಗಬೇಕು. ಆಳುವಂಥವರನ್ನು ಪ್ರಜೆಗಳೇ ನಿರ್ಭೀತರಾಗಿ ಆಯ್ಕೆ ಮಾಡಬೇಕು. ಯಾವುದೇ ಆದರ್ಶ ವ್ಯಕ್ತಿಯನ್ನು ಹಿಂಬಾಲಿಸದೆ, ಅವರ ತತ್ವ ಸಿದ್ಧಾಂತಗಳನ್ನು ಮಾತ್ರ ಒಪ್ಪಬೇಕು. ಶಿಕ್ಷಣದಿಂದ ಮಾತ್ರ ಎಲ್ಲ ರೀತಿಯ ಅಭಿವೃದ್ಧಿ ಸಾಧ್ಯ ಎಂಬ ಅವರ ನುಡಿಮುತ್ತುಗಳು ಸರ್ವಕಾಲಕ್ಕೂ ಪ್ರಸ್ತುತ’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ‘ಸಮಾಜದಲ್ಲಿನ ಪ್ರಸ್ತುತ ಯುವ ಪೀಳಿಗೆ ಅವರ ತತ್ವ, ಆದರ್ಶ ಮೈಗೂಡಿಸಿಕೊಂಡು ಸಮಾನತೆಯಿಂದ ಉತ್ತಮ ಕೆಲಸಗಳನ್ನು ಮಾಡಬೇಕು’ ಎಂದು ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ‌, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !